ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಯೋಜನೆಗಳು ಐದು ವರ್ಷವೂ ಚಾಲ್ತಿಯಲ್ಲಿರಲಿವೆ: ಸಿದ್ದರಾಮಯ್ಯ

Published 15 ಮಾರ್ಚ್ 2024, 12:44 IST
Last Updated 15 ಮಾರ್ಚ್ 2024, 12:44 IST
ಅಕ್ಷರ ಗಾತ್ರ

ಮೈಸೂರು: ನಮ್ಮ ಸರ್ಕಾರ ಜಾರಿಗೊಳಿಸಿರುವ ಎಲ್ಲ ಗ್ಯಾರಂಟಿ ಯೋಜನೆಗಳು ಐದು ವರ್ಷದವರೆಗೂ ಚಾಲ್ತಿಯಲ್ಲಿರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಜಿಲ್ಲಾಡಳಿತದಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಲೋಕಸಭೆ ಚುನಾವಣೆ ನಂತರ ಈ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂಬ ವಿರೋಧ ಪಕ್ಷದವರ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು. ನಮಗೆ ಐದು ವರ್ಷದವರೆಗೆ ಜನಾದೇಶದೊಂದಿಗೆ ಅಧಿಕಾರ ನೀಡಿದ್ದೀರಿ. ಬಿಜೆಪಿಯವರ ಆರೋಪಗಳಿಗೆ ಕಿವಿಗೊಡಬೇಡಿ. ಯಾವುದೇ ಸಂಶಯವನ್ನು ಇಟ್ಟುಕೊಳ್ಳಬೇಡಿ. ಲೋಕಸಭಾ ಚುನಾವಣೆಯಲ್ಲೂ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ’ ಎಂದು ಕೋರಿದರು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್ ಎಂದು ಮೋದಿ ಹೇಳುತ್ತಾರೆ. ಆದರೆ, ಅವರ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಡ್ಡಧಾರಿಗಳು, ಟೋಪಿ ಹಾಕಿದವರಿಗೆ ನಮ್ಮ ಕಚೇರಿಗೆ ಪ್ರವೇಶವಿಲ್ಲ ಎನ್ನುತ್ತಾರೆ. ಬಿಜೆಪಿಯ ಸಂಸದ ಅನಂತ್‌ಕುಮಾರ್‌ ಹೆಗಡೆ ಸಂವಿಧಾನವನ್ನು ಬದಲಿಸುವ ಮಾತುಗಳನ್ನು ಪದೇ ಪದೇ ಹೇಳುತ್ತಲೇ ಇರುತ್ತಾರೆ. ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆಯೇ, ಪಕ್ಷದಿಂದ ಅಮಾನತು ಮಾಡಿದ್ದಾರೆಯೇ? ಇದರ ಅರ್ಥವೇನು?’ ಎಂದು ಕೇಳಿದರು.

‘ಮೋದಿ ಹೇಳುವುದೆಲ್ಲವೂ ಸುಳ್ಳು. ಅವರ ಕಾರ್ಯಸೂಚಿಗಳನ್ನು ಮತ್ತೊಬ್ಬರಿಂದ ಹೇಳಿಸುತ್ತಾರೆ. ಸಂವಿಧಾನ ಇರಬಾರದು ಎಂಬುದು ಅವರ ಅಚಲವಾದ ನಂಬಿಕೆ ಹಾಗೂ ಬಿಜೆಪಿಯ ರಹಸ್ಯ ಕಾರ್ಯಸೂಚಿಯೂ ಹೌದು. ಸಂವಿಧಾನ ಜಾರಿಗೊಳಿಸುವುದು ಅವರಿಗೆ ಇಷ್ಟವಿಲ್ಲ’ ಎಂದು ದೂರಿದರು.

‘ಯುವನಿಧಿ ಯೋಜನೆಗೆ ಈವರೆಗೆ 5,651 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಯೋಜನೆಯಲ್ಲಿ ಅರ್ಹರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಅದನ್ನು 2 ವರ್ಷದ ನಂತರ ನಿಲ್ಲಿಸುತ್ತೇವೆ. ಈ ಮಧ್ಯೆ, ಆ ಫಲಾನುಭವಿಗಳೆಲ್ಲರಿಗೂ ಕೌಶಲ ತರಬೇತಿ ಕೊಡುತ್ತೇವೆ’ ಎಂದು ತಿಳಿಸಿದರು.

‘ಬಡವರ ಕೈಗೆ ದುಡ್ಡು ಕೊಡುವಂತಹ ಕೆಲಸವನ್ನು ನಾವು ಮಾಡುತ್ತಿದ್ದೇವೆ. ‘ಸಾರ್ವತ್ರಿಕ ಮೂಲ ಆದಾಯ’ ತತ್ವದ ಆಧಾರದ ಮೇಲೆ ಸೌಲಭ್ಯ ಒದಗಿಸುತ್ತಿದ್ದೇವೆ. ಇದನ್ನು ಸಹಿಸಲಾಗದ ಬಿಜೆಪಿಯವರು ಸುಳ್ಳುಗಳನ್ನು ಹೇಳುತ್ತಿದ್ದಾರೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT