ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿ.ನರಸೀಪುರ | ಅಂತರ್ಜಲ ಕುಸಿತ: ಒಣಗುತ್ತಿರುವ ಬೆಳೆ

ಮಳೆ ಪ್ರಮಾಣ ಕಡಿಮೆ, ಬರದಿಂದಾಗಿ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ
ಕೆ.ಮಹದೇವ್
Published 7 ಮೇ 2024, 6:23 IST
Last Updated 7 ಮೇ 2024, 6:23 IST
ಅಕ್ಷರ ಗಾತ್ರ

ತಿ.ನರಸೀಪುರ: ತಾಲ್ಲೂಕಿನಲ್ಲಿ ಬರದಿಂದಾಗಿ ಅಂತರ್ಜಲ ಕುಸಿತಗೊಂಡಿದ್ದು, ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಸಕಾಲಕ್ಕೆ ನೀರಿಲ್ಲದೆ ಬೆಳೆಗಳು ಒಣಗುತ್ತಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಮಳೆ ಪ್ರಮಾಣದ ಕುಸಿತದಿಂದಾಗಿ ತಾಲ್ಲೂಕಿನಲ್ಲಿ ಬರ ಕಾಡುತ್ತಿದೆ. ಕಳೆದ ಬಾರಿ ನಾಲೆಗೆ ನೀರು ನೀರು ಪೂರೈಕೆ ಮಾಡಲು ಸರ್ಕಾರ ಸಕಾಲದಲ್ಲಿ ಮಾಹಿತಿ ನೀಡದ ಕಾರಣ ಮುಂಗಾರಿನಲ್ಲಿ ಜನರು ಭತ್ತ ಬೆಳೆಯಲು ಮುಂದಾಗಲಿಲ್ಲ. ಇದರಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ.

ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಮಳೆ ಬಾರದ ಕಾರಣ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದೆ. ಬಿಸಿಲಿನ ತಾಪದಿಂದ ಭೂಮಿಯ ಹಸಿರು ಒಣಗಿ ಬಹುತೇಕ ಜಮೀನುಗಳು ಬರಡು ಭೂಮಿಯಂತಾಗಿದೆ. ಕೃಷಿ ಪಂಪ್ ಸೆಟ್ ನಂಬಿ ಬೆಳೆ ಹಾಕಿರುವ ರೈತರ ಜಮೀನುಗಳಲ್ಲಿನ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿದು, ಕಬ್ಬಿನ ಬೆಳೆ ಒಣಗುತ್ತಿದೆ.

ಸೋಸಲೆ ಹೋಬಳಿಯ ಕೋಣಗಳ್ಳಿ, ಹಲವಾರ, ಮುಡುಕನಪುರ, ಚಿದರಹಳ್ಳಿ, ಸೇರಿದಂತೆ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಫಸಲು ಬುಡದಿಂದ ಒಣಗಿ ಕೈಗೆ ಬಂದ ತುತ್ತು ಬಾಯಿಗಿಲ್ಲ. ನೀರಿಲ್ಲದೆ ಬೆಳೆ ಒಣಗುತ್ತಿವುದರಿಂದ ಸಾಲ ಮಾಡಿ ಫಸಲು ತೆಗೆಯಲು ಹೋದ ರೈತರಿಗೆ ಬರಸಿಡಿಲು ಬಡಿದಿದೆ. ಸಮರ್ಪಕ ವಿದ್ಯುತ್ ಕೊರತೆ ಒಂದೆಡೆಯಾದರೆ, ಅಂರ್ತಜಲ ಕುಸಿತ ಮತ್ತೊಂದೆಡೆ ರೈತರಿಗೆ ಶಾಪವಾಗಿ ಪರಿಣಮಿಸಿದೆ.

‘ಗ್ರಾಮದ ಆಸು ಪಾಸು ಸುಮಾರು 70-80 ಕೃಷಿ ಪಂಪ್ ಸೆಟ್ ಕೊಳವೆ ಬಾವಿಗಳಲ್ಲಿ 10-15ರಲ್ಲಿ ಮಾತ್ರ ಅಲ್ಪ ಪ್ರಮಾಣದ ನೀರು ಸಿಗುತ್ತಿದೆ. ಉಳಿದಂತೆ ಬಹುತೇಕ ಬಾವಿಗಳಲ್ಲಿ ನೀರು ಬತ್ತಿ ಹೋಗಿದೆ. ಬೆಳೆಗಳಿಗೆ ನೀರು ಸಿಗುತ್ತಿಲ್ಲ. ಸುಮಾರು 150 ಹೆಕ್ಟೇರ್‌ನಷ್ಟು ಕಬ್ಬಿನ ಬೆಳೆ ಒಣಗುತ್ತಿದೆ. ಇತ್ತೀಚಿಗೆ ಬಿದ್ದ ತುಂತುರು ಮಳೆ ಸ್ವಲ್ಪ ಭರವಸೆ ಮೂಡಿತಾದರೂ, ಇದೀಗ ಮಳೆ ಕಾಣದೆ ಮತ್ತೆ ರೈತರು ಕಂಗಲಾಗಿದ್ದಾರೆ’ ಎಂದು ಮುಡುಕುನಪುರದ ರೈತ ಮನುಕುಮಾರ್ ತಿಳಿಸಿದರು.

‘ತಾಲ್ಲೂಕಿನಲ್ಲಿ ಕಬ್ಬು ಬೆಳೆ ಒಣಗಿ ರೈತರು ಸಂಕಷ್ಟದಲ್ಲಿ ಇರುವುದರಿಂದ ಸರ್ಕಾರ ಕೂಡಲೆ ಜಮೀನುಗಳಲ್ಲಿ ಸಮೀಕ್ಷೆ ಮಾಡಿಸಿ ರೈತರಿಗೆ ಕಬ್ಬು ಬೆಳೆಯ ಸಂಪೂರ್ಣ ನಷ್ಟ ಪರಿಹಾರ ಕೊಡಬೇಕು’ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು ಮನವಿ ಮಾಡಿದ್ದಾರೆ.

ತಿ.ನರಸೀಪುರ ತಾಲ್ಲೂಕಿನ ಮುಡುಕಿನಪುರದಲ್ಲಿನ ರೈತರ ಜಮೀನಿನ ಕಬ್ಬು ನೀರಿಲ್ಲದೇ ಒಣಗಿರುವುದು
ತಿ.ನರಸೀಪುರ ತಾಲ್ಲೂಕಿನ ಮುಡುಕಿನಪುರದಲ್ಲಿನ ರೈತರ ಜಮೀನಿನ ಕಬ್ಬು ನೀರಿಲ್ಲದೇ ಒಣಗಿರುವುದು
ಮಳೆ ಬಾರದ ಕಾರಣ ಕೃಷಿ ಚಟುವಟಿಕೆ ಕುಂಠಿತ ಭೂಮಿಯ ಹಸಿರು ಒಣಗಿ ಜಮೀನುಗಳು ಬರಡು ಸಮರ್ಪಕ ವಿದ್ಯುತ್ ಕೊರತೆ ಒಂದೆಡೆ
ಕಬ್ಬು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಿ
‘ಕೊಳವೆ ಬಾವಿ ನೀರಿನ ಕುಸಿತದಿಂದಾಗಿ ನೂರಾರು ಎಕರೆ ಕಬ್ಬು ಒಣಗಿದೆ. ತಾಲ್ಲೂಕು ಆಡಳಿತ ಕೂಡಲೇ ಸಂಕಷ್ಟಕ್ಕೊಳಗಾದ ರೈತರಿಂದ ಮಾಹಿತಿ ಪಡೆದು. ಈ ಭಾಗದ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಪ್ರತಿನಿಧಿಗಳೊಂದಿಗೆ ಸಭೆ ಕರೆಯಬೇಕು. ಬೆಳೆ ನಷ್ಟದಿಂದ ನೊಂದಿರುವ ಕಬ್ಬು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ದೊರಕಿಸಲು ಅಗತ್ಯ ಕ್ರಮವಹಿಸಬೇಕು’ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡ ಚಿಕ್ಕಬಾಗಿಲು ನವೀನ್ ಕುಮಾರ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT