ಸಾಮಾಜಿಕ ಜಾಲತಾಣದ ವ್ಯಸನದ ದುಷ್ಪರಿಣಾಮ ಬಿಂಬಿಸುವ ‘ಕಲೆ’ ಗಮನಸೆಳೆಯಿತು. ಮೊಬೈಲ್ ಫೋನ್‌ನಲ್ಲಿ ವಾಟ್ಸ್‌ಆ್ಯಪ್ ಫೇಸ್‌ಬುಕ್ ಯೂಟ್ಯೂಬ್ ಇನ್‌ಸ್ಟಗ್ರಾಂ ಎಕ್ಸ್ ಮೊದಲಾದವುಗಳನ್ನು ನೋಡುತ್ತಾ ಮುಳುಗಿದರೆ ಕೊನೆಗೆ ಗುಂಡಿಗೆ ಬೀಳಬೇಕಾಗುತ್ತದೆ ಎಂಬ ಸಂದೇಶವನ್ನು ಅದು ಕಟ್ಟಿಕೊಟ್ಟಿತು. ಇಂದಿನ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದರು ಎಷ್ಟರ ಮಟ್ಟಿಗೆ ಮೊಬೈಲ್ ಫೋನ್‌ಗೆ ದಾಸರಾಗಿದ್ದಾರೆ ಎಂಬುದನ್ನು ಅದು ಬಿಂಬಿಸಿತು. ಭ್ರೂಣವೂ ಮೊಬೈಲ್ ಫೋನ್ ಹಿಡಿದುಕೊಂಡಿರುವ ಕಲಾಕೃತಿ ಗಮನಸೆಳೆಯಿತು. ‘ಸಾಮಾಜಿಕ ಜಾಲತಾಣದ ಬಲೆ’ಯಲ್ಲಿ ಸಿಲುಕಿದ ಮನುಷ್ಯರ ಪಾಡನ್ನು ಅದು ಚಿತ್ರಿಸಿತು.
ಪರಂಪರೆ ಮುಂದುವರಿಸಲು...
ಬೆಂಗಳೂರಿನ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಡಿ. ಮಹೇಂದ್ರ ‘ಮೈಸೂರಿನಲ್ಲಿ ಕಲೆ ಸಂಸ್ಕೃತಿಗೆ ಬಹಳ ಪ್ರೋತ್ಸಾಹ ಇದೆ. ಅದು ಯಾವ ರಾಜರ ಆಸ್ಥಾನದಲ್ಲೂ ನಡೆದಿಲ್ಲ. ಇದು ಮೈಸೂರಿನ ಹಿರಿಮೆ. ಆ ಪರಂಪರೆಯನ್ನು ಸರ್ಕಾರ ಮುಂದುವರಿಸಿಕೊಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್ ‘ಡಿಜಿಟಲ್ ಆರ್ಟ್ ಎಐ ಮಾಧ್ಯಮ ಶಿಲ್ಪಕಲೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿದೆ. 3ಡಿ ಡಿಜಿಟಲ್ ಪ್ರಿಂಟ್ ಕೂಡ (360 ಡಿಗ್ರಿ ಡಿಜಿಟಲ್ ಆರ್ಟ್) ತೆಗೆದುಕೊಳ್ಳಬಹುದಾಗಿದೆ. ಅಷ್ಟರ ಮಟ್ಟಿಗೆ ತಂತ್ರಜ್ಞಾನ ಮುಂದುವರಿದಿದೆ’ ಎಂದರು. ಮುಂಬೈನ ಅನಿಮೇಷನ್ ಕಲಾವಿದ ಕಾವಾದ ಹಳೆಯ ವಿದ್ಯಾರ್ಥಿ ವೈಭವ್ ಕುಮರೇಶ್ ಮಾತನಾಡಿದರು.