ಮೈಸೂರು: ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ಇಲ್ಲಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಶುಕ್ರವಾರ ನಡೆದ ‘ಕರುನಾಡ ಸವಿಯೂಟ’ ಅಡುಗೆ ಸ್ಪರ್ಧೆಯಲ್ಲಿ ಇಲ್ಲಿನ ವಿದ್ಯಾವಿಕಾಸ ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜಿನ 2ನೇ ವರ್ಷದ ವಿದ್ಯಾರ್ಥಿನಿ ಎಂ.ಧೃತಿ ಪ್ರಥಮ ಸ್ಥಾನದೊಂದಿಗೆ ₹10 ಸಾವಿರ ನಗದು ಬಹುಮಾನವನ್ನು ಗೆದ್ದುಕೊಂಡರು.
ನಗರದವರೇ ಆದ ಭಾಗ್ಯಲಕ್ಷ್ಮಿ ದ್ವಿತೀಯ ಬಹುಮಾನವಾಗಿ ₹7,000 ನಗದು ಹಾಗೂ ಜಾಹ್ನವಿ ಅವರು ತೃತೀಯ ಬಹುಮಾನವಾಗಿ ₹5,000 ತಮ್ಮದಾಗಿಸಿಕೊಂಡರು.
ಎಂ.ಮಂಜುಳಾ, ದೇವಕಿ ಕೃಷ್ಣಪ್ಪ, ಅನ್ನಪೂರ್ಣಾ, ಮಂಜುಳಾ ಎಸ್.ಕೆ. ಸಮಾಧಾನಕರ ಬಹುಮಾನ ಪಡೆದರು. ನಗರದ ಎಲ್ಲೆಡೆಯಿಂದ ಬಂದಿದ್ದ ಮಹಿಳೆಯರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಆನ್‌ಲೈನ್‌ನಲ್ಲಿ ನೋಂದಾಯಿಸಿದ್ದ 180 ಮಂದಿ ಪೈಕಿ ಹಾಜರಿದ್ದ 87 ಮಂದಿಯಲ್ಲಿ ವೃದ್ಧರು, ಗೃಹಿಣಿಯರೊಂದಿಗೆ, ಕಾಲೇಜು ವಿದ್ಯಾರ್ಥಿಗಳೂ ಇದ್ದರು. ಮನೆಯಲ್ಲೇ ಸಿದ್ಧಪಡಿಸಿ ತಂದಿದ್ದ ತರಹೇವಾರಿ ಖಾದ್ಯಗಳ ಕುರಿತು ತೀರ್ಪುಗಾರರಿಗೆ ಪ್ರಾತ್ಯಕ್ಷಿಕೆ ನೀಡಿದರು. ನಾಟಿ ಶೈಲಿಯ ಖಾದ್ಯಗಳಿಂದ ಹಿಡಿದು ಸಿರಿಧಾನ್ಯದ ತಿನಿಸುಗಳೂ ಇದ್ದವು. ಸಸ್ಯಹಾರದೊಂದಿಗೆ ಮಾಂಸಾಹಾರವನ್ನೂ ತಯಾರಿಸಿ ತಂದಿದ್ದರು.
ಚಲನಚಿತ್ರ ನಟರೂ ಆದ ಸಿಹಿಕಹಿ ಚಂದ್ರು ಹಾಗೂ ಶೆಫ್ ಆದರ್ಶ್ ತತ್ಪತಿ, ತಿನಿಸುಗಳ ರುಚಿ ಸವಿದು ಬಹುಮಾನ ಪ್ರಕಟಿಸಿದರು.
ಶ್ರೀಕೃಷ್ಣ ಶುದ್ಧ ಹಳ್ಳಿತುಪ್ಪ, ಇಂಡೇನ್ ಗ್ಯಾಸ್, ಎಕ್ಸೊ ಕಂಪನಿ, ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಫಿಲಿಪ್ಸ್ ಅಪ್ಲೈಯನ್ಸಸ್, ಪ್ರೀತಿ ಕಿಚನ್ ಅಪ್ಲಯನ್ಸಸ್, ಎಸ್‌ಎಸ್‌ಪಿ ಹಿಂಗ್, ವೆಂಕೋಬ್ ಚಿಕನ್, ಇಂಡಿಯಾ ಗೇಟ್ ಬಾಸುಮತಿ ರೈಸ್ ಹಾಗೂ ಸುಜಯ್ ಇರಿಗೇಷನ್ ಪ್ರೈವೇಟ್ ಲಿಮಿಟೆಡ್ ಸ್ಪರ್ಧೆಗೆ ಸಹಯೋಗ ನೀಡಿದ್ದವು.