ಲಿಂಗಾಯತ ಮಠಗಳು ಎಲ್ಲ ಸಮುದಾಯಗಳ ಮಕ್ಕಳಿಗೆ ಜಾತ್ಯತೀತವಾಗಿ ಅನ್ನ ಅಕ್ಷರ ದಾಸೋಹ ಕಲ್ಪಿಸಿ ಬದುಕು ಕಟ್ಟಿಕೊಟ್ಟಿವೆ
ಎಚ್.ಎಂ.ಗಣೇಶ್ ಪ್ರಸಾದ್ ಶಾಸಕ
ಚಿದಾನಂದ ಸ್ವಾಮೀಜಿ ಅವರು ಯಾವುದೇ ಆದಾಯ ಮೂಲ ಇಲ್ಲದೇ ಶಿಕ್ಷಣ ಕೊಡುತ್ತಿರುವ ಕಾಯಕಯೋಗಿ. ಕಡಿಮೆ ಪ್ರವೇಶ ಶುಲ್ಕದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುತ್ತಿದ್ದಾರೆ
ಜಿ.ಟಿ.ದೇವೇಗೌಡ ಶಾಸಕ
‘ಶಿಕ್ಷಣ ಕ್ರಾಂತಿ ನಡೆಸಿದ ಮಠ’
ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ ‘ಮಠವನ್ನು ಮುನ್ನಡೆಸುವುದು ಸುಲಭವಲ್ಲ. ಅದೊಂದು ತಪಸ್ಸು. ಚಿದಾನಂದ ಶ್ರೀ ಅವರು ತಮ್ಮ ದೂರದೃಷ್ಟಿ ಚಿಂತನೆ ತೀರ್ಮಾನಗಳಿಂದ ಶ್ರೀ ಸಾಮಾನ್ಯರಿಗೆ ಬೆಳಕಾಗಿದ್ದಾರೆ. 16ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆ ಸ್ಥಾಪಿಸಿ ಶಿಕ್ಷಣ ಕ್ರಾಂತಿ ನಡೆಸಿದ್ದಾರೆ. 5 ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ’ ಎಂದು ಶ್ಲಾಘಿಸಿದರು. ‘ಕನಕಪುರದ ದೇಗುಲ ಮಠದಲ್ಲಿ ನಾನು ಓದಿದ್ದೆ. ಇಮ್ಮಡಿ ನಿರ್ವಾಣ ಸ್ವಾಮೀಜಿ ಇಮ್ಮಡಿ ಮಹಾಲಿಂಗ ಸ್ವಾಮೀಜಿ ನನಗೆ ಶಿಕ್ಷಣ ಕೊಟ್ಟರು. ಅವರನ್ನು ಮರೆಯಲಾಗದು. ಹೊಸಮಠವು ನನ್ನಂತೆಯೇ ಇದ್ದ ಬಡಮಕ್ಕಳಿಗೆ ಅನ್ನ ಅಕ್ಷರ ದಾಸೋಹವನ್ನು ನೀಡಿದೆ. ಅದರ ಸೇವೆ ವಿಸ್ತರಿಸುವ ಶಕ್ತಿ ಸಿಗಲಿ’ ಎಂದರು. ‘ಧ್ವನಿ ಇಲ್ಲದ ಎಲ್ಲ ವರ್ಗದದವರಿಗೆ ವಿದ್ಯೆ ಕೊಡುವುದರಿಂದ ಸಮಾಜ ಮತ್ತು ನಾಡು ಅಭಿವೃದ್ಧಿ ಆಗುತ್ತದೆ. ಚಿದಾನಂದಶ್ರೀ ಮಠಕ್ಕೆ ಉತ್ತಮ ಅಡಿಪಾಯ ಹಾಕಿದ್ದಾರೆ. ಬಡವರು ಹೆಣ್ಣು ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ’ ಎಂದು ಹೇಳಿದರು.
‘ಅನಕ್ಷರಸ್ಥರ ಸಂಖ್ಯೆ ಕಡಿಮೆ ಮಾಡಿದ ಮಠಗಳು’
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ‘ಉತ್ತರ ಭಾರತದ ರಾಜ್ಯಗಳಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಿದೆ. ಆದರೆ ರಾಜ್ಯದಲ್ಲಿ ಅನಕ್ಷರಸ್ಥರ ಸಂಖ್ಯೆ ವಿರಳವಾಗಿಸುವಲ್ಲಿ ವೀರಶೈವ ಲಿಂಗಾಯತ ಮಠಗಳ ಕೊಡುಗೆ ದೊಡ್ಡದು’ ಎಂದರು. ‘ಹುಬ್ಬಳ್ಳಿ ಮೂಲದಿಂದ ಬಂದ ಸಂಗನಬಸವ ಸ್ವಾಮೀಜಿ ಅವರಿಂದ ಮಠವು ಸ್ಥಾಪನೆಯಾಯಿತು. ಮೊದಲು ನೂರಾರು ಮಠಗಳಿದ್ದವು. ಈಗ ಬೆರಳೆಣಿಕೆಯಷ್ಟಿವೆ. ಚಿದಾನಂದ ಸ್ವಾಮೀಜಿ ಅವರು ಮಾತಿಗಿಂತ ಕೃತಿ ಲೇಸು ಎಂಬಂತೆ ಕಾಯಕಜೀವಿಗಳಾಗಿ ದುಡಿದಿದ್ದಾರೆ. ಯಾವುದೇ ಕಾರ್ಯಕ್ರಮದಲ್ಲೂ ಮಾತನಾಡುವುದಿಲ್ಲ. ಪ್ರಸಾದ ಸರಿಯಾದ ಸಮಯಕ್ಕೆ ಆಗಬೇಕೆಂದು ಎಲ್ಲಿಯೂ ಸ್ವೀಕರಿಸದಿರುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ’ ಎಂದರು.