ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮಾನವ– ವನ್ಯಜೀವಿ ಸಂಘರ್ಷದಲ್ಲೇ ಮುಗಿದ ವರ್ಷ

ಭಾವುಕಗೊಳಿಸಿದ ‘ಅರ್ಜುನ’–‘ಬಲರಾಮ’ರ ಸಾವು l ಚಿರತೆ ಕಾರ್ಯಪಡೆ ರಚನೆ ಮೈಲಿಗಲ್ಲು
Published 28 ಡಿಸೆಂಬರ್ 2023, 7:29 IST
Last Updated 28 ಡಿಸೆಂಬರ್ 2023, 7:29 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ನೈರುತ್ಯ ಹಾಗೂ ದಕ್ಷಿಣದ ಗಡಿಯುದ್ದಕ್ಕೂ ಅರಣ್ಯ ಚಾಚಿದ್ದು, ಕಾಡಂಚಿನಲ್ಲಷ್ಟೇ ಇದ್ದ ವನ್ಯಜೀವಿ– ಮಾನವ ಸಂಘರ್ಷವು ಈ ವರ್ಷ ತಿ.ನರಸೀಪುರ ತಾಲ್ಲೂಕಿನ ನದಿ ಬಯಲಿಗೂ ವಿಸ್ತರಿಸಿತು. ಹೀಗಾಗಿಯೇ, ಅರಣ್ಯ ಇಲಾಖೆ ಚಿರತೆ ಕಾರ್ಯಪಡೆ ಆರಂಭಿಸಬೇಕಾಯಿತು. ‘ದಸರಾ ಅಂಬಾರಿ’ ಆನೆಗಳಾಗಿದ್ದ ಬಲರಾಮ– ಅರ್ಜುನರ ಸಾವು ನಾಡಿನ ಜನರನ್ನು ಭಾವುಕಗೊಳಿಸಿತು. 

ನಗರದ ಕೆಎಸ್‌ಒಯು ಘಟಿಕೋತ್ಸವ ಸಭಾಂಗಣದಲ್ಲಿ ಏಪ್ರಿಲ್‌ನಲ್ಲಿ ನಡೆದ ಬಂಡೀಪುರ ಹುಲಿಯೋಜನೆ ಸುವರ್ಣ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಹುಲಿಗಣತಿಯನ್ನು ನಗರದಲ್ಲಿಯೇ ಬಿಡುಗಡೆ ಮಾಡಿದ್ದು ವಿಶೇಷ! 

ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ವಿರೋಧಿಸಿ ವರ್ಷಾರಂಭದಿಂದಲೂ ‘ಚಾಮುಂಡಿ ಬೆಟ್ಟ ಉಳಿಸಿ ಸಮಿತಿ’ ಹೋರಾಟ ನಡೆಸಿತ್ತು. ಡಿಸೆಂಬರ್‌ ಅಂತ್ಯದಲ್ಲಿ ಇದೀಗ ಅದು ಮುನ್ನಲೆಗೆ ಬಂದಿದೆ. ಕುಕ್ಕರಹಳ್ಳಿ ಕೆರೆ ಹಾಗೂ ಪೂರ್ಣಯ್ಯ ನಾಲೆ ಉಳಿವಿಗೆ ಡಿಪಿಆರ್‌ ತಯಾರಿಗೆ ಜಿಲ್ಲಾಡಳಿತವು ಡ್ರೋನ್‌ ಸರ್ವೆಗೆ ಮುಂದಾಗಿದ್ದು, ಈ ವರ್ಷದ ಪರಿಸರದ ಸಾಧನೆ.

ಮೈಸೂರಿನಲ್ಲಿ ಏಪ್ರಿಲ್‌ 9ರಂದು ನಡೆದ ಹುಲಿ ಯೋಜನೆಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ 2022ರ ಹುಲಿ ಗಣತಿಯ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ ಕ್ಷಣ
ಮೈಸೂರಿನಲ್ಲಿ ಏಪ್ರಿಲ್‌ 9ರಂದು ನಡೆದ ಹುಲಿ ಯೋಜನೆಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ 2022ರ ಹುಲಿ ಗಣತಿಯ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ ಕ್ಷಣ

ಘಟನಾವಳಿಗಳು....:

ಜ.20: ತಿ.ನರಸೀಪುರ: ತಾಲ್ಲೂಕಿನ ಕನ್ನನಾಯಕನಹಳ್ಳಿಯ ಮನೆ ಹಿಂಭಾಗದಲ್ಲಿ ಸೌದೆ ತರಲು ಹೋಗಿದ್ದ ಸಿದ್ದಮ್ಮ‌ (60) ಚಿರತೆ ದಾಳಿಯಿಂದ ಮೃತಪಟ್ಟರು. 

ಜ.22: ‌ಎಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯದ ಬಳ್ಳೆ ಹಾಡಿ ನಿವಾಸಿ ಮಂಜು (18) ಹುಲಿ ದಾಳಿಯಿಂದ ಮೃತಪಟ್ಟರು. ತಿ.ನರಸೀಪುರ ತಾಲ್ಲೂಕಿನ ಹೊರಳಹಳ್ಳಿಯಲ್ಲಿ ಚಿರತೆಯು ದಶಕಂಠ ಅವರ ಪುತ್ರ ಜಯಂತ್ (11) ಎಂಬುವರನ್ನು ಎಳೆದೊಯ್ದು ಕೊಂದಿತ್ತು.

ಫೆ.1: ಮೈಸೂರು ಅರಣ್ಯ ವೃತ್ತದ ಮೈಸೂರು, ನಂಜನಗೂಡು, ಎಚ್.ಡಿ. ಕೋಟೆ, ಸರಗೂರು, ತಿ.ನರಸೀಪುರ, ಮಂಡ್ಯ, ಪಾಂಡವಪುರ, ನಾಗಮಂಗಲ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ತಡೆಗೆ ‘ಚಿರತೆ ಕಾರ್ಯಪಡೆ’ (ಟಾಸ್ಕ್‌ಫೋರ್ಸ್) ರಚಿಸಿ ಸರ್ಕಾರವು ಆದೇಶ ಹೊರಡಿಸಿತು. 

ಫೆ.2: ಎಚ್.ಡಿ.ಕೋಟೆ ತಾಲ್ಲೂಕಿನ ಅಗಸನ ಹುಂಡಿ ಗ್ರಾಮದಲ್ಲಿ ಬಾಳೆ ಗೊನೆ ಕತ್ತರಿಸುತ್ತಿದ್ದ ಕಾರ್ಮಿಕ, ಕೊತ್ತನಹಳ್ಳಿಯ ಮುನಿಸ್ವಾಮಿ ಎಂಬುವರ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿತ್ತು.

ಫೆ.28: ನಂಜನಗೂಡು ತಾಲ್ಲೂಕಿನ ಕೂಡ್ಲಾಪುರದ ಚಂದ್ರಶೇಖರ ಎಂಬುವವರ ಜಮೀನಿನಲ್ಲಿ ಹಾಕಿದ್ದ ಉರುಳಿಗೆ ಸಿಲುಕಿದ ಎರಡು ವರ್ಷದ ಹೆಣ್ಣು ಚಿರತೆ ಮೃತಪಟ್ಟಿತು.

ಮಾರ್ಚ್‌ 4: ಸರಗೂರು ದಡದಹಳ್ಳಿ ಹಾಡಿಯ ಅರಣ್ಯ ವೀಕ್ಷಕ ಬೊಮ್ಮ (59) ಅವರನ್ನು ಹುಲಿ ಕೊಂದುಹಾಕಿತು.  

ಮಾರ್ಚ್ 20: ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದಲ್ಲಿ ಕಾಡುಪ್ರಾಣಿಗಳ ದಾಳಿಗೆ ಸಿಲುಕಿ ಮೃತಪಟ್ಟಿದ್ದ, ಒಂದು ವರ್ಷದ ಗಂಡು ಹುಲಿಮರಿ ಕಳೇಬರ ಪತ್ತೆಯಾಯಿತು.

ಏ.9: ಬಂಡೀಪುರ ಹುಲಿಯೋಜನೆಯ ಸುವರ್ಣ ಸಂಭ್ರಮವು ನಗರ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ 2022ರ ಹುಲಿಗಣತಿ ಬಿಡುಗಡೆ ಮಾಡಿದರು.

ಮೇ 26: ನಂಜನಗೂಡು ತಾಲ್ಲೂಕಿನ  ಹಾದನೂರು ವಡೆಯನಪುರದಲ್ಲಿ ವಿಷಕಂಠ ಅವರು ಹುಲಿ ದಾಳಿಯಿಂದ ಗಾಯಗೊಂಡರು.

ಜೂನ್ 1: ಸರಗೂರು ತಾಲ್ಲೂಕಿನ ಹೀರೆಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತ ರವಿಕುಮಾರ್ (40) ಎಂಬುವರು ಮೃತ‍ಪಟ್ಟರು. 

ಆ.5: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿ ಚಿಕ್ಕನಹಳ್ಳಿ ಅರಣ್ಯ ಪ್ರದೇಶದ ಅರಸಿನಕೆರೆ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. 

ಜುಲೈ 21: ಹುಣಸೂರು ತಾಲ್ಲೂಕಿನ ಗೊಮ್ಮಟಗಿರಿ ಬೆಟ್ಟದ ಬಳಿ ಹಳೆಬೀಡು ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತಿದ್ದ  ಶಿವಕುಮಾರ ಮತ್ತು ಸವಿತಾ ದಂಪತಿ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು

ಸೆ.4: ಎಚ್.ಡಿ.ಕೋಟೆ ತಾಲ್ಲೂಕಿನ ಕಲ್ಲಹಟ್ಟಿಯಲ್ಲಿ ಹುಲಿಯೊಂದು ಬಾಲಕ ಚರಣ್‌ ನಾಯಕ್‌ (8)ನನ್ನು ಎಳೆದೊಯ್ದು ಕೊಂದಿತ್ತು.

ಸೆ.15: ಸರಗೂರು ತಾಲ್ಲೂಕಿನ ಚನ್ನಗುಂಡಿ ಗ್ರಾಮದ ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ಗ್ರಾಮದ ರೈತ ಮಹೇಂದ್ರ(38) ಕಾಡಾನೆ ದಾಳಿಯಿಂದ ಮೃತಪಟ್ಟರು.

ಸೆ.18: ಸರಗೂರು ಲ್ಲೂಕಿನ ನಡಹಾಡಿ ಗ್ರಾಮದಲ್ಲಿ ಬಹಿರ್ದೆಸೆಗೆ ಹೋಗಿದ್ದ ರೈತ ಚಿಕ್ಕೇಗೌಡ (60) ಮೇಲೆ ಕಾಡಾನೆ ಕೊಂದುಹಾಕಿತು.

ಸೆ.19: ಎಚ್.ಡಿ.ಕೋಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಬಳಿ 8 ವರ್ಷದ ಗಂಡು ಹುಲಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿದಿದ್ದರು. 

ಸೆ.21: ಪಿರಿಯಾಪಟ್ಟಣದ ತಾಲ್ಲೂಕಿನ ಆನೆ ಚೌಕೂರು ಬಳಿ ಮುದ್ದನಹಳ್ಳಿಯ ರೈತ ರಮೇಶ್ ಎಂಬುವರ ಮೇಲೆ ಹುಲಿ ದಾಳಿಯಿಂದ ಗಾಯಗೊಂಡಿದ್ದರು. 

ಚಾಮುಂಡಿಬೆಟ್ಟದ ವಿಹಂಗಮ ನೋಟ
ಚಾಮುಂಡಿಬೆಟ್ಟದ ವಿಹಂಗಮ ನೋಟ

ಅ.3: ಹುಣಸೂರು ತಾಲ್ಲೂಕಿನ ಹನಗೋಡು ಬಳಿ ಉಡುವೆಪುರದ ಗಣೇಶ್ (58) ಹುಲಿ ದಾಳಿಯಿಂದ ಮೃತಪಟ್ಟರು. 

ನ.1: ನಂಜನಗೂಡು ತಾಲ್ಲೂಕಿನ ಹೆಡಿಯಾಲ ಸಮೀಪದ ಕುದುರೆ ಗುಂಡಿ ಹಿನ್ನೀರು ಪ್ರದೇಶದಲ್ಲಿ ಜಾನುವಾರು ಮೇಯಿಸುತ್ತಿದ್ದ, ಮಹದೇವನಗರದ ವೀರಭದ್ರ ಭೋವಿ (70) ಎಂಬುವರನ್ನು ಹುಲಿ ಗಾಯಗೊಳಿಸಿತು.

ನ.6: ಸರಗೂರು ತಾಲ್ಲೂಕಿನ ಮೊಳೆಯೂರು ವಲಯ ಅರಣ್ಯ ಪ್ರದೇಶ ವ್ಯಾಪ್ತಿಯ ಅರಣ್ಯ ಕ್ವಾಟ್ರಸ್ ಬಳಿ ದನಗಾಹಿ, ಕಾಡಬೇಗೂರು ಗ್ರಾಮದ ನಿವಾಸಿ ಬಾಲಾಜಿ ನಾಯ್ಕ(52) ‌ಹುಲಿ ದಾಳಿಯಿಂದ ಮೃತಪಟ್ಟರು.

ನ.24: ನಂಜನಗೂಡು ತಾಲ್ಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ದನ ಮೇಯಿಸುತ್ತಿದ್ದ ‌ರತ್ನಮ್ಮ (49) ಅವರನ್ನು ಹುಲಿ ಕೊಂದಿತು. ಮೃತದೇಹವನ್ನು 3 ಕಿ.ಮೀ ದೂರ ಎಳೆದೊಯ್ದು ಅರೆಬರೆ ತಿಂದು ಹೋಗಿತ್ತು. 

ಮೈಸೂರು ಮೃಗಾಲಯದ ಕೂರ್ಗಳ್ಳಿ ಪುನರ್‌ವಸತಿ ಕೇಂದ್ರದಲ್ಲಿರುವ ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಸೆರೆಹಿಡಿದ ಹುಲಿ
ಮೈಸೂರು ಮೃಗಾಲಯದ ಕೂರ್ಗಳ್ಳಿ ಪುನರ್‌ವಸತಿ ಕೇಂದ್ರದಲ್ಲಿರುವ ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಸೆರೆಹಿಡಿದ ಹುಲಿ

ನ.29: ನಂಜನಗೂಡು ತಾಲ್ಲೂಕಿನ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿ ಹುಲಿಗಳು ಕಾಣಿಸಿಕೊಂಡಿದ್ದವು. ತುಮಕೂರು ಮಾದರಿಯ ಬೋನುಗಳನ್ನು ಚಿಕ್ಕಕಾನ್ಯ, ದೊಡ್ಡಕಾನ್ಯ, ಸಿಂಧುವಳ್ಳಿ ಹಾಗೂ ಬ್ಯಾತಹಳ್ಳಿ ಗ್ರಾಮಗಳಲ್ಲಿ ಇರಿಸಿ ಕಾರ್ಯಾಚರಣೆ ನಡೆದಿತ್ತು.

ಡಿ.7: ಮೈಸೂರು ತಾಲ್ಲೂಕಿನ ಆಯರಹಳ್ಳಿ ಕಬ್ಬಿನ ಗದ್ದೆಯಲ್ಲಿ ಸಿಕ್ಕಿರುವ ಮೂರು ಚಿರತೆ ಮರಿಗಳನ್ನು ಅರಣ್ಯ ಇಲಾಖೆಯು ರಕ್ಷಿಸಿತ್ತು. ಅದರಲ್ಲಿ ಅಪರೂಪದ ಕಪ್ಪು ಬಣ್ಣದ ಚಿರತೆ ಮರಿಯೂ ಇತ್ತು. 

ಡಿ.17: ನಂಜನಗೂಡು ತಾಲ್ಲೂಕಿನ ಹದಿನಾರು ಕೆರೆಯಲ್ಲಿ ಏರ್‌ಗನ್‌ ಬಳಸಿ ಹಕ್ಕಿಗಳನ್ನು ಬೇಟೆಯಾಡುತ್ತಿದ್ದ ತಾಂಡವಪುರ ನಿವಾಸಿಗಳಾದ ಆಂಥೋಣಿ ಕ್ಸೇವಿಯರ್‌, ಎ.ರೋಹಿತ್‌ ಎಂಬುವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದರು. 7 ಹಕ್ಕಿಗಳು, ಕೃತ್ಯಕ್ಕೆ ಬಳಸಿದ್ದ ಒಂದು ಏರ್‌ಗನ್ ಹಾಗೂ ಸ್ಕೂಟರ್‌ ವಶಕ್ಕೆ ಪಡೆಯಲಾಗಿತ್ತು.

ಹೆಡಿಯಾಲ ವಲಯ ಅರಣ್ಯ ಪ್ರದೇಶದಲ್ಲಿ ಭೀತಿ ಮೂಡಿಸಿದ ಹುಲಿ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇಡುತ್ತಿರುವ ದೃಶ್ಯ
ಹೆಡಿಯಾಲ ವಲಯ ಅರಣ್ಯ ಪ್ರದೇಶದಲ್ಲಿ ಭೀತಿ ಮೂಡಿಸಿದ ಹುಲಿ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇಡುತ್ತಿರುವ ದೃಶ್ಯ

ಡಿ.19: ಮೈಸೂರಿನ ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲಾ ಆವರಣದಲ್ಲಿ ಚಿರತೆಯು ಸೆರೆಯಾಯಿತು. 

ಡಿ.22: ಕುಕ್ಕರಹಳ್ಳಿ ಕೆರೆ ಹಾಗೂ ಅದಕ್ಕೆ ನೀರು ಪೂರೈಸುತ್ತಿದ್ದ ‘ಪಾರಂಪರಿಕ’ ಪೂರ್ಣಯ್ಯ ನಾಲೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಜಿಲ್ಲಾಡಳಿತದ ನಿರ್ದೇಶನದಂತೆ ನವದೆಹಲಿಯ ‘ಇನ್‌ಟ್ಯಾಕ್‌’ (ಇಂಡಿಯನ್‌ ನ್ಯಾಷನಲ್‌ ಟ್ರಸ್ಟ್‌ ಫಾರ್‌ ಆರ್ಟ್‌ ಅಂಡ್‌ ಕಲ್ಚರಲ್‌ ಹೆರಿಟೇಜ್‌) ಸಂಸ್ಥೆಯು ಡ್ರೋನ್‌ ಸರ್ವೆ ನಡೆಸಿತು.

ತಿ. ನರಸೀಪುರ ತಾಲ್ಲೂಕಿನಲ್ಲಿ ಭೀತಿ ಮೂಡಿಸಿದ್ದ ಚಿರತೆಯನ್ನು ನರಗ್ಯಾತನಹಳ್ಳಿಯಲ್ಲಿ ಅರಣ್ಯ ಇಲಾಖೆ ಸೆರೆ ಹಿಡಿಯಿತು
ತಿ. ನರಸೀಪುರ ತಾಲ್ಲೂಕಿನಲ್ಲಿ ಭೀತಿ ಮೂಡಿಸಿದ್ದ ಚಿರತೆಯನ್ನು ನರಗ್ಯಾತನಹಳ್ಳಿಯಲ್ಲಿ ಅರಣ್ಯ ಇಲಾಖೆ ಸೆರೆ ಹಿಡಿಯಿತು
ಚಾಮುಂಡಿ ಬೆಟ್ಟ ಉಳಿಸಲು ಹೋರಾಟ:
ಪ್ರಸಾದ ಯೋಜನೆಯಡಿ ಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ ಬೆಟ್ಟಕ್ಕೆ ರೋಪ್‌ವೇ ವಿರೋಧಿಸಿ ‘ಚಾಮುಂಡಿ ಬೆಟ್ಟ ಉಳಿಸಿ ಅಭಿಯಾನ’ವು ವರ್ಷಾರಂಭದಲ್ಲಿ ನಡೆಯಿತು.

ಜ.10: ಸಣ್ಣ ನೀರಾವರಿ ಇಲಾಖೆಯು ಚಾಮುಂಡಿಬೆಟ್ಟದ ದೇವಿಕೆರೆಗೆ ಕಾಯಕಲ್ಪ ನೀಡಲು ಮುಂದಾಗಿದ್ದಕ್ಕೆ ರಾಜವಂಶಸ್ಥ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಮ್ಮ ವಕೀಲರ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು. 

ಫೆ.9: ‘ಬೆಟ್ಟದಲ್ಲಿ ರೋಪ್‌ವೇ ಯೋಜನೆಗೆ ಪೂರ್ವ ಕಾರ್ಯಸಾಧ್ಯತಾ ಅಧ್ಯಯನ ನಡೆಸಿದ್ದು ರಾಜ್ಯ ಸರ್ಕಾರವು ಪ್ರಸ್ತಾವ ಸಲ್ಲಿಸಿದೆ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದು ಹಾಗೂ 2022–23ನೇ ಸಾಲಿನ  ಬಜೆಟ್‌ನಲ್ಲಿ ಯೋಜನೆಯನ್ನು ಪ್ರಸ್ತಾಪಿಸುತ್ತಿದ್ದಂತೆಯೇ ನಗರದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು.

ಮಾರ್ಚ್‌ 26:  ಬೆಟ್ಟವನ್ನು ತ್ಯಾಜ್ಯ ಮುಕ್ತಗೊಳಿಸಲು ಪಾಲಿಕೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ಸುಭಾಷ್‌ ಬಿ. ಅಡಿ ಸಭೆ ನಡೆಸಿ ಜಿಲ್ಲಾಡಳಿತಕ್ಕೆ ಕ್ರಮವಹಿಸಲು ತಾಕೀತು ಮಾಡಿದ್ದರು.

ಸೆ.1: ಅರಣ್ಯ ಇಲಾಖೆಯು ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶದ ಸಂರಕ್ಷಣೆಗಾಗಿ ₹ 500ರಿಂದ ₹ 10 ಸಾವಿರದವರೆಗೆ ದಂಡಾಸ್ತ್ರ ಪ್ರಯೋಗಿಸಿತು. 

ಡಿ.23: ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣಕ್ಕೆ ನಾವು ಸಿದ್ಧರಾಗಿದ್ದೇವೆ. ಆದರೆ ಪರಿಸರವಾದಿಗಳು ಸೇರಿದಂತೆ ಯಾರೂ ಅಡ್ಡಿಪಡಿಸಬಾರದಷ್ಟೆ’ ಎಂದಿದ್ದರಿಂದ ವಿರೋಧ ವ್ಯಕ್ತವಾಗಿತ್ತು.

ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಪೂರ್ಣಯ್ಯ ನಾಲೆ ಡ್ರೋನ್ ಸಮೀಕ್ಷೆಯನ್ನು ದೆಹಲಿ ಇಂಟ್ಯಾಕ್ ತಂಡವು ಡಿ.22ರಂದು ನಡೆಸಿದ ಕ್ಷಣ. ಪರಿಸರ ತಜ್ಞರು ನಾಗರಿಕರು ಪಾಲ್ಗೊಂಡಿದ್ದರು
ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಪೂರ್ಣಯ್ಯ ನಾಲೆ ಡ್ರೋನ್ ಸಮೀಕ್ಷೆಯನ್ನು ದೆಹಲಿ ಇಂಟ್ಯಾಕ್ ತಂಡವು ಡಿ.22ರಂದು ನಡೆಸಿದ ಕ್ಷಣ. ಪರಿಸರ ತಜ್ಞರು ನಾಗರಿಕರು ಪಾಲ್ಗೊಂಡಿದ್ದರು
ನೆನಪಾದ ‘ಬಲರಾಮ’
ಮೇ 7: ನಾಡಹಬ್ಬ ದಸರಾ ಜಂಬೂಸವಾರಿಯಲ್ಲಿ 1999ರಿಂದ 2011ರವರೆಗೆ 13 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಹೆಗ್ಗಳಿಕೆಯ ‘ಬಲರಾಮ’ ಆನೆ (65) ಅನಾರೋಗ್ಯದಿಂದ ಮೃತಪಟ್ಟಿದೆ. ಭೀಮನಕಟ್ಟೆ ಆನೆ ಶಿಬಿರದಲ್ಲಿದ್ದ ಅದಕ್ಕೆ ಕರುಳುಬೇನೆ ಕಾಡಿತ್ತು. ಸೊಪ್ಪು ತಿನ್ನುವ ವೇಳೆ ‘ವೈ’ ಆಕಾರದ (ಕವಲು) ಮರದ ತುಂಡು ಗಂಟಲಿನಲ್ಲಿ ಸಿಕ್ಕಿಕೊಂಡಿತ್ತು. ಅದರಿಂದ ಆರೋಗ್ಯ ಹದಗೆಟ್ಟಿತ್ತು. 2022ರ ಡಿ.14ರಂದು ಜಮೀನಿನ ಮಾಲೀಕನೊಬ್ಬ ಕಾಡಾನೆಯೆಂದು ಭಾವಿಸಿ ಗುಂಡು ಹಾರಿಸಿದ್ದ. ಅದರಿಂದ ನಿತ್ರಾಣಗೊಂಡಿದ್ದ.
ಕಾದಾಡುತ್ತಲೇ ಮೃತಪಟ್ಟ ‘ಅರ್ಜುನ’
ಹುಲಿ ಹಾಗೂ ಪುಂಡಾನೆಗಳ ಕಾರ್ಯಾಚರಣೆಯಲ್ಲಿ ಪಾತ್ರ ವಹಿಸಿದ್ದ 65 ವರ್ಷದ ಅರ್ಜುನ ಆನೆಯು ಹಾಸನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೋರಾಡುತ್ತಾ ಡಿ.4ರಂದು ವಿರೋಚಿತ ಸಾವು ಕಂಡಿತು. ಅರ್ಜುನನ್ನು 1968ರಲ್ಲಿ ‘ಖೆಡ್ಡಾ’ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು.  2012ರಿಂದ 2019ರವರೆಗೆ ಅಂಬಾರಿ ಆನೆಯಾಗಿತ್ತು. ಆನೆ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿತ್ತು. ಈ ಬಾರಿಯ ದಸರಾ ಮೆರವಣಿಗೆಯಲ್ಲಿ ದಿಕ್ಕು ತೋರುವ ‘ನಿಶಾನೆ ಆನೆ’ಯಾಗಿ ಸಾಗಿದ್ದ ‘ಅರ್ಜುನ’ ಲಕ್ಷಾಂತರ ಜನರ ಗಮನಸೆಳೆದಿದ್ದ. 
ನಟ ದರ್ಶನ್‌ ವಿರುದ್ಧ ಪ್ರಕರಣ
ಜ.23: ವಲಸೆ ಹಕ್ಕಿಗಳಾದ ಪಟ್ಟೆ‌ತಲೆ ಹೆಬ್ಬಾತುಗಳನ್ನು (ಬಾರ್‌ ಹೆಡೆಡ್‌ ಗೂಸ್‌) ಕೂಡಿ ಹಾಕಿ ಸಾಕಿದ ಆರೋಪದ ಮೇರೆಗೆ ನಟ ದರ್ಶನ್‌ ಫಾರ್ಮ್‌ ಹೌಸ್‌ ಒಡತಿಯಾದ ಪತ್ನಿ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್‌ ನಾಗರಾಜ್‌ ವಿರುದ್ಧ ಅರಣ್ಯಾಧಿಕಾರಿ ಪ್ರಕರಣ ದಾಖಲಿಸಿಕೊಂಡಯ ನಾಲ್ಕು ಹೆಬ್ಬಾತು ರಕ್ಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT