ಸೋಮವಾರ, ಮಾರ್ಚ್ 20, 2023
25 °C
ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್‌ ಮಾಹಿತಿ

ನೈರುತ್ಯ ರೈಲ್ವೆ ಮೈಸೂರು ವಿಭಾಗ: ಆದಾಯ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ನೈರುತ್ಯ ರೈಲ್ವೆ ಮೈಸೂರು ವಿಭಾಗವು ಈ ಆರ್ಥಿಕ ವರ್ಷದಲ್ಲಿ ಡಿಸೆಂಬರ್‌ ಅಂತ್ಯದವರೆಗೆ ಒಟ್ಟು ₹ 886.24 ಕೋಟಿ ಆದಾಯ ಗಳಿಸಿದ್ದು, ಹಿಂದಿನ ವರ್ಷಕ್ಕಿಂತ ಶೇ 3ರಷ್ಟು ಹೆಚ್ಚಾಗಿದೆ’ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್‌ ತಿಳಿಸಿದರು.

ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ನಗರದ ರೈಲ್ವೆ ಕ್ರೀಡಾ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಅವರು ಮಾತನಾಡಿದರು.

‘ಸರಕು ಸಾಗಣೆಯಲ್ಲಿ ವಿಭಾಗದಲ್ಲೂ ಸಾಧನೆ ಕಂಡಿದೆ. ₹557.34 ಕೋಟಿ ಆದಾಯದೊಂದಿಗೆ 6.53 ಮಿಲಿಯನ್ ಟನ್ ಸರಕನ್ನು ಲೋಡ್ ಮಾಡಿದ್ದು, ಇದು ಹಿಂದಿನ ವರ್ಷ (₹ 504.71 ಕೋಟಿಗಳ ಆದಾಯ ಮತ್ತು 6.49 ಮಿಲಿಯನ್‌ ಟನ್‌ ಲೋಡಿಂಗ್)ಕ್ಕೆ ಹೋಲಿಸಿದರೆ ಕ್ರಮವಾಗಿ ಶೇ 10ರಷ್ಟು ಮತ್ತು ಶೇ 1ರಷ್ಟು ಹೆಚ್ಚಾಗಿದೆ’ ಎಂದು ಮಾಹಿತಿ ನೀಡಿದರು.

‘ವಿಭಾಗವು ₹ 30.93 ಕೋಟಿಯನ್ನು ಇತರ ಮೂಲಗಳಿಂದ ಗಳಿಸಿದೆ. ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳುಗಳಲ್ಲಿ ವಿಭಾಗವು ₹ 37.81 ಕೋಟಿ ಉಳಿತಾಯವನ್ನು ಸಾಧಿಸಿದೆ’ ಎಂದು ಹೇಳಿದರು.

‘ವಿಭಾಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಒಂದು ತಿಂಗಳಿನಲ್ಲಿ ಸರಕು ಸಾಗಣೆಯಲ್ಲಿ ₹ 100 ಕೋಟಿ ಗಳಿಕೆಯನ್ನು ದಾಟಿದ್ದೇವೆ. ಡಿಸೆಂಬರ್‌ನಲ್ಲಿ ₹ 108.60 ಕೋಟಿ ಸಾಧನೆಯಾಗಿದೆ. ಸರಕಿನ ತೂಕದ ಪ್ರಕಾರವೂ ವಿಭಾಗವು ಪ್ರಗತಿ ಕಂಡಿದೆ. ಡಿಸೆಂಬರ್‌ನಲ್ಲಿ 0.988 ಮಿಲಿಯನ್ ಟನ್‌ಗಳನ್ನು ಸಾಧಿಸಿದ್ದು, ಯಾವುದೇ ಒಂದು ತಿಂಗಳಿನಲ್ಲಿ ಸಾಧಿಸಿದ ಅತ್ಯಧಿಕ ಲೋಡಿಂಗ್ ಇದಾಗಿದೆ. 2021ರ ಡಿಸೆಂಬರ್‌ನಲ್ಲಿ 0.918 ಮಿಲಿಯನ್ ಟನ್‌ಗಳಷ್ಟಿತ್ತು’ ಎಂದು ಮಾಹಿತಿ ನೀಡಿದರು.

‘ಡಿಸೆಂಬರ್ ಅಂತ್ಯದ ವೇಳೆಗೆ ಪ್ರಯಾಣಿಕರ ಆದಾಯವು ₹ 281.08 ಕೋಟಿಯಾಗಿದೆ. ಇದು ಹಿಂದಿನ ವರ್ಷಕ್ಕೆ (₹ 134.60 ಕೋಟಿ) ಹೋಲಿಸಿದರೆ ಶೇ 109ರಷ್ಟು ಹೆಚ್ಚಾಗಿದೆ’ ಎಂದು ಹೇಳಿದರು.

‘ವಿಭಾಗವು ಡಿಸೆಂಬರ್‌ವರೆಗೆ 23.61 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದೆ. ರೈಲುಗಳ ಸಮಯಪಾಲನೆಯ ಕಾರ್ಯಕ್ಷಮತೆಯೂ ಉತ್ತಮವಾಗಿದ್ದು, (ಶೇ 98.7ರಷ್ಟು) ಗಮನಾರ್ಹ ಸುಧಾರಣೆಯನ್ನು ಕಂಡಿದೆ’ ಎಂದು ತಿಳಿಸಿದರು.

‘ವಿಭಾಗದ 20 ನಿಲ್ದಾಣಗಳಲ್ಲಿ ‘ಸ್ವಯಂ ಘೋಷಣಾ ವ್ಯವಸ್ಥೆ’ಯನ್ನು ಪ್ರಾರಂಭಿಸಲಾಗಿದೆ. 35 ನಿಲ್ದಾಣಗಳಲ್ಲಿ ಎರಡೂ ಕಡೆಯ ‘ಎಲ್‌ಇಡಿ ಜಿಪಿಎಸ್’ ಗಡಿಯಾರಗಳನ್ನು ಅಳವಡಿಸಲಾಗಿದೆ. ರೈಲ್ವೆ ಮೇಲ್ಸೇತುವೆ ಅಥವಾ ಕೆಳಸೇತುವೆಗಳನ್ನು ನಿರ್ಮಿಸುವ ಮೂಲಕ ವಿಭಾಗದ ವ್ಯಾಪ್ತಿಯಲ್ಲಿರುವ ಐದು ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದು ಹಾಕಲಾಗಿದೆ’ ಎಂದು ವಿವರಿಸಿದರು.

‘ಹೊಸದುರ್ಗ-ಬೀರೂರು, ಚಿಕ್ಕಜಾಜೂರು-ತೋಳಹುಣಸೆ, ಮೈಸೂರು-ಚಾಮರಾಜನಗರ, ಬೀರೂರು-ಅರಸೀಕೆರೆ-ಸಂಪಿಗೆ ರೋಡ್ ಮತ್ತು ಬೀರೂರು-ಮಸರಹಳ್ಳಿ ಭಾಗಗಳ ನಡುವೆ 275 ಕಿಲೋಮೀಟರ್ ವಿದ್ಯುದ್ದೀಕರಣ ಪೂರ್ಣಗೊಂಡಿದೆ. ಇತರ ಕಡೆಗಳಲ್ಲಿ ಪ್ರಗತಿಯಲ್ಲಿದ್ದು, 2023ರ ಡಿಸೆಂಬರ್‌ ಅಂತ್ಯದೊಳಗೆ ಬ್ರಾಡ್ ಗೇಜ್ ಮಾರ್ಗಗಳನ್ನು ಸಂಪೂರ್ಣವಾಗಿ ವಿದ್ಯುದ್ದೀಕರಿಸುವ ಯೋಜನೆ ಇದೆ’ ಎಂದರು.

‘ಸಾಂಕ್ರಾಮಿಕ ರೋಗದ ಪ್ರತಿಕೂಲತೆಯ ಹೊರತಾಗಿಯೂ, ಎಲ್ಲ ಸಿಬ್ಬಂದಿಯ ಉತ್ತಮ ಪ್ರಯತ್ನದಿಂದ ಉತ್ತಮ ಸಾಧನೆಯಾಗಿದೆ’ ಎಂದು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು