ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತನ್ವೀರ್ ಸೇಠ್ ನಿರ್ಧಾರ: ಮೈಸೂರು ಜಿಲ್ಲೆಯಲ್ಲಿ ಸಂಚಲನ, ಕಾಂಗ್ರೆಸ್‌ನಲ್ಲಿ ತಳಮಳ

ಚುನಾವಣೆಯಿಂದ ನಿರ್ಗಮನದ ಹೇಳಿಕೆ
ಫಾಲೋ ಮಾಡಿ
Comments

ಮೈಸೂರು: ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿರುವಾಗಲೇ ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ಚುನಾವಣಾ ರಾಜಕೀಯದಿಂದ ನಿವೃತ್ತರಾಗುವ ಹೇಳಿಕೆ ನೀಡುತ್ತಿದ್ದಂತೆ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿದೆ.

ಬಿಜೆಪಿ ಮುಖಂಡರು 1994ರ ಫಲಿತಾಂಶ ಮರುಕಳಿಸುವ ಆಶಾಭಾವದಲ್ಲಿದ್ದರೆ, ಕಾಂಗ್ರೆಸ್‌ನಲ್ಲಿ ತಳಮಳ ಆರಂಭವಾಗಿದೆ. ‘ಕೈ’ ಕಾರ್ಯಕರ್ತರು, ಬೆಂಬಲಿಗರಲ್ಲಿ ವಿರೋಧ ವ್ಯಕ್ತವಾಗಿದೆ. ಜೆಡಿಎಸ್‌ ಮುಖಂಡರು ಇದೇ ಮೊದಲ ಬಾರಿ ಗೆಲುವು ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ.

ಮುಸ್ಲಿಮರ ಬಾಹುಳ್ಯವುಳ್ಳ ಜಿಲ್ಲೆಯ ಕಣವಾದ ‘ನರಸಿಂಹರಾಜ’ ಕ್ಷೇತ್ರ ವು 1967ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. 13 ವಿಧಾನಸಭಾ ಚುನಾವಣೆಗಳಲ್ಲೂ ಕ್ಷೇತ್ರದಲ್ಲಿ ಕಾಂಗ್ರೆಸ್‌ನದೇ ಪಾರುಪತ್ಯ. 1967ರಲ್ಲಿ ಅಜೀಜ್‌ ಸೇಠ್‌ ಸಂಯುಕ್ತ ಸಮಾಜವಾದಿ ಪಕ್ಷದಿಂದ ಗೆದ್ದಿದ್ದರು. ನಂತರ ಕಾಂಗ್ರೆಸ್‌ ಸೇರಿದ ಅವರು 1983ರವರೆಗೂ ಕಾಂಗ್ರೆಸ್‌ ಶಾಸಕರಾಗಿದ್ದರು.

ಯಾವುದೇ ಪಕ್ಷಕ್ಕೆ ಅಜೀಜ್‌ ಸೇಠ್‌ ಹೋದರೂ ಜನ ಅವರನ್ನು ಬೆಂಬಲಿಸಿದ್ದರು. 1983ರಲ್ಲಿ ಕಾಂಗ್ರೆಸ್‌ ಜೊತೆ ಮುನಿಸಿಕೊಂಡು ಜನತಾ ಪಕ್ಷದಿಂದ ಶಾಸಕರಾಗಿದ್ದ ಅವರು, 1984ರ ಲೋಕಸಭಾ ಚುನಾವಣೆಯಲ್ಲಿ ‘ಕೈ’ ಅಭ್ಯರ್ಥಿಯಾಗಿ ಧಾರವಾಡದಿಂದ ಸ್ಪರ್ಧಿಸಿ ಸಂಸದರಾಗಿದ್ದರು. 1985ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುಖ್ತರುನ್ನೀಸಾ ಬೇಗಂ ಜಯ ದಾಖಲಿಸಿದ್ದರು. 1989ರಲ್ಲಿ ಮತ್ತೆ ಅಜೀಜ್‌ ಸೇಠ್‌ ಶಾಸಕರಾಗಿದ್ದರು.

ಬಿಜೆಪಿಯಿಂದ ಪೈಪೋಟಿ: 1985ರ ಚುನಾವಣೆಯಿಂದ ಬಿಜೆಪಿಯು ಮತ ಗಳಿಕೆ ಹೆಚ್ಚಿಸಿಕೊಂಡು ನಿರಂತರವಾಗಿ ಪೈಪೋಟಿ ನೀಡಿದೆ. 1994ರ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ದಾಖಲಾಯಿತು. ಬಿಜೆಪಿ ಅಭ್ಯರ್ಥಿ ಮಾರುತಿ ರಾವ್‌ ಪವಾರ್‌ ಗೆಲುವು ಸಾಧಿಸಿದ್ದರು.

1999ರಲ್ಲಿ ಅಜೀಜ್‌ ಸೇಠ್‌ ಗೆಲ್ಲುವ ಮೂಲಕ ಕ್ಷೇತ್ರವನ್ನು ‘ಕೈ’ ವಶಕ್ಕೆ ನೀಡಿದ್ದರು. 2001ರಲ್ಲಿ ಅವರ ನಿಧನದ ನಂತರ ಪುತ್ರ ತನ್ವೀರ್‌ ಸೇಠ್‌ ಎಲ್ಲ ಚುನಾವಣೆಗಳಲ್ಲಿ ಗೆದ್ದು, ಕಾಂಗ್ರೆಸ್‌ ಭದ್ರಕೋಟೆಯಾಗಿಸಿದ್ದಾರೆ. 2018ರವರೆಗೂ ಒಂದು ಉಪ ಚುನಾವಣೆ ಸೇರಿ 5 ಬಾರಿ ಗೆದ್ದಿದ್ದಾರೆ. 2008ರಲ್ಲಿ ಜೆಡಿಎಸ್‌, 2013ರಲ್ಲಿ ಎಸ್‌ಡಿ‍ಪಿಐ, 2018ರಲ್ಲಿ ಬಿಜೆಪಿ ಎರಡನೇ ಸ್ಥಾನ ಪಡೆದಿದ್ದವು. ತಂದೆ–ಮಗ ಒಟ್ಟು 11 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಅಯೂಬ್‌ ಖಾನ್‌ಗೆ ಟಿಕೆಟ್‌?: ಪಕ್ಷದ ಟಿಕೆಟ್‌ ಬಯಸಿ ತನ್ವೀರ್‌ ಸೇಠ್‌ ಹಾಗೂ ಅಯೂಬ್‌ ಖಾನ್‌ ಅರ್ಜಿ ಸಲ್ಲಿಸಿದ್ದರು. ವರಿಷ್ಠರು ಅರ್ಜಿ ಸಲ್ಲಿಸಿದವರಿಗಷ್ಟೇ ಮನ್ನಣೆ ನೀಡಿದರೆ ಅಯೂಬ್‌ ಟಿಕೆಟ್‌ ಪಾಲಾಗಲಿದೆ. ಹೊಸ ಮುಖಕ್ಕೆ ಅವಕಾಶ ಕೊಡಬೇಕು ಎಂದು ವರಿಷ್ಠರಲ್ಲಿ ಕೋರಿಕೆ ಇಟ್ಟಿದ್ದಾರೆ. ಹೋದ ಚುನಾವಣೆಯಲ್ಲೂ ಅವರು ಟಿಕೆಟ್‌ ಕೇಳಿದ್ದರು.

ಜೆಡಿಎಸ್‌ನಿಂದ ಅಬ್ದುಲ್‌ ಅಜೀಜ್‌ಗೆ ಟಿಕೆಟ್‌ ಬಹುತೇಕ ಖಚಿತ ಎನ್ನಲಾಗಿದೆ. ಕಳೆದ ಎರಡು ತಿಂಗಳಿಂದ ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದಾರೆ.

‘ಕಳೆದ ಚುನಾವಣೆಯಲ್ಲಿ ತನ್ವೀರ್‌ ಅವರಿಗೆ ಪೈಪೋಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ಎಸ್.ಸಂದೇಶ್‌ಸ್ವಾಮಿ (ಸತೀಶ್) ಟಿಕೆಟ್ ಆಕಾಂಕ್ಷಿಯಾಗಿದ್ದು, ಮುಸ್ಲಿಮರ ಮತಗಳು ವಿಭಜನೆಯಾದರೆ ಬಿಜೆಪಿ ಗೆಲ್ಲುವ ಸಾಧ್ಯತೆಯನ್ನು ತಳ್ಳಿಹಾಕಲಾಗದು’ ಎನ್ನುತ್ತಾರೆ ಎನ್‌.ಆರ್.ಮೊಹಲ್ಲಾ ನಿವಾಸಿ ಪ್ರಕಾಶ್‌.

‘ಅವರೇ ಅಭ್ಯರ್ಥಿ, ಗೆಲುವೂ ಅವರದ್ದೇ’
‘2019ರಲ್ಲಿ ನಡೆದಿದ್ದ ಮಾರಣಾಂತಿಕ ಹಲ್ಲೆಯು ತನ್ವೀರ್‌ ಸೇಠ್‌ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಪಕ್ಷದ ಮುಖಂಡರೊಂದಿಗೆ ಹೇಳಿಕೊಂಡಿದ್ದರು. ಆದರೆ, ಮುಂದೆಯೂ ಅವರೇ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ’ ಎಂದು ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ ಹೇಳಿದರು.

‘ಕುಟುಂಬದವರೂ ಹಲ್ಲೆ ಘಟನೆಯಿಂದ ನೊಂದಿದ್ದಾರೆ. ಬೆದರಿಕೆಗಳು ಬಂದಿದ್ದವು. ಕಾರ್ಯಕರ್ತರು, ಬೆಂಬಲಿಗರ ಪ್ರೀತಿ ಅವರನ್ನು ಕಣದಲ್ಲಿ ಉಳಿಸಲಿದೆ. ಹಾಲಿ ಶಾಸಕರಿಗೆ ಟಿಕೆಟ್‌ ನೀಡಬೇಕು ಎಂದು ಪಕ್ಷವೇ ನಿರ್ಧರಿಸಿದ್ದು, ಮುಂದೆಯೂ ಅವರೇ ಗೆಲ್ಲುತ್ತಾರೆ’ ಎಂದರು.

2019ರ ಹಲ್ಲೆಯ ನೆನಪು
ತನ್ವೀರ್ ಸೇಠ್ 2019ರ ನವೆಂಬರ್ 17ರಂದು ಬನ್ನಿಮಂಟಪದಲ್ಲಿ ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದರು. ಅಂದು ರಾತ್ರಿ 11.15ರ ಸಮಯದಲ್ಲಿ ಅವರ ಮೇಲೆ ಆರೋಪಿಯೊಬ್ಬ ಏಕಾಏಕಿ ಕತ್ತಿಯಿಂದ ಹಲ್ಲೆ ಮಾಡಿದ್ದ. ಕುತ್ತಿಗೆ ಭಾಗದಲ್ಲಿ ಆಳವಾದ ಗಾಯವಾಗಿ, ಹೆಚ್ಚಿನ ರಕ್ತಸ್ರಾವವಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿ, ಕತ್ತರಿಸಿ ಹೋಗಿದ್ದ ಕುತ್ತಿಗೆಯ ರಕ್ತನಾಳ ಮತ್ತು ನರವನ್ನು ಸರಿಪಡಿಸಲಾಗಿತ್ತು. ಹಲ್ಲೆಯಿಂದಾಗಿ ಶಾಸಕರ ಧ್ವನಿಪೆಟ್ಟಿಗೆಗೆ ಬಲವಾದ ಏಟು ಬಿದ್ದಿದ್ದು, ಧ್ವನಿ ಬದಲಾಗಿತ್ತು. ಅಂದಿನಿಂದಲೂ ಅವರು ಮಾತನಾಡುವಾಗ ದನಿ ತಗ್ಗಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT