ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಸೀದಿ ಎದುರೇ ಜೈಶ್ರೀರಾಂ ಘೋಷಣೆ: ಕುಮ್ಮಕ್ಕು ಕೊಟ್ಟವರಾರು: ಎಂ.ಲಕ್ಷ್ಮಣ ಪ್ರಶ್ನೆ

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಪ್ರಶ್ನೆ; ‘ಇದು ಪೂರ್ವಯೋಜಿತ ಕೃತ್ಯ’
Published : 13 ಸೆಪ್ಟೆಂಬರ್ 2024, 13:09 IST
Last Updated : 13 ಸೆಪ್ಟೆಂಬರ್ 2024, 13:09 IST
ಫಾಲೋ ಮಾಡಿ
Comments

ಮೈಸೂರು: ‘ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಧ್ಯರಾತ್ರಿ ಒಂದೂವರೆ ಗಂಟೆಯವರೆಗೂ ಪೊಲೀಸರ ಅನುಮತಿಯನ್ನೂ ಪಡೆಯದೆ ಮೆರವಣಿಗೆ ಮಾಡಲಾಗಿದ್ದು, ಪಾಲ್ಗೊಂಡಿದ್ದವರು ಮಸೀದಿಯ ಎದುರಲ್ಲೇ ನಿಂತು ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ.‌ ಇದಕ್ಕೆ ಕುಮ್ಮಕ್ಕು ಕೊಟ್ಟವರಾರು ಎನ್ನುವುದು ಮಹತ್ವ ಪಡೆದುಕೊಳ್ಳುತ್ತದೆ’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಹೇಳಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಆ ಮಸೀದಿಯ ಎದುರಿನಲ್ಲೇ‌ ನಿಂತು, ಅಲ್ಲೇ ಪಟಾಕಿ ಸಿಡಿಸಿ ಪ್ರಚೋದಿಸಬೇಕು ಎಂಬ ಪೂರ್ವಯೋಜಿತ ಕೃತ್ಯ ಇದಾಗಿತ್ತು’ ಎಂದು ದೂರಿದರು.

‘ನಾಗಮಂಗಲದಲ್ಲಿ ನಡೆದ ಗಲಾಟೆಗೆ ಕಾರಣವಾದವರು ಯಾವ ಧರ್ಮದವರಾದರೂ ಬಿಡಬಾರದು. ಆ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹವೂ ಆಗಿದೆ’ ಎಂದು ಹೇಳಿದರು.

‘ಪ್ರಕರಣ ದಾಖಲಿಸುವಾಗ ಹಿಂದೂಗಳನ್ನಷ್ಟೇ ಗುರಿ‌ ಮಾಡಿಲ್ಲ. ಮುಸ್ಲಿಮರ ಮೇಲೂ ಪ್ರಕರಣ ದಾಖಲಿಸಲಾಗಿದೆ. ದೊರೆತಿರುವ ವಿಡಿಯೊಗಳ ಪ್ರಕಾರ, ಅಲ್ಲಿ ಎರಡೂ ಸಮುದಾಯದವರೂ ಕಲ್ಲು ತೂರಿದ್ದಾರೆ ಹಾಗೂ ಕತ್ತಿ ಹಿಡಿದಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಗೆದ್ದಾಗಿನಿಂದ ಮಂಡ್ಯದ ಜನರ ನೆಮ್ಮದಿ ಹಾಳಾಗಿದೆ. ಆ ಜನರು ಮುಂದೆಯೂ ನೆಮ್ಮದಿಯಿಂದ ಇರುವುದಕ್ಕೆ ಸಂಸದರು ಬಿಡುವುದಿಲ್ಲ’ ಎಂದು ದೂರಿದರು.

‘ನಾಗಮಂಗಲದಲ್ಲಿ ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಲೋಪ ಆಗಿರುವ ಬಗ್ಗೆ ಅಲ್ಲಿನ ಇನ್‌ಸ್ಪೆಕ್ಟರ್ ಅಮಾನತು ಮಾಡಲಾಗಿದೆ. ತಪ್ಪಿತಸ್ಥರು ಯಾವುದೇ ವರ್ಗದವರಾಗಿದ್ದರೂ ಕ್ರಮ ಜರುಗಿಸುತ್ತೇವೆ. ಅದರಲ್ಲಿ ಯಾವುದೇ ಮುಲಾಜಿಲ್ಲ. ದೇಶದಲ್ಲಿರುವ ಎಲ್ಲರೂ ಭಾರತ ಮಾತೆಯ ಮಕ್ಕಳೆ. ಅವರನ್ನು ಧರ್ಮದ ಆಧಾರದ ಮೇಲೆ ವಿಂಗಡಿಸಿ ನೋಡುವ ಕೆಲಸವನ್ನು ‌ಬಿಜೆಪಿಯವರು ಮಾಡುತ್ತಿದ್ದಾರೆ. ಗಣೇಶನ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ’ ಎಂದರು.

‘ನಾಗಮಂಗಲಕ್ಕೆ ಮಂಗಳೂರು ಮೊದಲಾದ ಕಡೆಗಳಿಂದ ಬಂದಿರುವ ಆರ್‌ಎಸ್‌ಎಸ್‌ನವರು ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕೋಮುವಾದಿ ಪಕ್ಷವಾದ ಬಿಜೆಪಿ ಜೊತೆ ಸೇರಿ ಗೆದ್ದು ಕೇಂದ್ರದಲ್ಲಿ ಸಚಿವರಾಗಿರುವ ಕುಮಾರಸ್ವಾಮಿ ರಾಜ್ಯದಲ್ಲಿ ಕೋಮು ಕಿಚ್ಚು ಹೊತ್ತಿಸುವುದನ್ನು ಬಿಡಬೇಕು. ಅವರ ಪ್ರಯೋಗಗಳಿಗೆ ತಕ್ಕ ಉತ್ತರವನ್ನು ಕೊಡಲಾಗುವುದು’ ಎಂದರು.

ಪಕ್ಷದ ಗ್ರಾಮಾಂತರ ‌ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT