ಭಾನುವಾರ, ಏಪ್ರಿಲ್ 2, 2023
33 °C
‘ಯುವ ನಾಯಕರ ಜನ್ಮದಿನೋತ್ಸವದ ಸಂಭ್ರಮ’ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅಭಿಮತ

‘ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆಲ್ಲಿಸುವ ಗುರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಯಪುರ (ಮೈಸೂರು): ‘ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ  ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ’ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ದಾರಿಪುರದ ಕೆಎಸ್ಆರ್‌ಟಿಸಿ ಬಡಾವಣೆ ಮೈದಾನ ದಲ್ಲಿ ಭಾನುವಾರ ಆಯೋಜಿಸಿದ್ದ ‘ಯುವ ನಾಯಕರ ಜನ್ಮದಿನೋತ್ಸವದ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಕೊಡುಗೆಯಾಗಿ ನೀಡಬೇಕು’ ಎಂದರು.

‘ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇನ್ನೂ ಅನೇಕ ಕೆಲಸಗಳು ಬಾಕಿ ಉಳಿದಿದ್ದು, ಮುಂದಿನ ದಿನಗಳಲ್ಲಿ ಪೂರ್ಣಗೊಳಿಸ ಲಾಗುವುದು. ತಾಲ್ಲೂಕಿನಲ್ಲಿ ರಮ್ಮನ ಹಳ್ಳಿ, ಶ್ರೀರಾಂಪುರ, ಕಡಕೊಳ ಪಟ್ಟಣ ಪಂಚಾಯಿತಿ, ಹೂಟಗಳ್ಳಿ ಮತ್ತು ಬೆಳವಾಡಿಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ’ ಎಂದು ತಿಳಿಸಿದರು.

‘ವ್ಯಕ್ತಿಯೊಬ್ಬರ ಸವಾಲನ್ನು ಸ್ವೀಕರಿಸಿ ನಮ್ಮ ಕಾರ್ಯಕರ್ತರು ಇಂದು ಲಕ್ಷ ಸಂಖ್ಯೆಯಲ್ಲಿ ಜನರನ್ನು ಸೇರಿಸಿದ್ದಾರೆ. ಕಾರ್ಯಕರ್ತರೇ ನಮ್ಮ ಆಸ್ತಿ. ನಾನು ಯಾರ ಬಗ್ಗೆಯೂ ಏಕವಚನದಲ್ಲಿ ಮಾತನಾಡುವುದಿಲ್ಲ. ನಿಖಿಲ್ ಕುಮಾರಸ್ವಾಮಿ ಹಾಗೂ ನನ್ನ ಪುತ್ರ ಹರೀಶ್ ಗೌಡ ಅವರ ಜನ್ಮದಿನ ಆಚರಿಸಿರುವುದಕ್ಕೆ ಕ್ಷೇತ್ರದ ಮತದಾರರಿಗೆ ಚಿರಋಣಿಯಾಗಿದ್ದೇನೆ’ ಎಂದರು.

ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ‘ಜೆಡಿಎಸ್ ಪಕ್ಷಕ್ಕೆ 35ರಿಂದ 40 ಸ್ಥಾನಗಳನ್ನು ಕೊಟ್ಟರೆ ಸಾಲುವುದಿಲ್ಲ. ಇತರೆ ರಾಜಕೀಯ ಪಕ್ಷಗಳು ನಮಗೆ ಕಿಂಗ್ ಮೇಕರ್ ಎಂಬ ಹಣೆಪಟ್ಟಿ ಕಟ್ಟುತ್ತವೆ. ಸರಳ ಬಹುಮತದೊಂದಿಗೆ 123 ಸ್ಥಾನಗಳನ್ನು ಗೆಲ್ಲಿಸಿ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದು ಮನವಿ ಮಾಡಿದರು.

‘ಬೀಚನಹಳ್ಳಿ ಜಯಪ್ರಕಾಶ್ ಚಿಕ್ಕಣ್ಣ, ಕೆ.ಮಹದೇವು ಅವರ ಪುತ್ರ ಪ್ರಸನ್ನ ಸೇರಿದಂತೆ ಹಲವಾರು ಯುವನಾಯಕರು ರಾಜಕೀಯವಾಗಿ ಬೆಳೆಯಲು ಜೆಡಿಎಸ್‌ನಲ್ಲಿ ಉತ್ತಮ ಅವಕಾಶವಿದೆ’ ಎಂದರು.

ಸರಿಗಮಪ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

ಶಾಸಕರಾದ ಕೆ.ಮಹದೇವ್, ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಬಿಚನಹಳ್ಳಿ ಚಿಕ್ಕಣ್ಣ, ಲಲಿತಾ ಜಿ.ಟಿ.ದೇವೇಗೌಡ, ಮೈಮುಲ್ ಅಧ್ಯಕ್ಷ ಪ್ರಸನ್ನ, ಬೆಳವಾಡಿ ಶಿವಮೂರ್ತಿ, ಕೋಟೆಹುಂಡಿ ಮಹದೇವು, ಕೆ.ವಿ.ಮಲ್ಲೇಶ್, ಮಾಜಿ ಮೇಯರ್‌ ಎಂ.ಜೆ ರವಿಕುಮಾರ್, ಜಯಪುರ ಜವರನಾಯಕ, ಉದ್ಬೂರು ಮಹದೇವಸ್ವಾಮಿ, ಯರಗನಹಳ್ಳಿ ರಘು, ಅಬ್ದುಲ್ ಮುತಾಲಿಫ್, ದಾರಿಪುರ ಬಸವಣ್ಣ, ಜಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷ ಡಿ.ಬಸವಣ್ಣ ಇದ್ದರು.

ವಾಹನ ದಟ್ಟಣೆ: ಕಾರ್ಯಕ್ರಮದಿಂದಾಗಿ ಮೈಸೂರು– ಮಾನಂದವಾಡಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಸಂಕಷ್ಟ ಎದುರಾಯಿತು. ಪೊಲೀಸರು ಉದ್ಬೂರು ಗೇಟ್ ಮತ್ತು ಜಯಪುರದ ಕಡಕೊಳ ಮುಖ್ಯರಸ್ತೆಗೆ ಬ್ಯಾರಿಕೇಡ್ ಹಾಕಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿದರು.

ಜನ್ಮದಿನ ಆಚರಿಸಿಕೊಂಡ ಯುವ ನಾಯಕರು

ನಿಖಿಲ್ ಕುಮಾರಸ್ವಾಮಿ ರೋಡ್ ಷೋ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದರು. ಮುಖಂಡರು ಜಿ.ಡಿ.ಹರೀಶ್ ಗೌಡ ಮತ್ತು ನಿಖಿಲ್ ಕುಮಾರಸ್ವಾಮಿ ಅವರಿಗೆ ಕ್ರೇನ್ ಮೂಲಕ ವಿವಿಧ ಹಣ್ಣುಗಳ ಬೃಹತ್‌ ಹಾರ ಹಾಕಿ ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಬೃಹತ್ ಗಾತ್ರದ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಲಾಯಿತು.

ಚಾಮುಂಡೇಶ್ವರಿ ಕ್ಷೇತ್ರ, ಮೈಸೂರು ನಗರ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದರು. ಈ ಭಾಗದಲ್ಲಿ ಜೆಡಿಎಸ್ ನಾಯಕರ ಫ್ಲೆಕ್ಸ್‌ಗಳು ರಾರಾಜಿಸಿದವು. ಯುವಕರು ಜೆಡಿಎಸ್ ಬಾವುಟ ಹಿಡಿದು ಬೈಕ್ ರ‍್ಯಾಲಿ ಮೂಲಕ ಸಮಾವೇಶಕ್ಕೆ ಆಗಮಿಸಿದರು. ಅಭಿಮಾನಿಯೊಬ್ಬರು ಕಾರ್ಯಕ್ರಮದಲ್ಲೇ ಜಿ.ಡಿ.ಹರೀಶ್ ಗೌಡ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಚಿತ್ರ ಬಿಡಿಸಿ ಕೊಡುಗೆಯಾಗಿ ನೀಡಿದರು.

ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರಸ್ವಾಮಿ ಸಂಜೆ 5 ಗಂಟೆಗೆ ಆಗಮಿಸಿದರು. ಅನೇಕರು ಕಾರ್ಯಕ್ರಮದಿಂದ ಹೊರ ನಡೆದರು.

‘ನಾನು ಕ್ರಿಮಿನಲ್ ಅಲ್ಲ’

‘ಸ್ವಾಭಿಮಾನಿ ಪಡೆಯ ಮುಖಂಡರೊಬ್ಬರು ಈ ಹಿಂದೆ ಕಾಂಗ್ರೆಸ್ ಪಕ್ಷದ ಸೇರ್ಪಡೆ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಎದುರೇ, ನನ್ನನ್ನು ಕ್ರಿಮಿನಲ್ ಎಂದು ಸಂಬೋಧಿಸಿದ್ದರು. ನನ್ನ ಚಾರಿತ್ರ್ಯವೇನು ಎಂಬುದು ಕ್ಷೇತ್ರದ ಮತದಾರರಿಗೆ ತಿಳಿದಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಾನು ಮತ್ತು ನನ್ನ ತಂದೆ ರಾಜಕೀಯ ಮಾಡಿಕೊಂಡು ಬಂದಿದ್ದೇವೆ. ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತಿದ್ದೇವೆ. ನಾನು ಕ್ರಿಮಿನಲ್ ಅಲ್ಲ. ಆಡುವ ಮಾತಿನಲ್ಲಿ ಹಿಡಿತವಿರಬೇಕು’ ಎಂದು ಜಿ.ಡಿ. ಹರೀಶ್‌ ಗೌಡ ಸಲಹೆ ನೀಡಿದರು.

***

‌ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರುವ ಅರ್ಹತೆ ಹೊಂದಿದ್ದಾರೆ.‌

–ಜಿ.ಡಿ.ಹರೀಶ್ ಗೌಡ, ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು