ಶನಿವಾರ, ಡಿಸೆಂಬರ್ 3, 2022
25 °C
ಕಾಂಗ್ರೆಸ್ ಒಬಿಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ

ಪಂಪ್‌ಸೆಟ್‌ಗೆ ಮೀಟರ್ ಅಳವಡಿಸಿದರೆ, ಕಿತ್ತೊಗೆಯುವೆ: ಮಧು ಬಂಗಾರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೃಷಿಕರ ಅನುಕೂಲಕ್ಕೆ 10ಎಚ್‌ಪಿ ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್ ಅನುಷ್ಠಾನಗೊಳಿಸಿದ್ದರು. ಅದನ್ನು ತೆಗೆದು ಕೃಷಿ ಪಂಪ್‌ಸೆಟ್‌ಗೆ ಮೀಟರ್ ಅಳವಡಿಸಿದರೆ ಅದನ್ನು ನಾನೇ ಮೊದಲು ರಾಜ್ಯದಲ್ಲಿ ಕಿತ್ತೊಗೆಯುತ್ತೇನೆ’ ಎಂದು ಕಾಂಗ್ರೆಸ್ ಒಬಿಸಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಸವಾಲು ಹಾಕಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಒಬಿಸಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಬಂಗಾರಪ್ಪ ಅವರನ್ನು ಇಂದಿಗೂ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ನೆನೆಯುತ್ತಾರೆ. ಅವರು, ಅಧಿಕಾರದಲ್ಲಿದ್ದ ವೇಳೆ, ಕೃಷಿ ಪಂಪ್‌ಸೆಟ್‌ಗಳಿಗೆ ಕೊಟ್ಟ ಉಚಿತ ವಿದ್ಯುತ್ ಅನ್ನು ಒಂದು ಸಮುದಾಯ ಮಾತ್ರವಲ್ಲ ಎಲ್ಲ ರೈತರು ಬಳಸಿಕೊಂಡಿದ್ದಾರೆ. ಅಂತಹದೊಂದು ಮಹತ್ವದ ಯೋಜನೆ ಸ್ಥಗಿತಗೊಳಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಹಾಗೊಂದು ವೇಳೆ ವಿರೋಧದ ನಡುವೆ ಮೀಟರ್ ಅನ್ನು ಎಲ್ಲೇ ಅಳವಡಿಸಿದರೂ ನಾನೇ ಕೀಳುತ್ತೇನೆ’ ಎಂದು ಹೇಳಿದರು.

ಭಾವನಾತ್ಮಕ ವಿಚಾರಕ್ಕೆ ಬಿಜೆಪಿ ಆದ್ಯತೆ: ‘ಭಾವನಾತ್ಮಕ ವಿಚಾರ ತರುವ ಬಿಜೆಪಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಅರಿವು ಜನತೆಗಿದೆ. ಬಿಜೆಪಿ ಏರೋಪ್ಲೇನ್, ರಾಕೇಟ್ ತೋರಿಸುವ ಕೆಲಸ ಮಾಡುತಿದೆ ವಿನಃ ಜನರ ಸಮಸ್ಯೆ ಸರಿಪಡಿಸುತ್ತಿಲ್ಲ. ಹಿಂದೂಗಳಿಗೆ ಮೋಸ ಮಾಡಿದವರೇ ಬಿಜೆಪಿಯಾಗಿದ್ದು, ಸಮಾಜದಲ್ಲಿ ಅಜಾದ್ ಕೇಳಿ ಏನೂ ಆಗಿರಲಿಲ್ಲ. ಆದರೆ, ಹೀಗಾಗಿ ಒಬಿಸಿಯ ಎಲ್ಲಾ ಸಮುದಾಯದವನ್ನು ಪಕ್ಷದೊಳಗೆ ಸೇರಿಸಿಕೊಂಡು ಸಂಘಟನೆ ಮಾಡಿ’ ಎಂದು ತಿಳಿಸಿದರು.

 ‘ಹಳೆ ಮೈಸೂರು ಭಾಗದಲ್ಲಿ ಶೇ 52ರಷ್ಟು ಮಂದಿ ಒಬಿಸಿಗಳು ಇಂದಿಗೂ ಕಾಂಗ್ರೆಸ್ ಪರವಾಗಿದ್ದಾರೆ. ಜೋಡೋ ಯಾತ್ರೆಯಲ್ಲಿ ಸಿಕ್ಕ ಅಭೂತ ಪೂರ್ವ ಯಶಸ್ಸು ಮುಂದಿನ ದಿನಗಳಲ್ಲಿ ನಡೆಯುವ ಒಬಿಸಿ ರಾಜ್ಯ ಮಟ್ಟದ ಸಮಾವೇಶಕ್ಕೂ ಸಿಗಬೇಕು. ರಾಹುಲ್ ಗಾಂಧಿಯವರನ್ನು ಶಿವಮೊಗ್ಗಕ್ಕೆ ಆಹ್ವಾನಿಸಿ ಅಲ್ಲಿಯೇ ಒಬಿಸಿ ಸಮಾವೇಶ ನಡೆಸಲಾಗುವುದು’ ಎಂದರು.

ಪಕ್ಷಕ್ಕಾಗಿ ಶ್ರಮವಹಿಸಿ ದುಡಿಯುವವರ ಮುಂದುವರಿಸಿ, ಸೇವೆ ಸಮರ್ಪಣೆ ಮಾಡದವರನ್ನು ಮುಲಾಜಿಲ್ಲದೆ ತೆಗೆದು ಹಾಕುವಂತೆ ಸೂಚಿಸಿದ ಅವರು, ಒಬಿಸಿ ವಿಭಾಗಕ್ಕೆ ನೂರಾರು ಸಮುದಾಯ ಬರಲಿದ್ದು, ಎಲ್ಲಾ ಸಮುದಾಯಗಳಿಗೂ ಪಕ್ಷ ಸಂಘಟನೆಯಲ್ಲಿ ಅವಕಾಶ ನೀಡಿ ಹುದ್ದೆ ನೀಡುವ ಜವಾಬ್ದಾರಿಯನ್ನು ನಗರ ಹಾಗೂ ಜಿಲ್ಲಾ ಮಟ್ಟದ ಅಧ್ಯಕ್ಷರು ವಹಿಸಿಕೊಂಡು, ಹದಿನೈದು ದಿನದ ಒಳಗೆ ಪಟ್ಟಿ ಕಳುಹಿಸಿ’ ಎಂದರು.

ಗ್ರಾಮಾಂತರ ಘಟಕದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ‘ಡಿಸಿಸಿ ಅಥವಾ ಕೆಪಿಸಿಸಿ ಒಂದರಿಂದಲೇ ಚುನಾವಣೆ ಗೆಲುವು ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ಬ್ಲಾಕ್‌ಗಳು ತಯಾರಿ ನಡೆಸಿ ಶಕ್ತಿ ತುಂಬಿದಾಗ ಮಾತ್ರವೇ ಚುನಾವಣೆ ಗೆಲುವು ಸಾಧ್ಯ. ಚುನಾವಣೆ ತಯಾರಿಯನ್ನು ಈಗಿನಿಂದಲೇ ಆರಂಭಿಸಬೇಕು’ ಎಂದರು.

ಕಾರ್ಯಕ್ರಮದಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಓಬಿಸಿ ನಗರಾಧ್ಯಕ್ಷ ಶಿವಮುಲ್ಲು, ಓಬಿಸಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಮಾರುತಿ, ನಾಗಭೂಷಣ್, ಈಶ್ವರ್ ಚಕ್ಕಡಿ, ವಕ್ತಾರ ಮಹೇಶ್ ಇದ್ದರು
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು