ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ | ಪ್ರಸ್ತಾವ ಸರ್ಕಾರದ ಮುಂದಿದೆ ಎಂದ ಎಚ್‌.ಕೆ.ಪಾಟೀಲ

Published 27 ಜನವರಿ 2024, 13:27 IST
Last Updated 27 ಜನವರಿ 2024, 13:27 IST
ಅಕ್ಷರ ಗಾತ್ರ

ಮೈಸೂರು: ‘ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣದ ಪ್ರಸ್ತಾವ ಸರ್ಕಾರದ ಮುಂದಿದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಆ ಯೋಜನೆ ಅನುಷ್ಠಾನಕ್ಕೆ ಪರ–ವಿರೋಧ ಅಭಿಪ್ರಾಯ ಕೇಳಿಬಂದಿರುವುದರಿಂದ ಸಾಧಕ– ಬಾಧಕಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಿದ ನಂತರ ತೀರ್ಮಾನಿಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರೊಂದಿಗೆ ಚರ್ಚಿಸಿ ಮುಂದುವರಿಯಲಾಗುವುದು’ ಎಂದು ಹೇಳಿದರು.

‘ಚಾಮುಂಡೇಶ್ವರಿ ದೇವಾಲಯದ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಲು ಕ್ರಮ ವಹಿಸಲಾಗಿದೆ. ‘ಪ್ರಸಾದ್‌’ ಯೋಜನೆಯಡಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ₹ 40 ಕೋಟಿ ಅನುದಾನದಲ್ಲಿ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುವುದು’ ಎಂದರು.

‘ಯುನೆಸ್ಕೊ’ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿರುವ ಸೋಮನಾಥಪುರ ಚೆನ್ನಕೇಶವ ದೇವಾಲಯಕ್ಕೆ ಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು. ಒಂದೇ ಬಾರಿಗೆ ಎಲ್ಲ ಸೌಕರ್ಯ ಕಲ್ಪಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಒದಗಿಸಲಾಗುವುದು. ಅಲ್ಲಿಗೆ ಬಸ್‌ ವ್ಯವಸ್ಥೆ ಇಲ್ಲವೇಕೆ ಎನ್ನುವ ಮಾಹಿತಿ ಇಲ್ಲ. ಕಾರ್ಯಾಚರಣೆ ನಡೆಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ‍ಪ್ರತಿಕ್ರಿಯಿಸಿದದರು.

‘ಜಗದೀಶ ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ನಷ್ಟವೇನಿಲ್ಲ. ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ತತ್ವ– ಸಿದ್ಧಾಂತ, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬೆಂಬಲಿಸುವವರು ಪಕ್ಷದಲ್ಲಿರುತ್ತಾರೆ. ಬಡವರನ್ನು ಮೇಲೆತ್ತುವ ಯೋಜನೆಗಳನ್ನು ವಿರೋಧಿಸುವವರು ಬಿಟ್ಟು ಹೋಗುತ್ತಾರೆ. ಸಿದ್ಧಾಂತ ಒಪ್ಪದವರು ಇದ್ದರೇನು, ಹೋದರೇನು? ಯಾವ ನಾಯಕರ ಮೇಲೂ ಕಣ್ಗಾವಲು ಇಡಲಾಗದು; ಸಿಐಡಿಯನ್ನು ಬಿಡಲಾಗದು’ ಎಂದು ಪ್ರತಿಕ್ರಿಯಿಸಿದರು.

‘ಶೆಟ್ಟರ್ ಪಕ್ಷ ತೊರೆದಿರುವುದರಿಂದ ಪರಿಣಾಮ ಬೀರುವುದಿಲ್ಲ‌. ಇಂದಿರಾಗಾಂಧಿ ಕಾಲದಲ್ಲಿ ಏನಾಯಿತು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತು. ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗ 17 ಶಾಸಕರು ಬಿಜೆಪಿ ಸೇರಿದರು. ಆದರೆ ಏನಾಯಿತು? ವಿಧಾನಸಭೆ ಚುನಾವಣೆಯಲ್ಲಿ ನಾವು 135 ಕ್ಷೇತ್ರಗಳಲ್ಲಿ ಗೆಲ್ಲಲಿಲ್ಲವೇ?’ ಎಂದು ಕೇಳಿದರು.

‘ಶಾಸಕ ಲಕ್ಷ್ಮಣ ಸವದಿ ಪಕ್ಷ ಬಿಡುವುದಿಲ್ಲ ಎಂದಿದ್ದಾರೆ. ಮಾತಿಗೆ ಬದ್ಧರಾಗಿರುತ್ತಾರೆ ಎಂಬ ನಂಬಿಕೆ ಇದೆ’ ಎಂದು ಪ್ರತಿಕ್ರಿಯಿಸಿದರು.

‘ಲೋಕಸಭೆ ಚುನಾವಣೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಮತ್ತೆ ಗೆಲ್ಲಿಸಿ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿರುವುದಿಲ್ಲ ಎನಿಸುತ್ತದೆ. ಮಾಧ್ಯಮದವರು ತಪ್ಪಾಗಿ ಗ್ರಹಿಸಿರಬಹುದು. ಅವರ ಹೇಳಿಕೆ ಗಮನಿಸಿ ನಂತರ ಪ್ರತಿಕ್ರಿಯಿಸುತ್ತೇನೆ’ ಎಂದು ಪಾಟೀಲ ಹೇಳಿದರು.

‘ಗ್ಯಾರಂಟಿ ಕಾರ್ಯಕ್ರಮಗಳಿಂದ ನಮ್ಮ ಶಕ್ತಿ ವೃದ್ಧಿಯಾಗಿದೆ. ಇದರಿಂದ ಹತಾಶರಾಗಿರುವ ಬಿಜೆಪಿಯವರು ಆಪರೇಷನ್‌ಗೆ ಮುಂದಾಗಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT