ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ‘ಮಾನವ ಸರಪಳಿ’ ರಚಿಸುವ ಮೂಲಕ ಭಾನುವಾರ ವಿನೂತನವಾಗಿ ಆಚರಿಸಲಾಯಿತು. ಪಾಲ್ಗೊಂಡಿದ್ದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಜನರು ‘ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಕಾಪಾಡುವುದಕ್ಕಾಗಿ ಪ್ರಜಾಪ್ರಭುತ್ವ ಬಲಪಡಿಸುತ್ತೇವೆ’ ಎಂಬ ಸಂದೇಶವನ್ನು ರವಾನಿಸಿದರು.
ಕೈ–ಕೈ ಹಿಡಿದು ನಿಲ್ಲುವ ಮೂಲಕ ನಾವೆಲ್ಲರೂ ಒಂದೇ ಎಂಬ ಒಗ್ಗಟ್ಟಿನ ಮಂತ್ರವನ್ನು ಜಪಿಸಿದರು.
ಜಿಲ್ಲೆಯಲ್ಲಿ ಮೈಸೂರು ತಾಲ್ಲೂಕಿನ ಕಳಸ್ತವಾಡಿ ಸಮೀಪದ ಸಿದ್ದಲಿಂಗಪುರ, ಮಣಿಪಾಲ್ ಆಸ್ಪತ್ರೆ, ಫೌಂಟೇನ್ ವೃತ್ತ, ಗಾಂಧಿ ನಗರದ ಅಂಬೇಡ್ಕರ್ ವೃತ್ತ, ಪುರಭವನದ ಎದುರಿನ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಹಾರ್ಡಿಂಜ್ ಸರ್ಕಲ್, ಚಾಮರಾಜೇಂದ್ರ ಮೃಗಾಲಯದ ಎದುರು, ರೇಸ್ ಕೋರ್ಸ್ ಸರ್ಕಲ್, ಪೊಲೀಸ್ ಭವನ, ಸಂಗೊಳ್ಳಿ ರಾಯಣ್ಣ ಸರ್ಕಲ್, ಕಮಾನ್ ಗೇಟ್, ರಿಂಗ್ ರಸ್ತೆ, ತಾಲ್ಲೂಕಿನ ವರುಣ ಗ್ರಾಮ, ಕೀಳನಪುರ, ಕೆಂಪಯ್ಯನಹುಂಡಿ, ಇಂಡುವಾಳು, ಗರ್ಗೇಶ್ವರಿ, ತಿ.ನರಸೀಪುರ ಪಟ್ಟಣ, ಗಂಜಾಂ ನರಸಿಂಹಸ್ವಾಮಿ ದೇವಸ್ಥಾನ, ಆಲಗೂಡು, ಕುರುಬೂರು, ಮಾಡ್ರಳ್ಳಿ ಗೇಟ್, ಜಿಲ್ಲೆಯ ಗಡಿಯಾದ ಮೂಗೂರು ಗ್ರಾಮದಲ್ಲಿ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.
‘ಜಿಲ್ಲೆಯಲ್ಲಿ 59 ಕಿ.ಮೀ. ಮಾನವ ಸರಪಳಿ ರಚಿಸಲಾಯಿತು; 60ಸಾವಿರ ಮಂದಿ ಪಾಲ್ಗೊಂಡರು’ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ನಗರದ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯಿತಿ, ನಗರಪಾಲಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆರೋಗ್ಯ ಇಲಾಖೆ,ಶಿ ಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸರ್ಕಾರೇತರ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ನಾಡಗೀತೆ, ಮುಖ್ಯ ಅತಿಥಿಗಳಿಂದ ಭಾಷಣ, ಸಂವಿಧಾನದ ಪ್ರಸ್ತಾವ ಓದುವುದು, ಮಾನವ ಸರಪಳಿಯಲ್ಲಿ ಕೈ–ಕೈ ಹಿಡಿದು ನಿಲ್ಲುವ ಕಾರ್ಯಕ್ರಮ ನಡೆಯಿತು. ಪಾಲ್ಗೊಂಡಿದ್ದವರು, 9.57ರಿಂದ 10.02ರವರೆಗೆ ಕೈ ಕೈ ಹಿಡಿದು ಮಾನವ ಸರಪಳಿ ರಚಿಸಿದರು. 10.02ರ ನಂತರ, ಪಾಲ್ಗೊಂಡಿದ್ದವರು ನಿಂತಲ್ಲೇ ಎರಡೂ ಕೈಗಳನ್ನು ಮೇಲೆತ್ತಿ ‘ಜೈಹಿಂದ್’, ‘ಜೈ ಕರ್ನಾಟಕ’ ಎಂಬ ಘೋಷಣೆ ಕೂಗಿದರು. ಅಧಿಕಾರಿಗಳು, ಬೆಳಿಗ್ಗೆಯ ತಾಲೀಮು ಮುಗಿಸಿ ಅರಮನೆಗೆ ವಾಪಸಾಗುತ್ತಿದ್ದ ದಸರಾ ಮಹೋತ್ಸವದ 13 ಆನೆಗಳನ್ನು ಕೂಡ ಸಾಲಿನಲ್ಲಿ ನಿಲ್ಲಿಸಿದ್ದು ವಿಶೇಷವಾಗಿತ್ತು. ಆನೆಗಳ ಫೋಟೊ ತೆಗೆದುಕೊಳ್ಳಲು ಜನರು ಮುಗಿಬಿದ್ದರು. ‘ಜೈಹಿಂದ್‘ ಹಾಗೂ ‘ಜೈ ಕರ್ನಾಟಕ’ ಘೋಷಣೆ ಮೊಳಗುವುದರೊಂದಿಗೆ ಕಾರ್ಯಕ್ರಮ ಅಂತ್ಯವಾಯಿತು.
ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ‘ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮಾನತೆಯನ್ನು ಸಂವಿಧಾನ ನೀಡಿದೆ. ಎಲ್ಲರನ್ನೂ ಒಂದೆಂದು ಕಾಣಬೇಕು. ಎಲ್ಲರ ಹಿತವನ್ನೂ ಕಾಪಾಡಲು ನಾವೆಲ್ಲ ಮುಂದಾಗಬೇಕು’ ಎಂದರು.
ನರಸಿಂಜರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮಾತನಾಡಿ, ‘ರಾಜ್ಯದಲ್ಲಿ ಇತಿಹಾಸ ನಿರ್ಮಾಣ ಮಾಡಿದ ಕಾರ್ಯಕ್ರಮ ಇದಾಗಿದೆ. ಕೈಹಿಡಿದು ನಿಲ್ಲುವುದರೊಂದಿಗೆ, ಪರಸ್ಪರ ಸಹಾಯ ಹಸ್ತ ಚಾಚುವುದನ್ನು ಎಲ್ಲರೂ ಮಾಡಬೇಕು. ಜಾತಿ ಯಾವುದೇ ಇರಬಹುದು; ಯಾರೂ ಇಂಥಾದ್ದೇ ಜಾತಿ ಅಥವಾ ಧರ್ಮ ಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಜಾತಿ ವ್ಯವಸ್ಥೆ ಎನ್ನುವುದು ನಾವು ಮಾಡಿಕೊಂಡಿರುವಂಥದ್ದು. ಇಂತಹ ನಮ್ಮ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು. ಮಾನವೀಯ ಸಂಬಂಧವನ್ನು ಯಾವುದೇ ಕಾರಣಕ್ಕೂ ಮರೆಯಬಾರದು’ ಎಂದರು.
‘ಡಾ.ಬಿ.ಆರ್. ಅಂಬೇಡ್ಕರ್ ದೇಶಕ್ಕೆ ಅತ್ಯುತ್ತಮ ಸಂವಿಧಾನವನ್ನು ನೀಡಿದ್ದಾರೆ. ಅದನ್ನು ನಾವೆಲ್ಲರೂ ನಮಗಾಗಿ ಅರ್ಪಿಸಿಕೊಂಡು ಶಾಸನವಾಗಿ ಒಪ್ಪಿಕೊಂಡಿದ್ದೇವೆ. ಸಮಾನತೆ ಎಂದಾಕ್ಷಣ ಆಸ್ತಿ–ಅಂತಸ್ತು ಪಡೆದುಕೊಳ್ಳುವುದು ಎಂದರ್ಥವಲ್ಲ. ಶೈಕ್ಷಣಿಕ, ಸಾಮಾಜಿಕ ಹಾಗೂ ಸಮಾನತೆ ಎಲ್ಲರಿಗೂ ದೊರೆಯಬೇಕು. ಆದರೆ, ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದಿದ್ದರೂ ಸಮಾನತೆ ಸಾಧಿಸಲು ಸಾಧ್ಯವಾಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಎಲ್ಲರೂ ನಮ್ಮಂತೆಯೇ ಎಂದು ಎಲ್ಲರೂ ಭಾವಿಸಬೇಕು. ನಾವು ಪ್ರಾಣಿ–ಪಕ್ಷಿಗಳನ್ನು ಬಹಳ ಮಮತೆಯಿಂದ ನೋಡುತ್ತೇವೆ. ಆದರೆ, ಮನುಷ್ಯ– ಮನುಷ್ಯನ ನಡುವಿನ ಬಾಂಧವ್ಯ ಹೇಗಿದೆ ಎಂಬುದನ್ನು ನೋಡಿದಾಗ ಶೋಚನೀಯ ಪರಿಸ್ಥಿತಿ ಕಾಣಿಸುತ್ತಿದೆ. ಇದು ದೂರಾಗಬೇಕಾದರೆ, ಇತರರೂ ನಮ್ಮಂತೆಯೇ ಎಂದು ತಿಳಿದುಕೊಳ್ಳಬೇಕು’ ಎಂದರು.
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ದಸರಾ ಆನೆಗಳೂ ಸಾಥ್ ನೀಡಿದವು.#DemocracyDay pic.twitter.com/SeBMnvRTCg
— Prajavani (@prajavani) September 15, 2024
ಶಾಸಕರಾದ ಕೆ.ಹರೀಶ್ ಗೌಡ, ಡಿ.ರವಿಶಂಕರ್, ಮುಡಾ ಅಧ್ಯಕ್ಷ ಕೆ.ಹರೀಶ್ ಗೌಡ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರವೀಂದ್ರ ಹೆಗಡೆ, ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಮಾಜಿ ಮೇಯರ್ ನಾರಾಯಣ ಪಾಲ್ಗೊಂಡಿದ್ದರು.
ಬಿಜೆಪಿ ಹಾಗೂ ಜೆಡಿಎಸ್ ಜನಪ್ರತಿನಿಧಿಗಳು ಪಾಲ್ಗೊಳ್ಳಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.