‘ಶ್ರಮ ಸಮುದಾಯಗಳಿಗೆ ಅನ್ಯಾಯ’

ಮೈಸೂರು: ‘ದಲಿತರು ಹಾಗೂ ಶ್ರಮ ಸಮುದಾಯಗಳಿಗೆ ಮೊದಲಿನಿಂದಲೂ ಅನ್ಯಾಯವಾಗಿದೆ. ಸರ್ಕಾರಗಳು ಕಾಯಕ ಸಮುದಾಯದ ಅಭಿವೃದ್ಧಿಗೆ ಮುಂದಾಗುತ್ತಿಲ್ಲ’ ಎಂದು ಕಾಯಕ ಸಮಾಜ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ಧಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಸೋಮವಾರ ಒಕ್ಕೂಟ ಆಯೋಜಿಸಿದ್ದ ‘ರಾಜ್ಯ ಪ್ರತಿನಿಧಿಗಳ ಪರಿಷತ್ ವಾರ್ಷಿಕ ಅಧಿವೇಶನ’ದಲ್ಲಿ ಅವರು ಮಾತನಾಡಿದರು.
‘ಮೀಸಲಾತಿಯ ಸೌಲಭ್ಯ ಪಡೆದು ಎತ್ತರಕ್ಕೆ ಬೆಳೆದದವರು ನವ ಬ್ರಾಹ್ಮಣವಾದಿಗಳಾಗುತ್ತಿದ್ದಾರೆ. ಸಮುದಾಯದ ಕಡೆ ನೋಡುತ್ತಿಲ್ಲ. ದಲಿತ ಸಮುದಾಯದಲ್ಲೂ ಹೀಗೆಯೇ ಆಗುತ್ತಿದೆ. ಸಮುದಾಯಗಳ ಸ್ಥಿತಿವಂತರು ಬಡವರನ್ನು ಅಸ್ಪೃಶ್ಯರಂತೆ ನೋಡುತ್ತಿದ್ದಾರೆ’ ಎಂದರು.
‘ಬದುಕುವ ಹಕ್ಕನ್ನು ಮೇಲ್ವರ್ಗದ ಜನ ಕಿತ್ತುಕೊಳ್ಳುತ್ತಿದ್ದಾರೆ. ಮುಂದುವರಿಸಿದರೆ ತುಳಿದು ಮೇಲೆ ಬರಬೇಕಾಗುತ್ತದೆ. ಹುಬ್ಬಳ್ಳಿಯಲ್ಲಿ ಪಂಚಮಸಾಲಿಗಳು ಗೂಂಡಾಗಿರಿ ಮಾಡಿದ್ದರು. ನನ್ನ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು. ವಂಚಿತ ಸಮುದಾಯಗಳಿಗೆ ಹುತಾತ್ಮ ಆಗಲೂ ನಾನು ಸಿದ್ಧ’ ಎಂದು ಹೇಳಿದರು.
ವಿಶ್ರಾಂತ ಕುಲಪತಿ ವೆಂಕಟರಾಮಯ್ಯ ಮಾತನಾಡಿ, ‘ಶ್ರಮ ಸಮುದಾಯವು ಶೇ 50 ರಷ್ಟು ಜನಸಂಖ್ಯೆ ಹೊಂದಿದ್ದರೂ ಶಾಸಕಾಂಗದಲ್ಲಿ ಪ್ರಾತಿನಿಧ್ಯವೇ ಇಲ್ಲದಾಗಿದೆ. ಮೇಲ್ವರ್ಗಗಳು ತಳ ಸಮುದಾಯಗಳ ಮೀಸಲಿಗೆ ನುಸುಳುತ್ತಿವೆ. ಕೌಶಲಾಧಾರಿತ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸಬೇಕು. ಮುಂದಿನ ಪೀಳಿಗೆಗೆ ನ್ಯಾಯಯುತ ಹಕ್ಕುಗಳನ್ನು ಒದಗಿಸಿಕೊಡಬೇಕು’ ಎಂದರು.
ಲೇಖಕ ಮಹೇಶ್ ಚಂದ್ರಗುರು, ‘ಕರ್ಮಯೋಗವನ್ನೇ ನಂಬಿರುವ ಕಾಯಕ ಸಮಾಜ ಕರ್ನಾಟಕದ ಆರ್ಥಿಕತೆಯ ಬೆನ್ನೆಲುಬಾಗಿದೆ. ಅವರ ಕೊಡುಗೆಯನ್ನು ಗುರುತಿಸಿ ಅವರನ್ನು ಮೇಲೆತ್ತಲು ಆಳುವವರಿಗೆ ಕಣ್ಣುಗಳೇ ಇಲ್ಲವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಅಸಮಾನತೆಯನ್ನು ಬಿತ್ತುವ ಜಾತಿ ಮೂಲದಿಂದ ಬಂದ ವೃತ್ತಿಗಳನ್ನು ಏಕೆ ಕಾಯಕ ಸಮಾಜಗಳು ಮಾಡಬೇಕು. ಸಾಮಾಜಿಕ ಪರಿವರ್ತನೆಯಾಗಬೇಕೆಂದರೆ ಕೂಡಲೇ ಆ ವೃತ್ತಿಗಳನ್ನು ತೊರೆಯಿರಿ’ ಎಂದು ಸಲಹೆ ನೀಡಿದರು.
‘ಉಳ್ಳವರಿಗೆ ಮಾತ್ರವೇ ಜಾಗತೀಕರಣ ಅನುಕೂಲ ಮಾಡಿಕೊಟ್ಟಿದೆ. ಸರ್ಕಾರಕ್ಕೆ ಮತಗಳು ಬೇಕಿದೆಯೇ ಹೊರತು ಅಭಿವೃದ್ಧಿ ಬೇಕಿಲ್ಲ. ಸರ್ಕಾರವು ವೈದಿಕಶಾಹಿ ಹಾಗೂ ಬಂಡವಾಳಶಾಹಿಗಳ ನಿಯಂತ್ರಣದಲ್ಲಿದೆ. ಹೀಗಾಗಿಯೇ ಶೂದ್ರರು, ದಲಿತರು ಯಥಾಸ್ಥಿತಿಯಲ್ಲಿಯೇ ಇದ್ದಾರೆ. ಹೀಗಾಗಿಯೇ ಜಾತಿ ವಿನಾಶವಾಗಿಲ್ಲ’ ಎಂದು ಪ್ರತಿಪಾದಿಸಿದರು.
‘ಹೊಂಗಿರಣ’ ಕೃತಿಯನ್ನು ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು ಬಿಡುಗಡೆ ಮಾಡಿದರು.
ಒಕ್ಕೂಟದ ಕಾರ್ಯಾಧ್ಯಕ್ಷ ಶಿವಪುತ್ರಪ್ಪ ಇಟಗಿ, ಖಜಾಂಚಿ ಲಕ್ಷ್ಮಿಕಾಂತ್, ದಲಿತ ಸಂಘರ್ಷ ಸಮಿತಿಯ ಮಂಡ್ಯ ಜಿಲ್ಲಾಧ್ಯಕ್ಷ ನಂಜುಂಡಪ್ಪ, ಹುಬ್ಬಳ್ಳಿ ವಿಭಾಗದ ಅಧ್ಯಕ್ಷ ಭೀಮಸೇನ್, ಗಾಣಿಗ ಸಮಾಜದ ಮುಖಂಡ ವಿಜಯಕುಮಾರ್ ಇದ್ದರು.
ಒಕ್ಕೂಟದ ಸಭಾ ನಿರ್ಣಯಗಳು
l ಪ್ರವರ್ಗ 2 ‘ಎ’ಕ್ಕೆ ಈಗಿರುವ ಶೇ 15 ಮೀಸಲಾತಿ ಪ್ರಮಾಣವನ್ನು ಶೇ 27ಕ್ಕೆ ಹೆಚ್ಚಿಸಿ, ಒಳಮೀಸಲಾತಿ ನೀಡಬೇಕು
l ಮುಂದುವರಿದ ಸಮುದಾಯಗಳನ್ನು 2ಎ ವರ್ಗಕ್ಕೆ ಸೇರಿಸಬಾರದು
l ಕಾಯಕ ಸಮಾಜಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಕನಿಷ್ಠ ₹ 1 ಸಾವಿರ ಕೋಟಿ ಮೀಸಲಿಡಬೇಕು
l ಡಾ. ಅಂಬೇಡ್ಕರ್ ಭವನ ಮಾದರಿಯಲ್ಲಿ ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಕಾಯಕ ಸಮಾಜಗಳ ಸಮುದಾಯ ಭವನ ನಿರ್ಮಿಸಬೇಕು
l ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕೌಶಲ ತರಬೇತಿ ಕೇಂದ್ರ ತೆರೆಯಬೇಕು
l ಸಮುದಾಯಗಳಿಗೆ ಗುಡಿ ಕೈಗಾರಿಕೆ ಸ್ಥಾಪಿಸಲು ಉಚಿತ ಭೂಮಿ, ನೀರು ಹಾಗೂ ಮೂಲಸೌಲಭ್ಯ ನೀಡಿ ಶೇ 97 ಸಬ್ಸಿಡಿ ನೀಡಬೇಕು
l ಕಾಯಕ ಸಮಾಜಗಳ ಗುರುಪೀಠ ಸ್ಥಾಪನೆಗೆ 100 ಎಕರೆ ಭೂಮಿ ನೀಡಬೇಕು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.