ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಜಿಲ್ಲೆಯಲ್ಲಿ ಅಪ್ಪಂದಿರಿಗೆ ಕ್ಷೇತ್ರ: ಪುತ್ರರು ಅತಂತ್ರ

ನಂಜನಗೂಡಿನಲ್ಲಿ ದರ್ಶನ್‌ಗೆ ಟಿಕೆಟ್‌, ವರುಣಾದಲ್ಲಿ ಸಿದ್ದರಾಮಯ್ಯ, ತಿ.ನರಸೀಪುರಕ್ಕೆ ಮಹದೇವಪ್ಪ
Last Updated 26 ಮಾರ್ಚ್ 2023, 6:02 IST
ಅಕ್ಷರ ಗಾತ್ರ

ಮೈಸೂರು: ಮಕ್ಕಳು ಬಯಸಿದ್ದ ಕ್ಷೇತ್ರದಲ್ಲಿ ಅಪ್ಪಂದಿರಿಗೆ ಅವಕಾಶ, ತಂದೆ ನಿಧನದಿಂದ ಪುತ್ರನಿಗೆ ಅವಕಾಶ..

– ಬರಲಿರುವ ವಿಧಾನಸಭೆ ಚುನಾವಣೆಗೆ ಶನಿವಾರ ಕಾಂಗ್ರೆಸ್‌ ಪ್ರಕಟಿಸಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯ ವಿಶೇಷಗಳಿವು. ಪಟ್ಟಿ ಬಂದ ಬಳಿಕ ಕೆಲವು ಕ್ಷೇತ್ರಗಳಲ್ಲಿ ಕಣ ಚಿತ್ರಣವೇ ಬದಲಾಗಿದ್ದು, ಎರಡು ಕ್ಷೇತ್ರಗಳಲ್ಲಿ ಇಬ್ಬರು ಅಪ್ಪಂದಿರಿಗೆ ಅಚ್ಚರಿಯ ಅವಕಾಶ ಸಿಕ್ಕಿದೆ. ಅವರ ಮಕ್ಕಳು ಖಾಲಿ ಉಳಿದಿದ್ದಾರೆ.

ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದ ಸಿದ್ದರಾಮಯ್ಯ ಅವರಿಗೆ ವರುಣಾದಲ್ಲಿ ಅವಕಾಶ ಸಿಕ್ಕಿದ್ದು, ಅಲ್ಲಿನ ಶಾಸಕ, ಅವರ ಮಗ ಡಾ.ಯತೀಂದ್ರ ಅತಂತ್ರರಾಗಿದ್ದಾರೆ. ನಂಜನಗೂಡು ಟಿಕೆಟ್‌ ಆಕಾಂಕ್ಷಿಯಾಗಿದ್ದ ಡಾ.ಎಚ್‌.ಸಿ.ಮಹದೇವಪ್ಪ ಅವರಿಗೆ ತಿ.ನರಸೀಪುರದಲ್ಲಿ ಅವಕಾಶ ಸಿಕ್ಕಿದ್ದು, ಅಲ್ಲಿ ಟಿಕೆಟ್‌ ಬಯಸಿದ್ದ ಅವರ ಮಗ ಸುನೀಲ್‌ ಬೋಸ್‌ ಅವರಿಗೆ ಮತ್ತೆ ನಿರಾಸೆಯಾಗಿದೆ. ಅವರು ಕಳೆದ ಬಾರಿಯೂ ಆಕಾಂಕ್ಷಿಯಾಗಿದ್ದರು.

ದರ್ಶನ್‌ ಧ್ರುವನಾರಾಯಣ ಕಣಕ್ಕೆ: ನಂಜನಗೂಡು ಟಿಕೆಟ್‌ಗೆ ಅರ್ಜಿ ಸಲ್ಲಿಸಿ ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರ ನಿಧನದಿಂದಾಗಿ, ಅವರ ಪುತ್ರ ದರ್ಶನ್‌ ಧ್ರುವನಾರಾಯಣಗೆ ಟಿಕೆಟ್‌ ಸಿಕ್ಕಿದೆ. ದರ್ಶನ್‌ ಅವರಿಗೇ ಟಿಕೆಟ್‌ ಕೊಡಬೇಕೆಂಬ ಆಗ್ರಹ ದೊಡ್ಡಮಟ್ಟದಲ್ಲಿ ಎದ್ದ ಪರಿಣಾಮ ಇದು.

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ, ಕೃಷ್ಣರಾಜ, ಚಾಮರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿಲ್ಲ. ಉಳಿದ ಎಂಟು ಕ್ಷೇತ್ರಗಳ ಪೈಕಿ, ಹಾಲಿ ಶಾಸಕರಾದ ಹುಣಸೂರಿನ ಎಚ್‌.ಪಿ.ಮಂಜುನಾಥ್‌, ನರಸಿಂಹರಾಜ ಕ್ಷೇತ್ರದ ತನ್ವೀರ್ ಸೇಠ್ ಮತ್ತು ಎಚ್‌.ಡಿ.ಕೋಟೆಯ ಸಿ.ಅನಿಲ್‌ ಕುಮಾರ್‌ ಅವರಿಗೆ ಮತ್ತೆ ಅವಕಾಶ ದೊರಕಿದೆ. ಕಳೆದ ಬಾರಿ ಸೋತಿದ್ದ ಮಾಜಿ ಶಾಸಕ ಕೆ.ವೆಂಕಟೇಶ್‌ ಅವರಿಗೆ ಪಿರಿಯಾಪಟ್ಟಣದಲ್ಲಿ ಮತ್ತೆ ಅವಕಾಶ ದೊರಕಿದೆ.

ಕಳೆದ ಬಾರಿ ತಿ.ನರಸೀಪುರದಲ್ಲಿ ಜೆಡಿಎಸ್‌ನ ಅಶ್ವಿನ್‌ಕುಮಾರ್ ಎದುರು ಸೋಲು ಕಂಡಿದ್ದ ಡಾ.ಎಚ್‌.ಸಿ.ಮಹದೇವಪ್ಪ ನಂಜನಗೂಡು ಕ್ಷೇತ್ರ ಬಯಸಿದ್ದರು. ಆದರೆ ಅವರಿಗೆ ತಿ.ನರಸೀಪುರದಲ್ಲಿ ಅವಕಾಶ ಸಿಕ್ಕಿದೆ.

ಕಳೆದ ಬಾರಿ ಜೆಡಿಎಸ್‌ನ ಸಾ.ರಾ.ಮಹೇಶ್‌ ಎದುರು ಸೋತಿದ್ದ, ಡಿ.ರವಿಶಂಕರ್‌ ಅವರಿಗೆ ಎರಡನೇ ಬಾರಿ ಕೃಷ್ಣರಾಜನಗರ ಕ್ಷೇತ್ರದಲ್ಲಿ ಅವಕಾಶ ದೊರಕಿದೆ. ಅವರ ತಂದೆ ದೊಡ್ಡಸ್ವಾಮೇಗೌಡ 2013ರಲ್ಲಿ ಕಾಂಗ್ರೆಸ್‌ನಿಂದ
ಸ್ಪರ್ಧಿಸಿದ್ದರು.

ನಂಜನಗೂಡು ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿತ್ತು. ಈ ಬಾರಿ ಮೊದಲ ಬಾರಿಗೆ ಸ್ಪರ್ಧಿಸಲಿರುವ ದರ್ಶನ್‌ ಧ್ರುವನಾರಾಯಣ ಪಕ್ಷವನ್ನು ಗೆಲುವಿನ ದಡ ಮುಟ್ಟಿಸುವರೇ? ಅನುಕಂಪದ ಮತಗಳು ಅವರ ಕೈಹಿಡಿಯಲಿವೆಯೇ ಎಂಬ ಪ್ರಶ್ನೆಯೂ ಮೂಡಿದೆ.

ತನ್ವೀರ್‌ಗೆ ಟಿಕೆಟ್‌: ತಿಂಗಳ ಹಿಂದಷ್ಟೇ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದ ಶಾಸಕ ತನ್ವೀರ್‌ ಸೇಠ್‌ ಅವರಿಗೆ ಮತ್ತೆ ನರಸಿಂಹರಾಜ ಕ್ಷೇತ್ರದಲ್ಲಿ ಟಿಕೆಟ್‌ ಸಿಕ್ಕಿದೆ. ಕಾರ್ಯಕರ್ತರು ಅವರ ನಿರ್ಧಾರ ವಿರೋಧಿಸಿ ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ್ದರು.

ಮೂರು ಕ್ಷೇತ್ರದಲ್ಲಿ ಆಕಾಂಕ್ಷಿಗಳ ದಂಡು
ಕೃಷ್ಣರಾಜ, ಚಾಮರಾಜ ಹಾಗೂ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ದಂಡೇ ಇದೆ. ತೀವ್ರ ಪೈಪೋಟಿ ಇದ್ದರಿಂದಲೇ ಎರಡನೇ ಪಟ್ಟಿಯಲ್ಲಿ ಈ ಮೂರು ಕ್ಷೇತ್ರದ ಅಭ್ಯರ್ಥಿಗಳ ಘೋಷಣೆಯಾಗಲಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ರಾಜ್ಯದ ಜಿದ್ದಾಜಿದ್ದಿನ ಕಣವಾಗಿದ್ದ ಚಾಮುಂಡೇಶ್ವರಿಯಿಂದ ಈ ಬಾರಿ ಸಿದ್ದರಾಮಯ್ಯ ಸ್ಪರ್ಧಿಸದೇ ಇರುವುದು ಹಾಗೂ ವರುಣದಿಂದ ಸ್ಪರ್ಧಿಸುತ್ತಿರುವುದರಿಂದ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಜೆಡಿಎಸ್‌ನ ಸಂಭಾವ್ಯ ಅಭ್ಯರ್ಥಿ, ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸುವುದೇ ಕಾಂಗ್ರೆಸ್‌ಗೆ ಸವಾಲಾಗಿದೆ.

ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್‌ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ರಾಕೇಶ್‌ ಪಾಪಣ್ಣ, ಮರೀಗೌಡ, ರೇಖಾ ವೆಂಕಟೇಶ್‌, ಕೂರ್ಗಳ್ಳಿ ಮಹದೇವ್‌, ಅರುಣ್ ಕುಮಾರ್‌, ಮುಖಂಡರಾದ ಕೃಷ್ಣಕುಮಾರ್ ಸಾಗರ್‌, ಬೆಳ್ಳುಳ್ಳಿ ಬಸವರಾಜ್‌, ಮೆಲ್ಲಳ್ಳಿ ಮಹದೇವಸ್ವಾಮಿ ಟಿಕೆಟ್‌ ಬಯಸಿದ್ದಾರೆ.

ಅರ್ಜಿ ಸಲ್ಲಿಸುವವರಷ್ಟೇ ಅಲ್ಲದೇ ಜಿ.ಟಿ.ದೇವೇಗೌಡ ವಿರುದ್ಧ ಬಂಡಾಯ ಸಾರಿ ಕಾಂಗ್ರೆಸ್‌ ಸೇರ್ಪಡೆಯಾಗಿರುವ ಮಾದೇಗೌಡ, ಬೀರಿಹುಂಡಿ ಬಸವಣ್ಣ, ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ಧೇಗೌಡ, ಕೆಂಪನಾಯಕ ಅವರ ಪೈಕಿ ಮಾವಿನಹಳ್ಳಿ ಸಿದ್ಧೇಗೌಡ ಅವರೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಕೃಷ್ಣರಾಜಕ್ಕೆ ನಾಲ್ವರು ಅರ್ಜಿ: ಕೃಷ್ಣರಾಜ ಕ್ಷೇತ್ರದಿಂದ ಸ್ಪರ್ಧಿಸಲು, ಎರಡು ಬಾರಿ ಶಾಸಕರಾಗಿದ್ದ ಎಂ.ಕೆ.ಸೋಮಶೇಖರ್, ಕೆಪಿಸಿಸಿ ಕಾರ್ಯದರ್ಶಿ ಭಾಸ್ಕರ್, ನವೀನ್ ಕುಮಾರ್‌ ಹಾಗೂ ಪ್ರದೀಪ್‌ಕುಮಾರ್ ಅರ್ಜಿ ಸಲ್ಲಿಸಿದ್ದಾರೆ. ಚಾಮರಾಜ ಕ್ಷೇತ್ರದಿಂದ ವಾಸು ಹಾಗೂ ಹರೀಶ್‌ಗೌಡ ಆಕಾಂಕ್ಷಿಗಳಾಗಿದ್ದು, ಟಿಕೆಟ್‌ ಹಂಚಿಕೆಯು ಕಗ್ಗಂಟಾಗಿದೆ.

*
ನಂಜನಗೂಡು ಕ್ಷೇತ್ರಕ್ಕೆ ದರ್ಶನ್‌ ಹೆಸರನ್ನೇ ನಾವು ಅಂತಿಮಗೊಳಿಸಿದ್ದು, ನುಡಿದಂತೆ ನಡೆದಿರುತ್ತೇವೆ. ಮೈಸೂರು– ಚಾಮರಾಜನಗರದಲ್ಲಿ ಜಯಭೇರಿ ಬಾರಿಸುವುದು ಶತಸಿದ್ಧ
–ಡಾ.ಎಚ್‌.ಸಿ.ಮಹದೇವಪ್ಪ, ತಿ.ನರಸೀಪುರ ಅಭ್ಯರ್ಥಿ

ಮೈಸೂರು ಜಿಲ್ಲೆಯಲ್ಲಿ ಅಪ್ಪಂದಿರಿಗೆ ಕ್ಷೇತ್ರ: ಪುತ್ರರು ಅತಂತ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT