ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸ ಪ್ರಸಾದ್‌ಗೆ ಕಂದಾಯ ಖಾತೆ ಕೊಡಬೇಕೇ? ಎಂದು ಕೇಳಿದ್ದೆ.. HC ಮಹದೇವಪ್ಪ

ಶನಿವಾರ ನಡೆದ ವಿ.ಶ್ರೀನಿವಾಸ ಪ್ರಸಾದ್‌ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Published 11 ಮೇ 2024, 14:01 IST
Last Updated 11 ಮೇ 2024, 14:01 IST
ಅಕ್ಷರ ಗಾತ್ರ

ಮೈಸೂರು: ‘ಶ್ರೀನಿವಾಸ ಪ್ರಸಾದ್ ಅವರಿಗೆ ಆರೋಗ್ಯ ಸರಿ ಇಲ್ಲ. ಅವರಿಗೆ ಕಂದಾಯ ಖಾತೆ ಕೊಡುವುದು ಬೇಕೇ ಎಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಿದ್ದೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತಿಳಿಸಿದರು.

ಶನಿವಾರ ನಡೆದ ವಿ.ಶ್ರೀನಿವಾಸ ಪ್ರಸಾದ್‌ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಗ ಯಾರನ್ನು ಸಚಿವರನ್ನಾಗಿ ಮಾಡಬೇಕು, ಯಾವ ಖಾತೆ ಕೊಡಬೇಕು ಎಂಬುದನ್ನು ಯಾವ ಹೈಕಮಾಂಡ್ ಅಥವಾ ಲೋ ಕಮಾಂಡ್ ಮಾಡಲಿಲ್ಲ. ನಾನು- ಸಿದ್ದರಾಮಯ್ಯ ಸೇರಿ ಮಾಡಿದ್ದೆವು. ಪ್ರಸಾದ್‌ ಹಿರಿಯರಿದ್ದಾರೆ. ಅವರಿಗೆ ಕಂದಾಯ ಖಾತೆ ಕೊಡೋಣ. ಅವರು ಮೈಸೂರು ಮತ್ತು ಚಾಮರಾಜನಗರದಲ್ಲಿ ಧ್ವನಿ ಮಾಡಲಿ. ನಾವು ರಾಜ್ಯದಾದ್ಯಂತ ಸಂಚರಿಸಿ ಕೆಲಸ ಮಾಡೋಣ’ ಎಂದು ಸಿದ್ದರಾಮಯ್ಯ ಹೇಳಿದ್ದರು’ ಎಂದು ಹೇಳಿದರು.

‘ಪ್ರಸಾದ್ ಸೈದ್ಧಾಂತಿಕ ನಿಲುವಿನಲ್ಲಿ ಗಟ್ಟಿತನ ಹೊಂದಿದ್ದವರು’ ಎಂದು ಸ್ಮರಿಸಿದರು.

‘ಸಾರ್ಥಕವಾದ ಪಯಣವನ್ನು ಅವರು ಮಾಡಿದ್ದಾರೆ. ಅವರ ಅಭಿಮಾನಿಗಳ ಅಭಿಲಾಷೆಯನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಲಿದೆ. ಈಗ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಅಂಬೇಡ್ಕರ್ ಕಟ್ಟಾ ಅಭಿಮಾನಿಗಳರೆಲ್ಲರೂ ಸ್ವಾಭಿಮಾನಿಗಳೇ. ಹೇಳುವುದೊಂದು, ಮಾಡುವುದು ಇನ್ನೊಂದಾದರೆ ಸ್ವಾಭಿಮಾನಿಯಾಗಲು ಸಾಧ್ಯವಿಲ್ಲ. ಸೈದ್ಧಾಂತಿಕ ನಿಲುವಿನಲ್ಲಿ ಗಟ್ಟಿತನ ಯಾರಲ್ಲಿ ಇರುತ್ತದೆಯೋ ಅವರು ಮಾತ್ರ ಸ್ವಾಭಿಮಾನಿಯಾಗಲು ಸಾಧ್ಯ. ಅದಕ್ಕೆ ಅಂಬೇಡ್ಕರ್ ಅವರು ಸ್ವಾಭಿಮಾನಿ ಅಲ್ಲದವರು ಬದುಕಿದ್ದು ಪ್ರಯೋಜನವಿಲ್ಲ ಎಂದಿದ್ದರು. ಅದಕ್ಕೆ ತಕ್ಕಂತೆ ಪ್ರಸಾದರು ಗಟ್ಟಿ ನಿಲುವಿನೊಂದಿಗೆ ಜೀವನ ನಡೆಸಿದರು’ ಎಂದು ನೆನೆದರು.

‘ಅವರಿಗೆ ಸಾತ್ವಿಕ ಸ್ವಾಭಾವದ ಸಿಟ್ಟು ಬಹಳಷ್ಟಿತ್ತು. ಅನ್ಯಾಯವನ್ನು ಸಹಿಸಿಕೊಳ್ಳದೆ ತಕ್ಷಣ ಪ್ರತಿಕ್ರಿಯಿಸುತ್ತಿದ್ದರು. ನಮ್ಮ ಸಮಾಜದಲ್ಲಿ ಇದ್ದಂತಹ ಬದುಕಿನ ಅಸ್ತವ್ಯಸ್ತತೆ, ತಾರತಮ್ಯ, ಪ್ರತ್ಯೇಕತವಾದಗಳು, ಮಾನವ ಹಕ್ಕುಗಳ ಉಲ್ಲಂಘನೆ ಸೇರಿದಂತೆ ಮನುವಾದದ ವಿರುದ್ಧದ ಸಿಟ್ಟನ್ನು ಹೊರಹಾಕುತ್ತಿದ್ದರು. ಅದರಲ್ಲಿ ಯಾವುದೇ ಸಮುದಾಯ, ವ್ಯಕ್ತಿಯನ್ನು ನಿಂದನೆ ಮಾಡುವಂಥ ಉದ್ದೇಶ ಇರಲಿಲ್ಲ’ ಎಂದು ಹೇಳಿದರು.

‘ನಾಯಕತ್ವ ಇಲ್ಲದ ಸಮುದಾಯ ಅನಾಥವಾಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ಅಂತಹ ನಾಯಕತ್ವವನ್ನು ಪ್ರಸಾದರು ನಿಭಾಯಿಸಿದ್ದರು. ಅವರ ಅಗಲಿಕೆಯ ಬಳಿಕೆ ಮುಂದಿನ ನಾಯಕ ಇಂಥವರೇ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ನಿಲುವು, ಗಟ್ಟಿತನ, ಸೈದ್ಧಾಂತಿಕ ಹಾಗೂ ಜನಪರವಾದ ವಿಚಾರದ ಮೂಲಕ ಸಮುದಾಯವನ್ನು ಗಟ್ಟಿಗೊಳಿಸುವುದು ನಾಯಕತ್ವವನ್ನು ರೂಪಿಸುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT