ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಸಂಪತ್ತು ವಿದೇಶಗಳಿಗೆ ವಲಸೆ: ಸಾಹಿತಿ ದೇವನೂರ ಮಹಾದೇವ ವಿಶ್ಲೇಷಣೆ

Published 26 ಆಗಸ್ಟ್ 2023, 14:04 IST
Last Updated 26 ಆಗಸ್ಟ್ 2023, 14:04 IST
ಅಕ್ಷರ ಗಾತ್ರ

ಮೈಸೂರು: ‘ಭಾರತದ ಸಂಪತ್ತು ಕಾರ್ಪೊರೇಟ್‌ಗಳ ಮೂಲಕ ಮಾಯಾರೂಪಗಳಲ್ಲಿ ವಿದೇಶಗಳಿಗೆ ವಲಸೆ ಹೋಗುತ್ತಿದೆ’ ಎಂದು ಸಾಹಿತಿ ದೇವನೂರ ಮಹಾದೇವ ವಿಶ್ಲೇಷಿಸಿದರು.

ಮೈಸೂರು ವಿಶ್ವವಿದ್ಯಾಲಯದ ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ಅಂಬೇಡ್ಕರ್ ಪೀಠ ಮತ್ತು ಇಂಡಿಯನ್ ಪಾಲಿಟ್ ಫೋರಂ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಕ್ಷೇತ್ರ ಪುನರ್‌ವಿಂಗಡಣೆ: ಅಂತರರಾಜ್ಯ ಅಸಮತೆ ಮತ್ತು ಅದರ ಪರಿಣಾಮಗಳು’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಬೆಂಗಳೂರಿನಲ್ಲಿ ಐಟಿ–ಬಿಟಿಯಲ್ಲಿ ಕೆಲಸ ಮಾಡುವವರು ಲಕ್ಷಾಂತರ ರೂಪಾಯಿ ದುಡಿಯುತ್ತಾರೆ. ಅವರ ಕೆಲಸಕ್ಕೆ ಮಾರುಕಟ್ಟೆ ದರ ಹೆಚ್ಚಿರುವ ಕಾರಣದಿಂದಾಗಿ ಅವರ ಆದಾಯವೂ ಹೆಚ್ಚಾಗಿದೆ. ಹೆಚ್ಚು ತೆರಿಗೆ ಕಟ್ಟುವ ಈ ಅದೃಷ್ಟವಂತರಿಗೆ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ವಿನಿಯಮ ದರವಿರುವ ಆಹಾರ ಪದಾರ್ಥ ಸಿಗದೇ ಇದ್ದರೆ ಅವರು ವಿದೇಶಗಳಿಂದ ಆಮದು ಮಾಡಿಕೊಂಡು ಜೀವನ ಸಾಗಿಸಬೇಕಾದರೆ ಏನಾಗುತ್ತಿತ್ತು? ಅವರ ದುಡಿಮೆ ತಿಂಗಳ ಕೊನೆಗೆ ಸಾಲುತ್ತಿರಲಿಲ್ಲ. ಈ ಸಂವೇದನೆ ನಮಗೆ ಬೇಕು. ನಮ್ಮ ಆದಾಯದ ಒಂದು ಭಾಗ ನಮ್ಮನ್ನೂ ಪೊರೆಯುತ್ತಿರುವ ಇತರ ಕಡೆಗೂ ಹರಿಯಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಒ‍ಪ್ಪಬೇಕಾಗುತ್ತದೆ: ‘ದೇಶವು ರಾಜ್ಯಗಳ ಒಕ್ಕೂಟವಾಗಿರುವುದರಿಂದ ಹಿಂದುಳಿದ ರಾಜ್ಯಗಳಿಗೆ ಆರ್ಥಿಕವಾಗಿ ಹೆಚ್ಚು ಅನುದಾನ ಹಂಚಿಕೊಂಡರೆ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ದೇಶದ ಹಸಿವು ಹಾಗೂ ಬಡತನಕ್ಕೆ ಸ್ಪಂದಿಸಬೇಕಾಗುತ್ತದೆ. ಎಲ್ಲಿವರೆಗೆ ಇದು? ಎಲ್ಲ ಕಡೆಯೂ ಸಬಲೀಕರಣ ಆಗುವವರೆಗೆ. ಅದೂ ಎಲ್ಲಿವರೆಗೆ ಎನ್ನುವುದಕ್ಕೆ ಉತ್ತರ ಎಲ್ಲಿದೆಯೋ ನನಗೆ ಗೊತ್ತಿಲ್ಲ’ ಎಂದರು.

‘ಟ್ರಿಕಲ್‌ ಡೌನ್‌ ಆರ್ಥಿಕ ಸಿದ್ಧಾಂತಕ್ಕೆ (ಆಳ್ವಿಕೆಯು ಮೇಲ್ವರ್ಗದ ಕೆಲವರಿಗೆ ಸಂಪತ್ತು ಮಾಡಲು ಉತ್ತೇಜನ ಕೊಟ್ಟರೆ ಆಗುವ ಅಭಿವೃದ್ಧಿಯು ಕೆಳಗೆ ತೊಟ್ಟಿಕ್ಕುತ್ತಾ ತಳಮಟ್ಟದಲ್ಲಿರುವ ಬಡವರಿಗೂ ತಲುಪಿ ಒಟ್ಟಾರೆ ಏಳಿಗೆಯಾಗುತ್ತದೆ ಎಂಬುದು) ಜೋತು ಬಿದ್ದ ಭಾರತದ ಆರ್ಥಿಕ ತಜ್ಞರು ಹಾಗೂ ಈಗ ಅಥವಾ ಇದುವರೆಗೆ ಆಳ್ವಿಕೆ ಮಾಡುತ್ತಿರುವ ಅಸಮರ್ಥ ನಾಯಕತ್ವ ಕೂಡ ಈ ಸಿದ್ಧಾಂತಕ್ಕೆ ಜೋತು ಬಿದ್ದು ನೇತಾಡುತ್ತಾ ತೇಲಾಡುತ್ತಿದೆ. ಈ ಸಿದ್ಧಾಂತಕ್ಕೆ ಅನುಗುಣವಾಗಿ ಅಂಬಾನಿ, ಅದಾನಿ ಮೊದಲಾದ ನೂರಾರು ಕಾರ್ಪೊರೇಟ್‌ ಉಳ್ಳವರಿಗೆ ದೇಶದ ಸಂಪತ್ತನ್ನು ಸುರಿಯುತ್ತಿದ್ದು, ಪ್ರಜೆಗಳು ಮೇಲಿಂದ ತಮಗೂ ಒಂದಿಷ್ಟು ಸೋರಬಹುದು ಎಂದು ಕಾಯುತ್ತಿದ್ದಾರೆ. ಶೇ 1ರಷ್ಟು ಜನರಿಗೆ ಶೇ 40ರಷ್ಟು ಸಂಪತ್ತನ್ನು ಮೇಲಿಂದ ಸುರಿದಿದ್ದಕ್ಕೆ ಅದು ತಳ ಕಚ್ಚಿರುವ ಶೇ 50ರಷ್ಟು ಮಂದಿಗೆ ತೊಟ್ಟಿಕ್ಕಿರುವುದು ಶೇ 3ರಷ್ಟು ಮಾತ್ರ’ ಎಂದು ಹೇಳಿದರು.

ಓದಿ... ಬಿಜೆಪಿಯಲ್ಲಿ ಈಗಿರುವುದು ಒಬ್ಬನೇ ಸಂಸದ, ಇನ್ನುಳಿದವರೆಲ್ಲ ಜೈ ಜೈ: ದೇವನೂರ ಮಹದೇವ

ಸಬಲೀಕರಣ ಹೇಗೆ?: ‘ರಾಜ್ಯಗಳ ಸಬಲೀಕರಣ ಆಗುವುದಾದರೂ ಹೇಗೆ? ಸಬಲೀಕರಣವಾಗದೇ ರಾಜ್ಯಗಳ ನಡುವಿನ ಆರ್ಥಿಕ ಅಸಮತೋಲನ ನೀಗುವುದಾದರೂ ಹೇಗೆ? ಭಾರತವು ತನ್ನ ಟ್ರಿಕಲ್ ಡೌನ್‌ ಆರ್ಥಿಕ ನೀತಿಯಿಂದ ಬಚಾವಾಗಿ ಮಧ್ಯಮ ಹಾದಿಯನ್ನು ಕಂಡುಕೊಂಡಾಗ, ರಾಜ್ಯಗಳು ಹೆಚ್ಚು ಸ್ವಾಯತ್ತವಾಗಿ ವಿಕೇಂದ್ರೀಕರಣದ ಕಡೆಗೆ ಚಲಿಸಿದಾಗ, ಸ್ಥಳೀಯವಾಗಿ ಗುಡಿ ಕೈಗಾರಿಕೆ ಹಾಗೂ ಅದಕ್ಕೆ ಮಾರುಕಟ್ಟೆ ದೊರೆತಾಗ, ಸಣ್ಣ ಸಣ್ಣ ಕೈಗಾರಿಕೆಗಳ ಸಂಖ್ಯೆ ಹೆಚ್ಚಿದಾಗ, ಇದರಿಂದ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತದೆ. ಆಗ ಸಬಲೀಕರಣ ನಡೆದಾಡತೊಡಗುತ್ತದೆ’ ಎಂದು ಪರಿಹಾರಗಳನ್ನು ಸೂಚಿಸಿದರು.

‘ರಾಜ್ಯಗಳಿಗೆ ಅಲ್ಲಿನ ಪ್ರಮುಖ ಭಾಷೆಯನ್ನು ಎಲ್ಲೆ ಮಾಡಲಾಗಿದೆ.ಇದರಲ್ಲಿ ವಿವೇಕ–ವಿವೇಚನೆ ಇದೆ. ಒಕ್ಕೂಟ ರಾಜ್ಯವನ್ನು ಯಾವುದೇ ಒಂದು ಭಾಷೆಯವರು ಆಳ್ವಿಕೆ ನಡೆಸುವಂತಾಗಬಾರದು ಎಂಬ ಅಂತರ್ಗತ ಎಚ್ಚರಿಕೆಯೂ ಅದರಲ್ಲಿದೆ. ಇದು ಭಾರತಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಈಗದು ಬಡಿದುಕೊಳ್ಳುತ್ತಿದೆ. ಭಾಷೆಯ ಎಲ್ಲೆ ಉಲ್ಲಂಘಿಸಿ, ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಸ್ಥಾನಗಳನ್ನು ನಿಗದಿಪಡಿಸಿದರೆ ಇದು ಭಾರತ ಎನ್ನುವ ಪರಿಕಲ್ಪನೆಗೆ ದುಃಸ್ವಪ್ನ. ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಸದಸ್ಯರ ಸಂಖ್ಯೆ 888ಕ್ಕೆ ಏರಿಕೆಯಾದರೆ, ಲೋಕಸಭೆಯಲ್ಲಿ ಗದ್ದಲ ಡಬಲ್ ಆಗಬಹುದಷ್ಟೆ’ ಎಂದು ಪ್ರತಿಪಾದಿಸಿದರು.

ವಕೀಲ ರವಿವರ್ಮ ಕುಮಾರ್‌ ಮಾತನಾಡಿ, ‘ಇಂತಹ ಚರ್ಚೆಗಳು ಸಂಸತ್ತಿನಲ್ಲಿ, ಚುನಾವಣಾ ಆಯೋಗದಲ್ಲಿ ನಡೆಯಬೇಕಿತ್ತು. ಆದರೆ, ಅವರು ಮಾಡಿಲ್ಲ. ಮೈಸೂರು ವಿ.ವಿ ಆಯೋಜಿಸಿರುವುದು ಅಭಿನಂದನಾರ್ಹ’ ಎಂದರು.

‘ಒಂದು ಮತ, ಒಂದು ಮೌಲ್ಯದ ಮೇಲೆ ಪ್ರಜಾತಂತ್ರವನ್ನು ಕಟ್ಟಲಾಗಿದೆ. ಜನಗಣತಿ ಎನ್ನುವುದು ಈ ದೇಶದ ಆಶಾಕಿರಣ. ಅದನ್ನು ನಡೆಸಿದರೆ ಎಲ್ಲಿ ಸತ್ಯ ಹೊರಬರುತ್ತದೆಯೋ ಎಂಬ ಆತಂಕ ಆಳುವವರಿಗೆ ಇರುತ್ತದೆ. ಜನಗಣತಿ ಮಾಡದಿದ್ದರೆ ಮೀಸಲಾತಿಯೇ ಸಿಗುತ್ತಿರಲಿಲ್ಲ’ ಎಂದು ಹೇಳಿದರು.

‘ಕ್ಷೇತ್ರ ಪುನರ್ ವಿಂಗಡಣೆ ಪಾರದರ್ಶಕವಾಗಿರಬೇಕು. ಸಾರ್ವಜನಿಕ ಚರ್ಚೆ ನಂತರ ಅದನ್ನು ಪ್ರಕಟಿಸಬೇಕು’ ಎಂದರು.

‘ಈಗ ಸಂಸದರಿಗೆ ಅದೂ ಸಂಸತ್‌ನಲ್ಲೇ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ. ಅವರು ಇಲಿಯ ರೀತಿಯಾಗಿದ್ದಾರೆ. ಎಲ್ಲರೂ ರಾಜಕೀಯ ಪಕ್ಷಗಳ ಹಿಡಿತದಲ್ಲಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾದರೆ 300 ಸ್ಥಾನಗಳು ಈವರೆಗೂ ಪ್ರಾತಿನಿಧ್ಯ ಸಿಗದವರಿಗೆ, ಮಹಿಳೆಯರಿಗೆ ದೊರೆಯುವಂತಾಗಬೇಕು. ಹಿಂದುಳಿದ ವರ್ಗಗಳಿಗೆ ಯಾವುದೇ ರೀತಿಯ ಪ್ರಾತಿನಿಧ್ಯ ಸಿಕ್ಕಿಲ್ಲ. ಅವರಿಗೆ 100 ಸೀಟು ಕೊಡಬೇಕು’ ಎಂದು ಒತ್ತಾಯಿಸಿದರು.

ಜೆಎನ್‌ಯು ವಿಶ್ರಾಂತ ಪ್ರಾಧ್ಯಾಪಕಿ ಜಾನಕಿ ನಾಯರ್, ‘ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.

ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಐಸೆಕ್ ನಿರ್ದೇಶಕ ಪ್ರೊ.ಡಿ. ರಾಜಶೇಖರ್, ನಿವೃತ್ತ ಪ್ರಾಧ್ಯಾಪಕರಾದ ನಾಗರಾಜು, ಟಿ.ಆರ್.ಚಂದ್ರಶೇಖರ್, ನಿವೃತ್ತ ಸಹ ಪ್ರಾಧ್ಯಾಪಕಿ ಸ್ವರ್ಣಮಾಲಾ ಶಿರಸಿ ಹಾಗೂ ಎನ್‌ಐಇ ಕಾರ್ಟ್ ಮಾಜಿ ನಿರ್ದೇಶಕ ಯು.ಎನ್. ರವಿಕುಮಾರ್ ಪಾಲ್ಗೊಂಡಿದ್ದರು.

ಓದಿ... ರಾಜ್ಯಸಭೆಗೆ ರಾಜ್ಯದವರೇ ಆಯ್ಕೆಯಾಗಬೇಕು: ಕೆ.ಜಯಪ್ರಕಾಶ್ ಹೆಗ್ಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT