ಮೈಸೂರು: ನಗರದಲ್ಲಿ ಗುರುವಾರ ಬಿಜೆಪಿ ನಗರ ಮಂಡಲದಿಂದ ಆಯೋಜಿಸಿದ್ದ ಸದಸ್ಯತ್ವ ಅಭಿಯಾನಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ಬಳಿಕ ಮಾತನಾಡಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಪರವಾಗಿ ಕೆಲಸ ಮಾಡುತ್ತಿರುವ ಏಕೈಕ ಪಕ್ಷ ಬಿಜೆಪಿ. ದೇಶದ ಅಭಿವೃದ್ಧಿಯನ್ನೇ ಧ್ಯೇಯವಾಗಿ ಇಟ್ಟುಕೊಂಡು, ವಿಕಸಿತ ಹಾಗೂ ಸುಭದ್ರ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಮೋದಿ ಅವರ ಕೈ ಬಲಪಡಿಸಲು ಪಕ್ಷದ ಸದಸ್ಯರನ್ನು ಹೆಚ್ಚಿಸೋಣ’ ಎಂದರು.
ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ‘ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಒಂದು ವರ್ಷದ ಆಡಳಿತದಲ್ಲೇ ಮೂರು ಪ್ರಮುಖ ಹಗರಣದ ಆರೋಪಕ್ಕೆ ಗುರಿಯಾಗಿದೆ. ಹೀಗಾಗಿ ಜನರಿಗೆ ನಮ್ಮ ಪಕ್ಷದ ಅಗತ್ಯತೆಯ ಬಗ್ಗೆ ಸ್ಪಷ್ಟತೆಯಿದೆ. ಅಭಿಯಾನದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾದಷ್ಟು ಮುಂಬರುವ ಸ್ಥಳೀಯ ಚುನಾವಣೆ ಎದುರಿಸಲು ಸಹಕಾರಿಯಾಗಲಿದೆ’ ಎಂದು ಹೇಳಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ‘ಪ್ರತಿ ಬೂತ್‌ನಲ್ಲಿ 300 ಸದಸ್ಯತ್ವ ನೋಂದಣಿಯ ಗುರಿ ನೀಡಲಾಗಿದೆ. ನಗರಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಅಭಿಯಾನ ಯಶಸ್ವಿಗೊಳಿಸೋಣ. ಮನೆ– ಮನೆಗೆ ತೆರಳಿ ಸದಸ್ಯತ್ವ ನೋಂದಣಿ ಜೊತೆಗೆ ಮತದಾರರ ಪಟ್ಟಿ ಪರಿಷ್ಕರಣೆಯೂ ಮಾಡೋಣ’ ಎಂದು ಸಲಹೆ ನೀಡಿದರು.
ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ಬಿಜೆಪಿ ಕಚೇರಿ ಮುಂಭಾಗದ ರಸ್ತೆಯಲ್ಲೇ ಆಯೋಜಿಸಲಾಗಿತ್ತು. ರಸ್ತೆಯ ಎರಡೂ ಕಡೆಯಲ್ಲೂ ಬೆಳಿಗ್ಗೆ 10.30ರಿಂದ ಮಧ್ಯಾಹ್ನ ಸುಮಾರು 12.30ರವರೆಗೆ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿರ್ಬಂಧಿಸಲಾಗಿತ್ತು. ಮುಖಂಡರ ವಾಹನಗಳು ರಸ್ತೆ ಮಧ್ಯೆಯೇ ನಿಲುಗಡೆ ಮಾಡಿದ್ದರಿಂದ ಅದೇ ರಸ್ತೆಯಲ್ಲಿ ವಾಸವಿರುವ ನಿವಾಸಿಗಳೂ ವಾಹನದಲ್ಲಿ ತೆರಳಲು ಪರದಾಡಿದರು. ‘ಕಚೇರಿಯಲ್ಲೇ ಸಭಾಂಗಣವಿದ್ದರೂ ರಸ್ತೆಯಲ್ಲಿ ಕಾರ್ಯಕ್ರಮ ಮಾಡಿರುವುದರಿಂದ ನಾವು ಮಾರ್ಗ ಸುತ್ತು ಬಳಸಿ ಬರಬೇಕಾಗಿದೆ’ ಎಂದು ಸ್ಥಳೀಯರೊಬ್ಬರು ದೂರಿದರು.