ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಕೇಶವನಿಗೆ ‘ಗೀಚು ಬರಹ’ಗಾರರ ಕಾಟ!

ಯುನೆಸ್ಕೊ ಮಾನ್ಯತೆ ಗಳಿಸಿರುವ ಶಿಲ್ಪಕಲೆಯ ತಾಣದಲ್ಲಿ ‘ಸಂವೇದನೆ ಇಲ್ಲದ’ ಕೆಲಸ
Published 22 ಜೂನ್ 2024, 6:07 IST
Last Updated 22 ಜೂನ್ 2024, 6:07 IST
ಅಕ್ಷರ ಗಾತ್ರ

ಮೈಸೂರು: ವಿಶಿಷ್ಟ ಶಿಲ್ಪಕಲೆಯ ಸೊಬಗಿನ ಕಾರಣದಿಂದಾಗಿ ‘ಯುನೆಸ್ಕೊ’ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿ ಜಾಗತಿಕ ಮಾನ್ಯತೆ ಗಳಿಸಿರುವ ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶವ ದೇಗುಲದ ‘ಸಹಜ ಸೌಂದರ್ಯ’ಕ್ಕೆ ಧಕ್ಕೆ ತರುವ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತಿಲ್ಲ!

ಇತಿಹಾಸ ಪ್ರಸಿದ್ಧವಾದ ಈ ತಾಣ ವೀಕ್ಷಿಸಲು ಬರುವ ಕೆಲವು ಪ್ರವಾಸಿಗರು, ಅದರಲ್ಲೂ ಪ್ರೇಮಿಗಳು ಗೋಡೆಗಳ ಮೇಲೆ ‘ಸಾಹಿತ್ಯ’ ಗೀಚಿ ಅಥವಾ ಕೆತ್ತಿ ‘ಕುರುಹು’ ಉಳಿಸಿ ಹೋಗುತ್ತಿರುವುದರಿಂದ ಪಾರಂಪರಿಕ ತಾಣದ ಸೌಂದರ್ಯಕ್ಕೆ ಕುತ್ತು ಉಂಟಾಗುತ್ತಿದೆ. ಪಾರಂಪರಿಕ ‍ಪ್ರಜ್ಞೆ ಮರೆಯುವ ಕೆಲವರು, ತಮ್ಮ ‘ಬರಹ’ಗಳಿಗೆ, ನಿವೇದನೆಗೆ ಮತ್ತು ಖುಷಿಗೆ ಅಲ್ಲಿನ ಗೋಡೆ, ಕಂಬಗಳನ್ನು ‘ವೇದಿಕೆ’ಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯುವ ಕೆಲಸ ನಡೆಯುತ್ತಿಲ್ಲದಿರುವುದು ‘ಗೋಡೆ ಬರಹ’, ‘ಕಂಬ ಬರಹ’ಗಳು ಮುಂದುವರಿಯಲು ಕಾರಣವಾಗುತ್ತಿದೆ.

ಕಲೆಯ ಮೇಲೊಂದು ‘ಕಲೆ’: 12ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ ಈ ದೇಗುಲಕ್ಕೆ 2022ರ ಸೆ.16ರಂದು ಯುನೆಸ್ಕೊ ತಜ್ಞರ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿತ್ತು. ಟಿಯಾಂಗ್ ಕಿಯಾನ್ ಬೂನ್ ನೇತೃತ್ವದ ತಂಡಕ್ಕೆ ಇನ್ಫೊಸಿಸ್‌ ಫೌಂಡೇಶನ್‌ನ ಸುಧಾ ಮೂರ್ತಿ, ಭಾರತೀಯ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ರಾಜ್ಯ ಪ್ರಾಚ್ಯವಸ್ತು ಅಧಿಕಾರಿಗಳು ದೇವಾಲಯದ ಶಿಲ್ಪಕಲೆ, ಐತಿಹ್ಯ ಹಾಗೂ ಹೊಯ್ಸಳರ ಕಾಲದ ಶಿಲ್ಪಕಲೆ, ಕುಸುರಿ ಕೆತ್ತನೆಗಳ ಬಗ್ಗೆ ವಿವರ ನೀಡಿದ್ದರು. ಅದರ ರಚನೆ, ಗರ್ಭಗುಡಿ, ಪ್ರಾಂಗಣ, ಕೆತ್ತನೆ ಕುಸುರಿ ಸೇರಿದಂತೆ ಶಿಲ್ಪಕಲೆಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿದ್ದ ತಂಡ ಮೆಚ್ಚುಗೆ ವ್ಯಕ್ತಪಡಿಸಿತ್ತು. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿತ್ತು. ಅದಕ್ಕೆ, 2023ರ ಸೆ.19ರಂದು ಯುನೆಸ್ಕೊ ಮಾನ್ಯತೆ ನೀಡಿದೆ. ಇದರೊಂದಿಗೆ ಈ ತಾಣದ ಪ್ರಖ್ಯಾತಿ ವಿಶ್ವ ಮಟ್ಟದಲ್ಲಿ ಮತ್ತಷ್ಟು ಹೆಚ್ಚಾಗಿದೆ.

ಇಂತಹ ಮಹತ್ವದ ಶಿಲ್ಪಕಲೆಯ ಮೇಲೆ ಮತ್ತಷ್ಟು ‘ಕಲೆ’ಗಳು ಉಂಟಾಗುತ್ತಿರುವುದು ಪ್ರಜ್ಞಾವಂತರು ಹಾಗೂ ಪರಂಪರೆ ಕಾಪಾಡಿಕೊಳ್ಳಬೇಕು ಎಂದು ಬಯಸುವವರಲ್ಲಿ ಕಳವಳ ಮೂಡಿಸಿದೆ.

ತಡೆಯಲು ನಿರ್ಲಕ್ಷ್ಯ: ತನ್ನ ಇತಿಹಾಸವನ್ನು ಮೌನವಾಗಿ ಹೇಳುತ್ತಾ ನಿಂತಿರುವ ಶಿಲ್ಪಕಲೆಗಳು ‘ಕೈಬರಹ’ದಿಂದಾಗಿ ಅಂದಗೆಟ್ಟಿವೆ. ಸಂರಕ್ಷಿಸಲು ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸುತ್ತಿರುವುದು ಇತಿಹಾಸಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ. ವ್ಯಕ್ತಿಗಳ ಹೆಸರುಗಳು, ಜೋಡಿಗಳ ಹೆಸರುಗಳು, ಹೃದಯದ ಸಿಂಬಲ್, ಹೂವು ಹೀಗೆ... ಏನೇನೋ ಚಿತ್ರಗಳನ್ನು ‘ಕೆತ್ತುತ್ತಿರುವುದು’ ನಡೆಯುತ್ತಲೇ ಇದೆ. ಈ ಮೂಲಕ ಅಲ್ಲಿ ‘ಹೆಜ್ಜೆಗುರುತು’ ಮೂಡಿಸಿ ಹೋಗುವುದಕ್ಕೆ ಕೆಲವರು ಪ್ರಯತ್ನಿಸುತ್ತಿದ್ದಾರೆ.

ಈ ಪ್ರವಾಸಿ ತಾಣದಲ್ಲಿ ಪ್ರವೇಶ ದ್ವಾರದಲ್ಲಿ ಆನ್‌ಲೈನ್‌ನಲ್ಲೇ ಟಿಕೆಟ್‌ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಭದ್ರತಾ ಸಿಬ್ಬಂದಿ ಇರುತ್ತಾರೆ. ಬಿಟ್ಟರೆ ಒಳಗೆ ಯಾವುದೇ ಭದ್ರತೆಯ ವ್ಯವಸ್ಥೆ ಇಲ್ಲ. ಗೈಡ್‌ಗಳು ಮಾತ್ರ ಇರುತ್ತಾರೆ. ‘ಮುಟ್ಟಬೇಡಿ, ಬರೆಯಬೇಡಿ, ಕೆತ್ತಬೇಡಿ’ ಎಂದು ಹೇಳುವವರಾರೂ ಇಲ್ಲ. ಇದರಿಂದ, ‘ಅಂದಗೆಡು’ವಂತೆ ಆಗಿದೆ.

ಇಲ್ಲಿಗೆ ರಾಜ್ಯದ ವಿವಿಧ ಜಿಲ್ಲೆಗಳೊಂದಿಗೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಹಲವು ರಾಜ್ಯಗಳಿಂದ ಮತ್ತು ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಶಾಲೆ–ಕಾಲೇಜು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಬರುವುದೂ ಉಂಟು. ಬಂದವರು, ಅಲ್ಲಿನ ಶಿಲ್ಪಕಲೆಯ ಸೌಂದರ್ಯಕ್ಕೆ ಮಾರು ಹೋಗುತ್ತಾರೆ; ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಾರೆ. ಸ್ವಚ್ಛತೆ, ಉದ್ಯಾನದ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ. ಆದರೆ, ಇಲ್ಲಿನ ಶಿಲ್ಪಕಲೆಯ ಮೇಲೆ ‘ಸಾಹಿತ್ಯ’ ರಚನೆಗೆ ತಡೆ ಇಲ್ಲದಂತಾಗಿದೆ. ಬರವಣಿಗೆಯಲ್ಲಿ ಕನ್ನಡ, ಇಂಗ್ಲಿಷ್‌ ಎರಡೂ ಕಾಣಸಿಗುತ್ತಿವೆ!

ಪ್ರತಿಕ್ರಿಯೆಗೆ, ರಾಜ್ಯ ಪುರಾತತ್ವ  ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜ್ ಕರೆ ಸ್ವೀಕರಿಸಲಿಲ್ಲ.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶವ ದೇಗುಲದ ಕಂಬದ ಮೇಲೆ ‘ಗೀಚು ಬರಹಗಳು’ –  ಪ್ರಜಾವಾಣಿ ಚಿತ್ರ
ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶವ ದೇಗುಲದ ಕಂಬದ ಮೇಲೆ ‘ಗೀಚು ಬರಹಗಳು’ –  ಪ್ರಜಾವಾಣಿ ಚಿತ್ರ
ಸೋಮನಾಥಪುರದ ಚನ್ನಕೇಶವ ದೇಗುಲ ಯುನೆಸ್ಕೊ ಮಾನ್ಯತೆಯಿಂದ ಹೆಚ್ಚಿದ ಪ್ರವಾಸಿಗರು ರಕ್ಷಣೆಗೆ ಬೇಕಿದೆ ಸೂಕ್ತ ಅಗತ್ಯ ಕ್ರಮ
ನಾನೂ ಗಮನಿಸಿದ್ದೇನೆ. ಆದರೆ ಕ್ರಮ ಕೈಗೊಳ್ಳಲು ಅವಕಾಶವಿಲ್ಲ. ಪರಂಪರೆ ಇಲಾಖೆಯೇ ಮುತುವರ್ಜಿ ವಹಿಸಬೇಕು
ಎಂ.ಕೆ.ಸವಿತಾ, ಜಂಟಿ ನಿರ್ದೇಶಕಿ ಪ್ರವಾಸೋದ್ಯಮ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT