ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸೂರು: ಮಳೆಗೆ ತಂಬಾಕು ಬೆಳೆ ಹಾನಿ

ಹುಣಸೂರು ತಾಲ್ಲೂಕಿನ ಬೆಳೆಗಾರರು ಕಂಗಾಲು
Published : 5 ಆಗಸ್ಟ್ 2024, 5:46 IST
Last Updated : 5 ಆಗಸ್ಟ್ 2024, 5:46 IST
ಫಾಲೋ ಮಾಡಿ
Comments

ಹುಣಸೂರು: ಹಚ್ಚಹಸಿರಿನ ತಂಬಾಕು ಫಸಲು ಮಳೆ ನೀರಿನಿಂದ ಮುಳುಗಿ ಕೊಳೆಯುವ ಹಂತಕ್ಕೆ ಬಂದಿದೆ, ಹಲವು ಕಡೆ ಹಳದಿ ಬಣ್ಣಕ್ಕೆ ತಿರುಗಿ ಕಟಾವು ಮಾಡದೇ ಹೊಲದಲ್ಲೇ ಬಿಡಲಾಗಿದೆ.

ತಾಲ್ಲೂಕಿನ ತಂಬಾಕು ಬೆಳೆಗಾರರು ಸಸಿ ನಾಟಿ ಸಮಯದಲ್ಲಿ ಸಕಾಲಕ್ಕೆ ಮಳೆ ಇಲ್ಲದೆ ನಷ್ಟ ಅನುಭವಿಸಿದ್ದು ಒಂದೆಡೆಯಾದರೆ, ಕಟಾವು ಸಮಯದಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ಬೆಳೆದ ಅಲ್ಪ ಸ್ವಲ್ಪ ತಂಬಾಕು ಕೊಳೆತು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

2024–25ನೇ ಸಾಲಿನಲ್ಲಿ ರಾಜ್ಯದಲ್ಲಿ 65 ರಿಂದ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೇಸಾಯ ಮಾಡಿದ್ದು, ಶೇ 50 ರಷ್ಟು ಫಸಲು ತೇವಾಂಶಕ್ಕೆ ತಂಬಾಕು ಎಲೆ ಹಳದಿ ಬಣ್ಣಕ್ಕೆ ತಿರುಗಿ, ಸಕಾಲಕ್ಕೆ ಹದಗೊಳಿಸಲಾಗದಾಂತಾಗಿದೆ. ಬಹಳಷ್ಟು ರೈತರು ಹೊಲದಲ್ಲೇ ಬೆಳೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ರೈತರು ತೇವಾಂಶದ ಎಲೆ ಹದಗೊಳಿಸಿ ಗುಣಮಟ್ಟ ಇಲ್ಲದೆ ಕೊರಗುವಂತಾಗಿದೆ. ತಾಲ್ಲೂಕಿನಲ್ಲಿ

‘ಪ್ರಥಮ ಬಾರಿಗೆ ತಂಬಾಕು ಮಂಡಳಿ ಸ್ಪಂದಿಸಲು ಮುಂದಾಗಿರುವುದು ಸಂತಸ. ಶೂನ್ಯ ಬಡ್ಡಿಯಲ್ಲಿ ₹ 25 ಸಾವಿರ ಸಾಲ ನೀಡುವ ಕ್ರಮ ಸರಿಯಿಲ್ಲ. ಬದಲಿಗೆ ರೈತರಿಗೆ ಆಂಧ್ರ ಪ್ರದೇಶ ಮಾದರಿ ಪರಿಹಾರ ನೀಡಬೇಕು. ದಂಡದ ಶುಲ್ಕ ರದ್ದು, ಎರಡನೇ ಬೆಳೆಗೆ ಅನುಮತಿ ಅನಗತ್ಯ. ಇದರ ಜೊತೆಗೆ ಬೆಳೆ ವಿಮಾ ಯೋಜನೆಗೆ ತಂಬಾಕು ಸೇರಿಸಬೇಕು’ ಎಂದು ಪ್ರಗತಿಪರ ರೈತ ಚಂದ್ರೇಗೌಡ ಆಗ್ರಹಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಳೆ ವಿಮಾ ಯೋಜನೆಗೆ ತಂಬಾಕು ಸೇರಿಸಲು ಸಮ್ಮತಿಸದೆ ವಾಣಿಜ್ಯ ಬೆಳೆ ಎಂಬ ಕಾರಣ ನೀಡಿ ಬೆಳೆಗಾರರನ್ನು ಶೋಷಿಸುತ್ತಿದೆ.  ಬೆಳೆಗಾರರಿಗೆ ಪರಿಹಾರ ನೀಡಲಾಗದ ಸರ್ಕಾರ, ತಂಬಾಕು ಕಂಪನಿಗಳಿಗೆ ಸಿಗುವ ಲಾಭಾಂಶದಲ್ಲಿ ಶೇ 25 ರಷ್ಟು ರೈತರಿಗೆ ನೀಡಲಿ’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಮನವಿ ಮಾಡಿದರು.

‘ರಾಜ್ಯದಲ್ಲಿ 1500 ರಿಂದ 2000 ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ನಷ್ಟವಾಗಿದೆ. ಕೇಂದ್ರ ಸರ್ಕಾರದ ಫಸಲ್ ಭೀಮಾ ವಿಮಾ ಯೋಜನೆಗೆ ತಂಬಾಕು ಸೇರ್ಪಡೆ ಮಾಡಿದ್ದಲ್ಲಿ ಶಾಶ್ವತ ಪರಿಹಾರ ಸಿಗಲಿದ್ದು, ಕೇಂದ್ರ ವಾಣಿಜ್ಯ ಮತ್ತು ಕೃಷಿ ಸಚಿವಾಲಯದಿಂದ ಮಂಡಳಿ ಒತ್ತಡ ತರಬೇಕು’ ಎಂದು ತಂಬಾಕು ಮಂಡಳಿ ಸದಸ್ಯ ವಿಕ್ರಂ ರಾಜೇಗೌಡ ಆಗ್ರಹಿಸಿದರು.

ಹವಾಮಾನ ವೈಪರೀತ್ಯದಿಂದ ರಾಜ್ಯದಲ್ಲಿ 650 ಹೆಕ್ಟೇರ್ ತಂಬಾಕು ಹಾನಿಗೊಂಡಿರುವ ವರದಿಯನ್ನು ಕೃಷಿ ಇಲಾಖೆ ನೀಡಿದೆ. ರೈತರಿಗೆ ಎರಡನೇ ಬೆಳೆಗೆ ಅವಕಾಶ ದಂಡ ಶುಲ್ಕ ರದ್ದು ಮತ್ತು ಶೂನ್ಯ ಬಡ್ಡಿ ದರದಲ್ಲಿ ₹ 25 ಸಾವಿರ ಸಾಲ ನೀಡುವ ಬಗ್ಗೆ ಮಂಡಳಿ ಕ್ರಮ ವಹಿಸಿದೆ.

- ಜೆ.ಬುಲ್ಲಿ ಸುಬ್ಬರಾವ್ ಪ್ರಾದೇಶಿಕ ವ್ಯವಸ್ಥಾಪಕ ತಂಬಾಕು ಮಂಡಳಿ ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT