ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌದಿ ಒಡಲಲ್ಲಿ ಕಲೆಯ ಚಿತ್ತಾರ

ಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
Last Updated 23 ಡಿಸೆಂಬರ್ 2022, 14:10 IST
ಅಕ್ಷರ ಗಾತ್ರ

ಮೈಸೂರು: ಉತ್ತರ ಕರ್ನಾಟಕದ ಜನಪದ ಕಲೆಯಾದ ಕೌದಿಯು ಚಿತ್ರಗಾರನ ಕಲಾತ್ಮತೆಯೊಂದಿಗೆ ಸೇರಿಕೊಂಡು ಕಲಾ ಪ್ರೇಮಿಗಳನ್ನು ಮಂತ್ರಮುಗ್ದರನ್ನಾಗಿಸುತ್ತಿದೆ.

ಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಕಲಾವಿದ ಪಿ.ನರಸಿಮುಲು ಬ್ಯಾಗೇರಿ ರಚಿಸಿರುವ ಚಿತ್ರಕಲಾ ಪ್ರದರ್ಶನವು ಉತ್ತರ ಕನ್ನಡದ ಜನಪದ ಸೊಗಡನ್ನು ಮೈಸೂರಿನ ಮಣ್ಣಿಗೆ ಹೊತ್ತು ತಂದಿದೆ. ತುಂಡು ಬಟ್ಟೆಗಳನ್ನು ಬಳಸಿ ದಾರದ ಮೂಲಕ ಸುಂದರವಾಗಿ ವಸ್ತ್ರವನ್ನು ಹೊಲಿಯುವುದೇ ಕೌದಿ ಕಲೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಮಹಿಳೆಯರನ್ನು ಜೀವನ ನಿರ್ವಹಣೆಗೆ ಈ ಕಲೆಯನ್ನು ಅವಲಂಬಿಸಿದ್ದಾರೆ. ಇಲ್ಲಿ ಕಲಾವಿದ ಗ್ರಾಮೀಣ ಜೀವನವನ್ನು ವಸ್ತುವನ್ನಾಗಿರಿಸಿ ಚಿತ್ರ ರಚನೆ ಮಾಡಿದ್ದಾರೆ.

ಪ್ರತಿ ಚಿತ್ರವೂ ಒಂದೊಂದು ಕಥೆಯನ್ನು ಹೇಳುತ್ತಿದೆ. ಮಹಿಳೆಯೊಬ್ಬಳು ಗತಿಸಿದ ತನ್ನ ಕುಟುಂಬದ ಸದಸ್ಯರ ಬಟ್ಟೆಗಳನ್ನು ಜೋಡಿಸಿ ಕೌದಿ ತಯಾರಿಸಿ, ಅದನ್ನು ಹೊದ್ದುಕೊಳ್ಳುವ ಮೂಲಕ ಆಕೆಯ ಪ್ರೀತಿ ಪಾತ್ರರ ನೆನಪನ್ನು ಕಟ್ಟಿಕೊಡುವ ಚಿತ್ರ ಪ್ರದರ್ಶನದ ಗಮನಸೆಳೆಯುತ್ತಿದೆ.

ಹರಿದ ಬಟ್ಟೆಯ ನಡುವೆ ಹಸುವೊಂದು ಆಶಾಭಾವದಿಂದ ನೋಡುವ ಚಿತ್ರವೊಂದಿದ್ದು, ಗೋ ಸಂತತಿಯ ಸಂರಕ್ಷಣೆಯ ಮಹತ್ವವನ್ನು ತಿಳಿಸುತ್ತಿದೆ. ಸದ್ದು ಮಾಡುತ್ತಾ ಸಾಗುತ್ತಿರುವ ರೈಲಿನ ನಡುವೆ ಧ್ಯಾನ ಸ್ಥಿತಿಯಲ್ಲಿರುವ ಬುದ್ಧ, ಸಂಚಾರಿ ವ್ಯವಸ್ಥೆಯಲ್ಲಿನ ಬದಲಾವಣೆಯ ಚಿತ್ರಗಳು ನಮ್ಮನ್ನು ಚಿಂತನೆಯಲ್ಲಿ ತೊಡಗುವಂತೆ ಮಾಡುತ್ತವೆ.

ಕೌದಿ ಹಾಳೆಯ ಮೇಲೆ ಚಿತ್ರಗಳನ್ನು ಬಿಡಿಸಲಾಗಿದೆ. 25 ಚಿತ್ರಗಳು ಪ್ರದರ್ಶನಗೊಂಡಿವೆ. ಡಿ.30ರವರೆಗೆ ವೀಕ್ಷಣೆಗೆ ಲಭ್ಯವಿರಲಿದೆ.

ಉದ್ಘಾಟನೆ

ಕೌದಿ ಕಲೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಶುಕ್ರವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಕೌದಿ ಕಲೆ ಅತ್ಯಂತ ಶ್ರೀಮಂತವಾಗಿದೆ. ಮೈಸೂರು ದಸರಾದಲ್ಲಿ ಈ ಕಲೆಯ ಪ್ರದರ್ಶನ ಆಯೋಜಿಸುವ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದರು.

ಶ್ರೀಕಲಾನಿಕೇತನ ಕಲಾ ಶಾಲೆಯ ಪ್ರಾಂಶುಪಾಲ ಕೆ.ಸಿ.ಮಹದೇವ ಶೆಟ್ಟಿ, ದಿ ಹೋಮ್ ಸ್ಕೂಲ್‌ ಪ್ರಾಂಶುಪಾಲ ಆರ್.ಕಾರ್ತಿಕ್, ಬಸವರಾಜ ಮುಸಾವಳಗಿ ಇದ್ದರು.

ಪ್ರತಿಬಿಂಬಿಸುವ ಪ್ರಯತ್ನ

ನನ್ನ ಅಜ್ಜಿ ಕೌದಿ ಕಲೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಆಕೆಯೇ ನನ್ನ ಈ ಪ್ರಯತ್ನಕ್ಕೆ ಪ್ರೇರಣೆ. ಇಲ್ಲಿ ಹಳ್ಳಿ ಜೀವನವನ್ನು ಪ್ರತಿಬಿಂಬಿಸುವ ಪ್ರಯತ್ನ ಮಾಡಿದ್ದೇನೆ.

–ಪಿ.ನರಸಿಮುಲು ಬ್ಯಾಗೇರಿ, ಚಿತ್ರ ಕಲಾವಿದ, ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT