ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕರಾಗಿ; ಮನುಷ್ಯತ್ವವೂ ಇರಲಿ: ಡಾ.ಬಿ.ಎಸ್.ನಾಗೇಂದ್ರ ಪರಾಶರ್‌

ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪದವೀಧರರ 14ನೇ ದಿನಾಚರಣೆ
Last Updated 31 ಮಾರ್ಚ್ 2022, 12:30 IST
ಅಕ್ಷರ ಗಾತ್ರ

ಮೈಸೂರು: ‘ಸಾಕಷ್ಟು ಓದಬಹುದು, ದುಡಿಯಲೂಬಹುದು. ಯಶಸ್ಸು ಸಾಧಿಸಿ ನಾಲ್ಕಾರು ಜನರಿಗೆ ಮಾರ್ಗದರ್ಶಕರೂ ಆಗಬಹುದು. ಆದರೆ ಇಂದು ಎಲ್ಲೆಡೆ ಮನುಷ್ಯತ್ವದ ಕೊರತೆ ಕಾಡುತ್ತಿದೆ. ಆದ್ದರಿಂದ ಮೊದಲು ಮನುಷ್ಯರಾಗುವತ್ತ ಯೋಚಿಸಿ. ಮನುಷ್ಯತ್ವದಿಂದ ನಡೆದುಕೊಳ್ಳುವುದನ್ನು ಕಲಿಯಿರಿ’ ಎಂದು ಶಿಮ್ಲಾದ ಬಹ್ರಾ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಎಸ್.ನಾಗೇಂದ್ರ ಪರಾಶರ್‌ ವಿದ್ಯಾರ್ಥಿ ಸಮೂಹಕ್ಕೆ ಕಿವಿಮಾತು ಹೇಳಿದರು.

ನಗರದ ಊಟಿ ರಸ್ತೆಯ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಗುರುವಾರ ನಡೆದ ಪದವೀಧರರ 14ನೇ ದಿನಾಚರಣೆಯಲ್ಲಿ ಮಾತನಾಡಿದ ಅವರು ‘ಶೇ 30 ಯುವಸಮೂಹ ದೇಶದಲ್ಲಿ ಶಿಕ್ಷಣದಿಂದ ವಂಚಿತವಾಗಿದೆ. ಇಂತಹ ಸ್ಥಿತಿಯಲ್ಲಿ ನೀವು ಕಲಿತಿದ್ದೀರಿ. ಇಲ್ಲಿವರೆಗೂ ಕಲಿತಿರೋದು ಕಾಲು ಭಾಗವಷ್ಟೇ. ಸ್ವಂತ ಅನುಭವದಿಂದ ಕಾಲು ಭಾಗ ಕಲಿಯಲಿದ್ದೀರಿ. ಗುರು–ಹಿರಿಯರು, ಸಂಬಂಧಿಕರು ಕಾಲು ಭಾಗ ಕಲಿಸಿದರೆ; ಜೀವನ ಉಳಿದದ್ದನ್ನು ಕಲಿಸಲಿದೆ’ ಎಂದು ತಿಳಿಸಿದರು.

‘ಯಶಸ್ಸಿಗೆ ಯಾವುದೇ ಸೂತ್ರವಿಲ್ಲ. ಕಷ್ಟಪಟ್ಟು ಕೆಲಸ ಮಾಡಿ. ಅಂದರೆ ದಿನವಿಡಿ ದುಡಿಯಿರಿ ಎಂದರ್ಥವಲ್ಲ. ನೀವು ಮಾಡುವ ಕೆಲಸದಲ್ಲಿ ಪ್ರೀತಿಯಿರಲಿ. ನೌಕರರಾಗಿ ದುಡಿಯಬೇಡಿ. ನೀವು ಕೆಲಸ ಮಾಡುವ ಸಂಸ್ಥೆ ನಿಮ್ಮದೇ ಎಂಬ ಭಾವನೆಯಲ್ಲಿ ದುಡಿಯಿರಿ. ಆಗ ನಿಮಗೆ ಆಕಾಶವೂ ಮಿತಿಯಾಗಲ್ಲ. ದುಡ್ಡು, ಕೀರ್ತಿಯ ಹಿಂದೆ ಬೀಳಬೇಡಿ. ಕೆಲಸದ ಬೆನ್ನತ್ತಿ ಸಾಕು. ಎಲ್ಲವೂ ನಿಮ್ಮಿಂದೆ ಬರುತ್ತೆ’ ಎಂದರು.

‘ನಾನು ಕೆಲಸಗಾರ ಎಂಬುದನ್ನು ತೋರಿಸಿಕೊಳ್ಳಲು ಮುಂದಾಗಬೇಡಿ. ನಾನಿಲ್ಲದಿದ್ದರೇ ಆ ಕೆಲಸ ಮಾಡೋಕೆ ಆಗೋದಿಲ್ಲ ಎಂಬ ರೀತಿ ಬೆಳೆಯಿರಿ. ಎಷ್ಟೇ ಬೆಳೆದರೂ ಸರಳವಾಗಿರಿ. ಸುರಕ್ಷತಾ, ಭದ್ರತಾ ವಲಯದಲ್ಲಿರಲು ಹಂಬಲಿಸಬೇಡಿ. ಕಷ್ಟಕ್ಕೆ ಎದೆಗುಂದದೆ, ಬೆನ್ನು ತೋರದೆ ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ಹತ್ತಿ. ಆಯಾ ಕಾಲಘಟ್ಟಕ್ಕೆ ತಕ್ಕಂತೆ ತಂತ್ರಜ್ಞಾನದಲ್ಲಿ ನೈಪುಣ್ಯತೆ ಸಾಧಿಸಿ. ಅಸಾಧ್ಯ ಎಂಬುದು ನಿಮ್ಮಿಂದ ಬರಬಾರದ ಪದವಾಗಿರಲಿ. ಯಶಸ್ಸು ಗುರಿಯಲ್ಲ. ಪ್ರಯಾಣವಷ್ಟೇ. ಆರೋಗ್ಯ–ನೆಮ್ಮದಿ ಕಳೆದುಕೊಂಡು ಸಾಧಕರಾದರೆ ಅದು ಯಶಸ್ಸೇ ಅಲ್ಲ’ ಎಂದು ಪರಾಶರ್‌ ಘಟಿಕೋತ್ಸವದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿ ಸಮೂಹಕ್ಕೆ ಕಿವಿಮಾತು ಹೇಳಿದರು.

‘ನನ್ನಿಂದಾಗಲ್ಲ ಎಂಬ ಭಯಬಿಡಿ. ಆಕಸ್ಮಾತ್‌ ವಿಫಲರಾದರೆ? ಬೇಡವೇ ಬೇಡ. ಸೋಲಿನ ಬಗ್ಗೆ ಚಿಂತಿಸಲೇಬೇಡಿ. ಬದುಕು ಬಾಕ್ಸಿಂಗ್‌ ರಿಂಗ್‌ ಇದ್ದಂತೆ. ರಿಂಗ್‌ನೊಳಗೆ ಬಾಕ್ಸರ್‌ ಎಷ್ಟೇ ಸಲ ಕೆಳಕ್ಕೆ ಬಿದ್ದರೂ; ಆತ ಮತ್ತೆ ಮೇಲೆಳುತ್ತಿದ್ದರೆ ಸೋತಿರಲ್ಲ ಎಂದರ್ಥ. ನಮ್ಮ ಜೀವನವೂ ಅಷ್ಟೇ. ಪ್ರಯತ್ನ, ಕಲಿಕೆ ನಿರಂತರವಾಗಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದು ಆತ್ಮವಿಶ್ವಾಸದ ನುಡಿಗಳನ್ನೇಳಿದರು.

‘ಪ್ರಜಾವಾಣಿ’ ಇ–ಪೇಪರ್‌ ಓದುಗ!

‘ಒಂದೊಂದೇ ಭಾಷೆ ಕಣ್ಮರೆಯಾಗುತ್ತಿವೆ. ಭಾಷೆ ಉಳಿಯಬೇಕಾದರೆ ಎಲ್ಲರೂ ಮಾತೃಭಾಷೆಯಿಂದ ಎಂದಿಗೂ ದೂರವಾಗಲೇಬಾರದು. ರಾಷ್ಟ್ರೀಯ ಶಿಕ್ಷಣ ನೀತಿ–2020ರಡಿ ಪದವಿ, ಸ್ನಾತಕೋತ್ತರ ಶಿಕ್ಷಣವನ್ನು ಸಹ ಮಾತೃಭಾಷೆಯಲ್ಲೇ ಪಡೆಯಬಹುದಾಗಿದೆ’ ಎಂದು ಪರಾಶರ್, ವಿದ್ಯಾರ್ಥಿ ಸಮೂಹಕ್ಕೆ ತಿಳಿಸಿದರು.

‘ಹಿಮಾಚಲಪ್ರದೇಶದಲ್ಲಿ ವಾಸವಿದ್ದರೂ ನಿತ್ಯವೂ ಕನ್ನಡ ನಾಡಿನ ವಿದ್ಯಮಾನವನ್ನು ಟಿವಿ ಚಾನೆಲ್‌ಗಳ ಮೂಲಕ ತಿಳಿದುಕೊಳ್ಳುವೆ. ‘ಪ್ರಜಾವಾಣಿ’ಯ ಇ–ಪೇಪರ್‌ ಓದುವೆ’ ಎಂದು ತಮ್ಮ ಭಾಷಾಭಿಮಾನ ಹೇಳಿಕೊಂಡರು.

‘ಜೆಎಸ್‌ಎಸ್‌ಗೆ ಜೀವನ ಪರ್ಯಂತ ಋಣಿ’

‘1981–83ರಲ್ಲಿ ನಂಜನಗೂಡಿನ ಜೆಎಸ್‌ಎಸ್‌ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ನಾನು. ಆಗ ಶುಲ್ಕ ಕಟ್ಟಲು ನನ್ನ ಬಳಿ ಹಣವಿರಲಿಲ್ಲ. ಸಂಸ್ಥೆ ಶಿಕ್ಷಣ ಕೊಟ್ಟಿದೆ. ಬದುಕು ನೀಡಿದೆ. ನೈತಿಕ ಮೌಲ್ಯವನ್ನು ಕಲಿಸಿದೆ. ನನ್ನ ಜೀವನ ಪರ್ಯಂತ ಸಂಸ್ಥೆಗೆ ಋಣಿಯಾಗಿರುವೆ’ ಎಂದು ಪರಾಶರ್‌ ಗದ್ಗದಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT