ಮೈಸೂರು: ಲೋಕಸಭೆ ಚುನಾವಣೆಗಾಗಿ ತಲಾ 10 ಎಂ.ಎಲ್. ಪ್ರಮಾಣದ 26.55 ಲಕ್ಷ ಬಾಟಲಿ ಅಳಿಸಲಾಗದ ಶಾಯಿ ಪೂರೈಸುವಂತೆ ಚುನಾವಣಾ ಆಯೋಗವು ಮೈಸೂರು ಮೈಲ್ಯಾಕ್ (ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ)ಗೆ ತಿಳಿಸಿದೆ.
ಈ ಚುನಾವಣೆ ಒಂದರಿಂದಲೇ ಸಂಸ್ಥೆಗೆ ₹ 55 ಕೋಟಿ ವಹಿವಾಟು ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇಂತಹ ಶಾಯಿ ತಯಾರಿಸುವ ದೇಶದ ಏಕಮಾತ್ರ ಸಂಸ್ಥೆ ಇದಾಗಿದೆ. ಒಂದು ಬಾಟಲಿಯಿಂದ 700 ಮತದಾರರ ಬೆರಳಿಗೆ ಗುರುತು ಹಾಕಬಹುದು. ವಿವಿಧ ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಮಾರ್ಚ್ 15ರೊಳಗೆ ಪೂರೈಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.
ಶಾಯಿ ಪೂರೈಸಲು ಈಗಾಗಲೇ ಚಾಲನೆ ನೀಡಲಾಗಿದೆ. ಡಿಸೆಂಬರ್‌ನಲ್ಲಿಯೇ ಬೇಡಿಕೆ ಸಲ್ಲಿಸಿದ್ದನ್ನು ಆಧರಿಸಿ ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿ 10 ರಾಜ್ಯಗಳಿಗೆ ಈಗಾಗಲೇ ರವಾನಿಸಲಾಗಿದೆ ಎಂದು ಹೇಳಿದರು.