ಮೈಸೂರು: ‘ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ನೀಡಬೇಕು. ಇದರಿಂದ ಕೇಂದ್ರ ಸರ್ಕಾರಕ್ಕೆ ಗೌರವ ಬರುತ್ತದೆ’ ಎಂದು ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಆಗ್ರಹಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ನಗರದ ಹೊಸಮಠದ ನಟರಾಜ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಾಚ್ಯವಿದ್ಯಾ ಸಂಶೋಧನಾಲಯದ ವಿಶ್ರಾಂತ ನಿರ್ದೇಶಕ ಡಾ.ಎಸ್.ಶಿವರಾಜಪ್ಪ ರಚನೆಯ ‘ಮಾದೇಶ್ವರರ ಸಾಹಿತ್ಯಿಕ ನೆಲೆಗಳ ಹುಡುಕಾಟ’ ಮತ್ತು ‘ನಡೆದಾಡಿದ ದೇವರು’ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
‘ಸಿದ್ಧಗಂಗಾ ಮಠವು ಆಧುನಿಕ ಅನುಭವ ಮಂಟಪ. ಅಲ್ಲಿ ಯಡಿಯೂರು ಸಿದ್ದಲಿಂಗೇಶ್ವರ, ಗೋಸಲ ಸಿದ್ದೇಶ್ವರರು ತಪಸ್ಸು ಮಾಡಿದ್ದರು. ಮಾತೃಹೃದಯಿಯಾದ ಶಿವಕುಮಾರ ಸ್ವಾಮೀಜಿ ಮಕ್ಕಳಿಗೆ ಅನ್ನ, ಅಕ್ಷರ ದಾಸೋಹ ನೀಡುವುದೇ ತನ್ನ ಕಾಯಕ ಎಂದು ನಂಬಿದ್ದವರು. ಗ್ರಾಮಾಂತರ ಪ್ರದೇಶದಲ್ಲಿ ಶಾಲೆಗಳನ್ನು ಸ್ಥಾಪಿಸಿ, ಅಂಧಕಾರದಲ್ಲಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೆಳಕಾಗಿದ್ದರು’ ಎಂದು ಹೇಳಿದರು.
‘ಬಸವಣ್ಣನವರ ‘ಕಳಬೇಡ, ಕೊಲಬೇಡ’ ಎಂಬ ವಚನವು ಜೀವನ ಸಂವಿಧಾನವಾಗಿದ್ದು, ಎಲ್ಲ ಪಂಥ, ಧರ್ಮಗಳು ಅಂಗೀಕರಿಸಬೇಕಾದ ಸಪ್ತ ಸೂತ್ರವಿದು. ಆಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಹಿಂಸೆಯ ಹಿನ್ನೆಲೆಯಲ್ಲಿ ಈ ವಚನ ಹೆಚ್ಚು ಪ್ರಸ್ತುತವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಬುಡಕಟ್ಟು ಜನಾಂಗದ ನೋವು–ನಲಿವುಗಳನ್ನು ಮಹದೇಶ್ವರರಲ್ಲಿ ಕಾಣಬಹುದು. 15–16ನೇ ಶತಮಾನದಲ್ಲಿ ರಾಕ್ಷಸರ ಹಾವಳಿ ಇದ್ದಾಗ, ಅವರನ್ನು ಸಂಹಾರ ಮಾಡಿದವರು ಮಹದೇಶ್ವರರು. ಅವರ ಪರಿಚಯದ ಜತೆಗೆ ಸಾಂಸ್ಕೃತಿಕ, ಸಾಹಿತ್ಯಿಕ ನೆಲೆಗಳನ್ನೂ ಲೇಖಕರು ತಮ್ಮ ಕೃತಿಯಲ್ಲಿ ಪರಿಚಯಿಸಿದ್ದಾರೆ’ ಎಂದರು.
ಕೃತಿಗಳ ಕುರಿತು ವಿಶ್ರಾಂತ ಪ್ರಾಧ್ಯಾಪಕಿ ಸಿ.ಜಿ.ಉಷಾದೇವಿ ಮಾತನಾಡಿ, ‘ಮಹದೇಶ್ವರರು ಕಾಡಿನ ಜನರ ಸುಧಾರಣೆಗಾಗಿ ಶ್ರಮಿಸಿದ್ದರೆ, ಶಿವಕುಮಾರ ಸ್ವಾಮೀಜಿ ನಾಡಿನಲ್ಲಿ ಇದ್ದುಕೊಂಡು ಗ್ರಾಮೀಣರ ಸುಧಾರಣೆಗೆ ಕೆಲಸ ಮಾಡಿದ್ದರು. ಇಬ್ಬರೂ ಸಮಾನತೆಯ ಚೌಕಟ್ಟಿನಲ್ಲಿ ಸಮಾಜಮುಖಿ ಕೆಲಸ ಮಾಡಿದ್ದರು’ ಎಂದು ಬಣ್ಣಿಸಿದರು.
‘ಇಂದಿನ ಶಿಕ್ಷಣ ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ. ಆದರೆ, ಅದು ಸಾಲದು. ಭಾವನಾತ್ಮಕ ಅರಿವು ಸಹ ಮಕ್ಕಳಿಗೆ ಬರಬೇಕು’ ಎಂದರು.
ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಕಲಾಕೂಟ, ನಟರಾಜ ಮಹಿಳಾ ಪಿಯು ಕಾಲೇಜು, ನಟರಾಜ ಪ್ರತಿಷ್ಠಾನ ಹಾಗೂ ತಾರಾ ಪ್ರಿಂಟ್ಸ್ ಸಹಯೋಗ ನೀಡಿದ್ದವು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಳವರಹುಂಡಿ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಹೊಸ ಮಠದ ಅಧ್ಯಕ್ಷ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ತಾರಾ ಪ್ರಿಂಟ್ಸ್‌ನ ಕಾರ್ತಿಕ್ ಇದ್ದರು.
‘ಸಾಂಸ್ಕೃತಿಕ ಬದುಕಿಗೆ ಒತ್ತು’
‘ರಾಜ್ಯದಲ್ಲಿ 19 ಜಿಲ್ಲೆಗಳ 63 ತಾಲ್ಲೂಕುಗಳು ಗಡಿನಾಡ ವ್ಯಾಪ್ತಿಗೆ ಬರುತ್ತವೆ. ಅಲ್ಲಿನ ಮಕ್ಕಳ ಸಾಂಸ್ಕೃತಿಕ ಬದುಕನ್ನು ರೂಪಿಸಲು ಪ್ರಾಧಿಕಾರ ಕೆಲಸ ಮಾಡುತ್ತಿದೆ’ ಎಂದು ಡಾ.ಸಿ.ಸೋಮಶೇಖರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.