ಮೈಸೂರು: ತಾಲ್ಲೂಕಿನ ಮೇಟಗಳ್ಳಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿ ಅಲ್ಲಿ ವ್ಯವಹಾರ ನಡೆಸಲಾಗುತ್ತಿದ್ದ ಜಮೀನನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಆದೇಶದಂತೆ ಉಪವಿಭಾಗಾಧಿಕಾರಿ ರಕ್ಷಿತ್ ಹಾಗೂ ತಹಸೀಲ್ದಾರ್ ಗಿರೀಶ್ ನೇತೃತ್ವದ ತಂಡ ಮಂಗಳವಾರ ಮುಟ್ಟುಗೋಲು ಹಾಕಿಕೊಂಡಿತು.
ಇಲ್ಲಿನ ಸರ್ವೆ ನಂ 62/3 ನಲ್ಲಿರುವ ಸುಮಾರು ಒಂದು ಎಕ್ರೆ ಯುಎಲ್‌ಎ ಭೂ ಸ್ವಾಧೀನಗೊಂಡಿರುವ ಜಮೀನಿನಲ್ಲಿ ಮೇಟಗಳ್ಳಿ ನಿವಾಸಿ ಸಂತೋಷ್ ಹಾಗೂ ಇತರರು ಸೇರಿಕೊಂಡು ಎಂ.ಸ್ಯಾಂಡ್ ಮರಳು, ಜಲ್ಲಿ, ಇಟ್ಟಿಗೆಗಳ ವಹಿವಾಟು ನಡೆಸುತ್ತಿದ್ದರು. ಮಾಹಿತಿ ಅರಿತ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ದಾಖಲೆಗಳನ್ನ ಪರಿಶೀಲಿಸಿ ಕೂಡಲೇ ಒತ್ತುವರಿಯನ್ನು ತೆರವುಗೊಳಿಸಿ ವಶಕ್ಕೆ ಪಡೆಯುವಂತೆ ಆದೇಶ ಹೊರಡಿಸಿದ್ದರು.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಎಸಿ ಹಾಗೂ ತಹಸೀಲ್ದಾರ್ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಭೂಕಂದಾಯ ಕಾಯ್ದೆ192(A) ಪ್ರಕಾರ ಮೊಕದ್ದಮೆ ದಾಖಲಿಸುವಂತೆ ದೂರು ನೀಡಿದ್ದರು. ಮಂಗಳವಾರ ಪೊಲೀಸ್ ಭದ್ರತೆಯೊಂದಿಗೆ ಜಮೀನು ವಶಪಡಿಸಿಕೊಳ್ಳಲಾಗಿದೆ.ಕಾರ್ಯಾಚರಣೆಯಲ್ಲಿ ಆರ್.ಐ.ರಾಘವೇಂದ್ರ ನಾಯಕ್, ಗ್ರಾಮ ಅಭಿವೃದ್ಧಿ ಅಧಿಕಾರಿ ಮಹೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.