ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವಡಿ ಹೆಸರು ಶಿಫಾರಸು ಮಾಡಿದ್ದು ಕಾಂಗ್ರೆಸ್ ಸರ್ಕಾರ: ಲಕ್ಷ್ಮಣ

Published 17 ಡಿಸೆಂಬರ್ 2023, 7:34 IST
Last Updated 17 ಡಿಸೆಂಬರ್ 2023, 7:34 IST
ಅಕ್ಷರ ಗಾತ್ರ

ಮೈಸೂರು: ‘ಇಲ್ಲಿನ ವಿಮಾನನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಹೆಸರಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2015ರಲ್ಲೇ ಕೇಂದ್ರಕ್ಕೆ ಶಿಫಾರಸು ಮಾಡಿದೆ’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು.

‘ಮೈಸೂರು ವಿಮಾನನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕು ಎಂಬ ಹುಬ್ಬಳ್ಳಿ ಶಾಸಕ ಪ್ರಸಾದ್ ಅಬ್ಬಯ್ಯ ಅವರ ಹೇಳಿಕೆ ವೈಯಕ್ತಿಕವಾದುದೇ ಹೊರತು, ಪಕ್ಷ ಅಥವಾ ಸರ್ಕಾರದ ನಿಲುವಲ್ಲ. ಅಭಿಮಾನದಿಂದ ಆ ಹೇಳಿಕೆ ನೀಡಿದ್ದಾರಷ್ಟೆ’ ಎಂದು ಸ್ಪಷ್ಟಪಡಿಸಿದರು.

‘ಟಿಪ್ಪು ಹೆಸರಿಡುತ್ತೇವೆ ಎಂದು ಸಿದ್ದರಾಮಯ್ಯ ಅವರಾಗಲಿ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರಾಗಲಿ ಹೇಳಿಲ್ಲ. ನಾವೂ ಕೇಳಿಲ್ಲ. ಹೀಗಿರುವಾಗ, ಸಂಸದ ಪ್ರತಾಪ ಸಿಂಹ ಅವರು ಈ ವಿಷಯದಲ್ಲೂ ರಾಜಕಾರಣ ಮಾಡುತ್ತಿರುವುದು ಹಾಗೂ ಟಿಪ‍್ಪು ಹೆಸರಿಡಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿರುವುದು ಖಂಡನೀಯ’ ಎಂದರು.

ಕೇಂದ್ರ ಕ್ರಮ ಕೈಗೊಳ್ಳಲಿಲ್ಲವೇಕೆ?:

‘ಸಿದ್ದರಾಮಯ್ಯ ಅವರು 2015ರಲ್ಲೇ ಕೇಂದ್ರಕ್ಕೆ ಪತ್ರ ಬರೆದಿದ್ದರು. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವ ಬಗ್ಗೆಯೂ ತಿಳಿಸಿದ್ದರು. ಆಗಿನಿಂದಲೂ ಕೇಂದ್ರ ಸರ್ಕಾರ ಮರುನಾಮಕರಣ ಮಾಡಲಿಲ್ಲವೇಕೆ?, ಸಂಸದರಾಗಿರುವ ಪ್ರತಾಪ ಸಿಂಹ ಒತ್ತಾಯಿಸಲಿಲ್ಲವೇಕೆ, ಎಂಟು ವರ್ಷಗಳಿಂದ ಅವರು ಎಲ್ಲಿ ಮಲಗಿದ್ದರು?’ ಎಂದು ಕೇಳಿದರು.

‘ಮೊದಲಿಗ ಶಿಫಾರಸು ಮಾಡಿದ್ದೇ ನಾವು. ಇದ್ಯಾವುದೂ ಗೊತ್ತಿಲ್ಲದೇ ಸಂಸದರು ವಿನಾಕಾರಣ ಆರೋಪಿಸುವುದು ಸರಿಯಲ್ಲ. ಶಿಫಾರಸು ಪತ್ರವನ್ನು ಮತ್ತೊಮ್ಮೆ ಕಳುಹಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದರು.

‘ಪಾಸ್ ನೀಡಿದ ವಿಚಾರದಲ್ಲಿ ಪ್ರತಿಕ್ರಿಯೆಯನ್ನೇ ನೀಡದೆ ಕಾಣೆಯಾಗಿರುವ ಸಂಸದರು, ವಿಮಾನನಿಲ್ದಾಣದ ವಿಷಯದಲ್ಲಿ ಪತ್ರಿಕಾ ಹೇಳಿಕೆ ನೀಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಪ್ರತಾಪ ವಿರುದ್ಧ ತನಿಖೆಯಾಗಲಿ:

‘ಪಕ್ಷಾತೀತವಾಗಿ ತನಿಖೆ ನಡೆಯಬೇಕು. ಪಾಸ್ ನೀಡಿದ ಸಂಸದರ ವಿರುದ್ಧವೂ ತನಿಖೆಯಾಗಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಕೇಂದ್ರ ಸರ್ಕಾರದ ಧೋರಣೆಯಿಂದಾಗಿ ದೇಶದ ಯುವಕರು ಹತಾಶರಾಗಿದ್ದಾರೆ. ಉದ್ಯೋಗ ಇಲ್ಲದೇ ಪದವೀಧರರು ಯಾವ ಹಂತಕ್ಕೆ ಹೋಗುತ್ತಾರೆಯೋ ಎಂದು ಹೇಳಲಾಗದ ಸ್ಥಿತಿ ಇದೆ. ಕೆಲಸ ಕೊಡುವುದರಲ್ಲಿ ಕೇಂದ್ರ ವಿಫಲವಾಗಿದೆ. ಇದಕ್ಕೆ ಪ್ರಧಾನಿಯೇ ಉತ್ತರ‌ ಕೊಡಬೇಕು’ ಎಂದರು.

‘ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಅತ್ಯಾಚಾರ ಘಟನೆಗಳೂ ಜಾಸ್ತಿಯಾಗಿವೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಈ ಪ್ರಮಾಣ ಜಾಸ್ತಿ ಇದೆ. ಮಣಿಪುರದಲ್ಲಿ ಇಡೀ ಜಗತ್ತು ತಲೆತಗ್ಗಿಸುವಂತಹ ಘಟನೆ ನಡೆದಿದೆ. ಆಗ ಬಿಜೆಪಿಯವರು ಎಲ್ಲಿ ಹೋಗಿದ್ದರು, ಆಗ ಸತ್ಯಶೋಧನಾ ಸಮಿತಿ ರಚಿಸಲಿಲ್ಲವೇಕೆ, ಬೇರೆ ರಾಜ್ಯಗಳಲ್ಲಿ ತೊಂದರೆಗೆ ಒಳಗಾದವರು ಮಹಿಳೆಯರಲ್ಲವೇ?’ ಎಂದು ಕೇಳಿದರು. ‘ಪ್ರತಿಭಟಿಸಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.

‘ಬೆಳಗಾವಿಯ ಗ್ರಾಮವೊಂದರಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ’ ಎಂದು ಸಮರ್ಥಿಸಿಕೊಂಡರು.

‘ಪ್ರತಾಪ ಸಿಂಹ ಅವರನ್ನು ನಾವೆಂದೂ ಭಯೋತ್ಪಾದಕ ಎಂದು ಕರೆದಿಲ್ಲ. ಈಚೆಗೆ ನಗರದಲ್ಲಿ ಮುಖಂಡ ಕೆ.ಎಸ್. ಶಿವರಾಮು ನೇತೃತ್ವದಲ್ಲಿ ನಡೆದ ಪ್ರತಿಭಟನೆಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ. ಅವರು ನಮ್ಮ ಪಕ್ಷದ ಕಾರ್ಯಕರ್ತರಲ್ಲ’ ಎಂದು ಸ್ಪಷ್ಟಪಡಿಸಿದರು.

ಪಕ್ಷದ ನಗರ ಜಿಲ್ಲಾ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ಬಿ.ಎಂ. ರಾಮು, ಆರ್.ಮೂರ್ತಿ, ಶಿವಣ್ಣ, ಗಿರೀಶ್ ಹಾಗೂ ಮಹೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT