ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯವಾಗಿ ಬೇರೆ ಬೇರೆಯಾದ ಸಂದೇಶ್‌ ಸಹೋದರರು: ಅಣ್ಣ ಕಾಂಗ್ರೆಸ್, ತಮ್ಮ ಬಿಜೆಪಿ

ಸಂದೇಶ್ ನಾಗರಾಜ್, ಪುತ್ರ ಕಾಂಗ್ರೆಸ್‌ನಲ್ಲಿ: ಸಂದೇಶ್ ಸ್ವಾಮಿ, ಮಗ ಬಿಜೆಪಿಯಲ್ಲಿ..
Last Updated 22 ಫೆಬ್ರುವರಿ 2023, 15:35 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಮುಖಂಡರಾದ ಸಂದೇಶ್‌ ಸಹೋದರರು, ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬೇರೆ ಬೇರೆಯಾಗಿದ್ದಾರೆ. ಅಣ್ಣ ಸಂದೇಶ್ ನಾಗರಾಜ್‌ ಹಾಗೂ ಅವರ ಪುತ್ರ ಸಂದೇಶ್ ಬಿಜೆಪಿ ತೊರೆದು ಇತ್ತೀಚೆಗೆ ಕಾಂಗ್ರೆಸ್‌ ಸೇರಿದ್ದರೆ, ತಮ್ಮ ಸಂದೇಶ್‌ ಸ್ವಾಮಿ ಮತ್ತು ಪುತ್ರ ಸಾತ್ವಿಕ್ ಸಂದೇಶ್‌ ಸ್ವಾಮಿ ಬಿಜೆಪಿಯಲ್ಲಿದ್ದಾರೆ.

ವಿಧಾನಪರಿಷತ್‌ ಮಾಜಿ ಸದಸ್ಯ ಸಂದೇಶ್‌ ನಾಗರಾಜ್‌ ಮೊದಲು ಜೆಡಿಎಸ್‌ನಲ್ಲಿದ್ದರು. ನಂತರ ಬಿಜೆಪಿ ಸೇರಿದ್ದರು. ಚಲನಚಿತ್ರ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.

ಸಹೋದರ ಸಂದೇಶ್‌ ಸ್ವಾಮಿ ಕೂಡ ಜೆಡಿಎಸ್‌ನಲ್ಲಿದ್ದರು. ನಗರಪಾಲಿಕೆ ಸದಸ್ಯರಾಗಿದ್ದರು. ಮೇಯರ್‌ ಆಗಿಯೂ ಕೆಲಸ ಮಾಡಿದ್ದಾರೆ. ಆ ಪಕ್ಷ ತೊರೆದು ಬಿಜೆಪಿ ಸೇರಿದ ನಂತರ, ಅವರಿಗೆ ನರಸಿಂಹರಾಜ ಕ್ಷೇತ್ರದಲ್ಲಿ ಹೋದ ಚುನಾವಣೆಯಲ್ಲಿ ಟಿಕೆಟ್‌ ನೀಡಲಾಗಿತ್ತು. ಆ ಚುನಾವಣೆಯಲ್ಲಿ ಸಹೋದರರ ಕುಟುಂಬದವರೆಲ್ಲರೂ ಬಿಜೆಪಿಯಲ್ಲಿದ್ದರು. ಈ ಬಾರಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಈ ಕುಟುಂಬ ಹೋಟೆಲ್‌ ಉದ್ಯಮದಲ್ಲಿ ಗುರುತಿಸಿಕೊಂಡಿದೆ.

‘ಬಿಜೆಪಿಯಲ್ಲಿ ಬಹಳ ಬೇಸರವಾದ್ದರಿಂದ ಆ ಪಕ್ಷದಿಂದ ಹೊರಬಂದಿದ್ದೇನೆ. ನಂಬಿಸಿ ಅನ್ಯಾಯ ಮಾಡಿದರು. ಮೋಸ ಮಾಡಿದರು. ವಿಧಾನಪರಿಷತ್‌ ಚುನಾಣೆಯಲ್ಲಿ ಟಿಕೆಟ್ ಕೊಡುವುದಾಗಿ ಭರವಸೆ ನೀಡಿ ನಂತರ ಕೊಡಲಿಲ್ಲ. ನನ್ನನ್ನು ಸರಿಯಾಗಿ ಮಾತನಾಡಿಸುತ್ತಲೂ ಇರಲಿಲ್ಲ. ಯಾವುದೋ ವಿಷಯವನ್ನು ಹೇಳುವುದಕ್ಕೆ ಮುಂದಾದಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಳಿಸಿಕೊಳ್ಳಲಿಲ್ಲ. ಮೈಸೂರಿನವರು ಯಾವಾಗಲೂ ಕಿವಿ ಕಚ್ಚುತ್ತೀರೇಕೆ ಎಂದು ಟೀಕಿಸಿದರು. ಇದರಿಂದ, ನೋವಾಗಿದೆ’ ಎಂದು ಸಂದೇಶ್‌ ನಾಗರಾಜ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಬಿಜೆಪಿಯವರು ಎರಡು ವರ್ಷಗಳಿಂದಲೂ ನನ್ನ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಪಕ್ಷದ ಸಭೆಗೆ ಅಥವಾ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಿರಲಿಲ್ಲ. ನನ್ನ ಮಗ ಸಂದೇಶ್ ಕೂಡ ಕಾಂಗ್ರೆಸ್‌ ಸೇರಿದ್ದಾನೆ. ಆತನ ಭವಿಷ್ಯಕ್ಕಾಗಿಯೇ ನಾನು ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇನೆ. ಈ ಚುನಾವಣೆಯಲ್ಲಿ ನಾವು ಯಾವುದೇ ಬೇಡಿಕೆ ಇಟ್ಟಿಲ್ಲ. ಆಪ್ತರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರಿಗಾಗಿ ಮುಂಬರುವ ಚುನಾವಣೆಯಲ್ಲಿ ಗೆಲುವಿಗಾಗಿ ಕೊಡುಗೆ ನೀಡಲಿದ್ದೇವೆ’ ಎಂದು ಹೇಳಿದರು.

‘ಹೋದ ಚುನಾವಣೆಯಲ್ಲಿ ನರಸಿಂಹರಾಜ ಕ್ಷೇತ್ರದಲ್ಲಿ ಸೋತ ನಂತರವೂ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಸಂಘಟನೆ ಬಲಪಡಿಸಲು ಸಕ್ರಿಯವಾಗಿದ್ದೇನೆ. 44ಸಾವಿರ ಮತಗಳನ್ನು ಪಡೆದಿದ್ದೆ. ಪಕ್ಷದ ಸಂಘಟನೆಗೆ ಶ್ರಮಿಸಿದ್ದೇನೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ನರಸಿಂಹರಾಜದಲ್ಲಿ ಗೆಲ್ಲುವುದಕ್ಕೆ ಅವಕಾಶಗಳಿದ್ದು, ಪಕ್ಷ ನನಗೆ ಬೆಂಬಲವಾಗಿ ನಿಲ್ಲಬೇಕು’ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿರುವ ಸಂದೇಶ್‌ ಸ್ವಾಮಿ ಪ್ರತಿಕ್ರಿಯಿಸಿದರು.

‘ನಗರಪಾಲಿಕೆ ಸದಸ್ಯನಾಗಿ ಕ್ಷೇತ್ರಕ್ಕೆ ಹಾಗೂ ಮೇಯರ್ ಆಗಿ ನಗರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದೇನೆ. ಸ್ಥಾನಮಾನ ಕೊಡದಿದ್ದರೂ ಪಕ್ಷದ ಸಂಘಟನೆಗೆ ಕೆಲಸ ಮಾಡಿದ್ದೇನೆ. ಇದೆಲ್ಲವನ್ನೂ ‍ಪಕ್ಷ ಪರಿಗಣಿಸುತ್ತದೆ, ಟಿಕೆಟ್ ಕೊಡುತ್ತದೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ಅವರು.

ಮಾಜಿ ಶಾಸಕ ವಾಸು ಕಾಂಗ್ರೆಸ್‌ನಲ್ಲಿದ್ದರೆ, ಅವರ ಪುತ್ರರಾದ ಕವೀಶ್ ಗೌಡ ಹಾಗೂ ಹವೀಶ್‌ ಗೌಡ ಈಚೆಗೆ ಬಿಜೆಪಿ ಸೇರಿದ್ದರು.

ಬನ್ನಿ ಎನ್ನುವುದಿಲ್ಲ

ತಮ್ಮ ಸಂದೇಶ್ ಸ್ವಾಮಿ ಸದ್ಯ ಬಿಜೆಪಿಯಲ್ಲಿದ್ದಾರೆ. ನಮ್ಮ ನಿರ್ಧಾರ ನಮಗೆ, ಅವರದ್ದು ಅವರಿಗೆ ಬಿಟ್ಟಿದ್ದು. ಅವರನ್ನು ಬನ್ನಿ ಎಂದು ಕರೆಯುವುದಿಲ್ಲ.

–ಸಂದೇಶ್ ನಾಗರಾಜ್‌, ಕಾಂಗ್ರೆಸ್

ಅವರಿಗೆ ಸಂಬಂಧಿಸಿದ ವಿಷಯ

ಬಿಜೆಪಿಯಲ್ಲಿ ನಮ್ಮೊಂದಿಗಿದ್ದ ಅಣ್ಣ ಈಗ ಕಾಂಗ್ರೆಸ್‌ ಸೇರಿದ್ದಾರೆ. ಅದು ಅವರಿಗೆ ಸಂಬಂಧಿಸಿದ ವಿಷಯ. ಇದರಿಂದ ನನಗೆ ಚುನಾವಣೆಯಲ್ಲಿ ಯಾವುದೇ ತೊಂದರೆ ಆಗುವುದಿಲ್ಲ.

–ಸಂದೇಶ್ ಸ್ವಾಮಿ, ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT