ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೇಡ, ಶ್ರದ್ಧಾಕೇಂದ್ರ ಪ್ರವಾಸೋದ್ಯಮಕ್ಕಲ್ಲ: ಪ್ರತಾಪ

Published 29 ಡಿಸೆಂಬರ್ 2023, 14:11 IST
Last Updated 29 ಡಿಸೆಂಬರ್ 2023, 14:11 IST
ಅಕ್ಷರ ಗಾತ್ರ

ಮೈಸೂರು: ‘ಚಾಮುಂಡಿ ಬೆಟ್ಟ ಶ್ರದ್ಧಾಕೇಂದ್ರವಾಗಿದ್ದು, ಪ್ರವಾಸೋದ್ಯಮಕ್ಕಾಗಿ ರೋಪ್‌ ವೇ ಮಾಡುವುದು ಸರಿಯಲ್ಲ’ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಇಲ್ಲಿ ಶುಕ್ರವಾರ ವಿಮಾನ ನಿಲ್ದಾಣ ಅಧಿಕಾರಿಗಳ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬೆಟ್ಟದಿಂದ ನೋಡಲು ರಮಣೀಯ ದೃಶ್ಯವೇನಾದರೂ ಇದೆಯೇ. ಅಲ್ಲಿಗೆ ಹೋಗುವುದು ತಾಯಿ ಮೇಲಿನ ಭಕ್ತಿಗಾಗಿಯೇ ಹೊರತು ಪ್ರವಾಸಕ್ಕಾಗಿ ಅಲ್ಲ. ಬೇಕಿದ್ದರೆ ನಂದಿ ಬೆಟ್ಟ, ಇಲ್ಲವೇ ಚಾಮರಾಜನಗರದಲ್ಲಿ ಮಾಡಲಿ’ ಎಂದು ಹೇಳಿದರು.

‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ರೋಪ್‌ ವೇ ಪ್ರಸ್ತಾವ ಬಂದಿತ್ತು. ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಮಾಡಿ, ರೋಪ್‌ ವೇ ಬೇಡವೆಂದು ನಿರ್ಧರಿಸಲಾಗಿತ್ತು’ ಎಂದು ತಿಳಿಸಿದರು.

ತ್ವರಿತ ಗತಿಯಲ್ಲಿ ಭೂಸ್ವಾಧೀನ: ‘ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆದಿದ್ದು, ₹175 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ₹154 ಕೋಟಿ ಪರಿಹಾರವನ್ನು ರೈತರಿಗೆ ನೀಡಲಾಗಿದೆ. 85 ಎಕರೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. 38 ಎಕರೆ ಸ್ವಾಧೀನ ಪ್ರಕ್ರಿಯೆ ನಡೆದಿದೆ. 2.75 ಕಿ.ಮೀ ರನ್‌ ರವೇ ವಿಸ್ತರಣೆಯಾಗಲಿದೆ’ ಎಂದು ಪ್ರತಾಪ ಹೇಳಿದರು.

‘ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ₹319 ಕೋಟಿ ವೆಚ್ಚದಲ್ಲಿ ರನ್‌ವೇ ವಿಸ್ತರಣೆಯಾಗಲಿದೆ. ಭೂಸ್ವಾಧೀನ ಪೂರ್ಣಗೊಂಡ ನಂತರ ಮಂಡಕಳ್ಳಿಯ ಶೆಟ್ಟಿಕೆರೆ ಬಳಿ ನಂಜನಗೂಡು ರಸ್ತೆಯನ್ನು ಬೇರೆಡೆಗೆ ತಿರುಗಿಸಲಾಗುವುದು. ಅದರಿಂದ ನಂಜನಗೂಡಿಗೆ 5 ಕಿ.ಮೀ. ಹೆಚ್ಚಾಗಲಿದೆ’ ಎಂದು ಹೇಳಿದರು. 

‘ಅಲಯನ್ಸ್‌ ವಿಮಾನಗಳು ರಿಪೇರಿಗೆ ಹೋಗಿದ್ದರಿಂದ ಬೇಡಿಕೆ ಇದ್ದರೂ ವಿಮಾನ ಹಾರಾಟ ನಿಂತಿವೆ. ಹೀಗಾಗಿ ಸ್ಟಾರ್‌ ಹಾಗೂ ಇಂಡಿಗೊ ವಿಮಾನ ಕಂಪನಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಸದ್ಯದಲ್ಲಿಯೇ ಕೊಚ್ಚಿ, ಗೋವಾ ಸೇರಿದಂತೆ ಬೇಡಿಕೆ ಇರುವ ನಗರಗಳಿಗೆ ವಿಮಾನಯಾನ ಸೇವೆ ನೀಡಲಾಗುವುದು’ ಎಂದು ತಿಳಿಸಿದರು.

ಶಾಸಕ ಟಿ.ಎಸ್‌.ಶ್ರೀವತ್ಸ, ಮಾಜಿ ಮೇಯರ್ ಶಿವಕುಮಾರ್, ಲೀಡ್‌ ಬ್ಯಾಂಕ್ ವ್ಯವಸ್ಥಾಪಕ ನಾಗೇಶ್‌, ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅನಿಲ್‌ ಥಾಮಸ್‌ ಪಾಲ್ಗೊಂಡಿದ್ದರು.

ಜ.24ರವರೆಗೆ ವಿಕಸಿತ್ ಭಾರತ ಸಂಕಲ್ಪ ಯಾತ್ರೆ 

‘ವಿಕಸಿತ್ ಭಾರತ ಸಂಕಲ್ಪ ರಥಯಾತ್ರೆ ಜ.24ರವರೆಗೆ ನಡೆಯಲಿದ್ದು ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಸಂಚರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಸ್ಥಳದಲ್ಲೇ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಪ್ರತಾಪ ಸಿಂಹ ಹೇಳಿದರು.

‘ಪಿಎಂ ಉಜ್ವಲ–2 ಯೋಜನೆಯಡಿ ಸ್ಥಳದಲ್ಲೇ ಅಡುಗೆ ಅನಿಲ ಸಿಲಿಂಡರ್‌ಗೆ ನೋಂದಾಯಿಸಿಕೊಂಡು 3 ದಿನದಲ್ಲೇ ಅಡುಗೆ ಒಲೆ ಸಹಿತ ಸೇವೆ ಒದಗಿಸಲಾಗುತ್ತಿದೆ. ಯಾರ ಜನಪ್ರತಿನಿಧಿ ಬಳಿ ಕೈಚಾಚುವ ಅಗತ್ಯವಿಲ್ಲ’ ಎಂದರು.

‘ಯಾತ್ರೆ ನ.20ರಂದು ಆರಂಭವಾಗಿದ್ದು ಇದುವರೆಗೂ 55 ಸಾವಿರ ಆಯುಷ್ಮಾನ್ ಭಾರತ್ ಕಾರ್ಡ್‌ ನೀಡಲಾಗಿದೆ. ಪಿಎಂ ಕಿಸಾನ್‌ಗೆ ಹೊಸದಾಗಿ 7 ಸಾವಿರ ಮಂದಿ ನೋಂದಾಯಿಸಿದ್ದಾರೆ. ಇದುವರೆಗೆ 2.45 ಲಕ್ಷ ರೈತರು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. 2018ರಿಂದ ಜಿಲ್ಲೆಯ ರೈತರಿಗೆ ₹500 ಕೋಟಿ ನೀಡಲಾಗಿದೆ. ಸ್ವನಿಧಿ ಯೋಜನೆಯಡಿ 31 ಸಾವಿರ ವ್ಯಾಪಾರಿಗಳು ಸಾಲ ಸೌಲಭ್ಯ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು ಎಲ್ಲ ಮಾರಮ್ಮ ಚೌಡಮ್ಮ ಶಿವ ವಿಷ್ಣು ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ಶ್ರೀರಾಮ ಭಜನೆ ಮಾಡಬೇಕು’ ಎಂದರು.

ಹುಯಿಲಾಳದಲ್ಲಿ ಕ್ರಿಕೆಟ್‌ ಮೈದಾನ

‘ಸಾತಗಳ್ಳಿಯಲ್ಲಿ ಕ್ರಿಕೆಟ್‌ ಮೈದಾನಕ್ಕೆ ಮೀಸಲಿರಿಸಿದ್ದ ಭೂಮಿಯಲ್ಲಿ ಕೆರೆ ಇದೆ. ಸುಪ್ರೀಂ ಕೋರ್ಟ್‌ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪ್ರಕಾರ ಕೆರೆ ಮುಚ್ಚುವುದಾಗಲಿ ಸ್ಥಳಾಂತರಿಸುವುದಾಗಲಿ ಆಗದು. ಹೀಗಾಗಿ ಕ್ರಿಕೆಟ್‌ ಮೈದಾನಕ್ಕಾಗಿ ಹುಯಿಲಾಳು ಗ್ರಾಮದಲ್ಲಿ 26 ಎಕರೆ ಸರ್ಕಾರಿ ಭೂಮಿ ಗುರುತಿಸಲಾಗಿದೆ’ ಎಂದು ಪ್ರತಾಪ ಹೇಳಿದರು. ‘ಕಂದಾಯ ಇಲಾಖೆಗೆ ಪ್ರಸ್ತಾವ ಹೋಗಿದೆ. ನಂತರ ಸಚಿವ ಸಂಪುಟ ಅನುಮೋದಿಸಿದರೆ ಕೆಎಸ್‌ಸಿಎ ಹಣ ನೀಡಲಿದ್ದು ₹100 ಕೋಟಿ ವೆಚ್ಚದಲ್ಲಿ ಮೈದಾನ ನಿರ್ಮಾಣವಾಗಲಿದೆ’ ಎಂದು ತಿಳಿಸಿದರು. ‘ಅಂತರರಾಷ್ಟ್ರೀಯ ಹಾಗೂ ಐಪಿಎಲ್‌ ಪಂದ್ಯಗಳು ನಡೆದರೆ ಜಗತ್ತೇ ಮೈಸೂರಿನತ್ತ ನೋಡಲಿದೆ. ಹೀಗಾಗಿ ಸಚಿವ ಸಂಪುಟದಲ್ಲಿ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸುವೆ’ ಎಂದರು.

ನಿರ್ಮಾಣಕ್ಕೆ ವಿರೋಧ

‘ಮೈಸೂರು ತಾಲ್ಲೂಕು ಹುಯಿಲಾಳು ಬಳಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಅನುಮತಿ ನೀಡಿದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT