ಮಂಗಳವಾರ, ಮಾರ್ಚ್ 21, 2023
25 °C

ಸಾರಿಗೆ ಮುಷ್ಕರ ಕೈಬಿಡಿ: ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ವೇತನ ಪರಿಷ್ಕರಣೆ ಸೇರಿದಂತೆ ನೌಕರರ ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಈಡೇರಿಸಲಾಗುವುದು. ಜ.24ರಂದು ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಮುಷ್ಕರ ಕೈಬಿಡಬೇಕು’ ಎಂದ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಹೇಳಿದರು.

ಇಲ್ಲಿನ ವಿಛಾಗೀಯ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಾರಿಗೆ ಸಂಸ್ಥೆಗಳ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಡೀಕರಣಗಳ ಸಂಪೂರ್ಣ ಅಧ್ಯಯನಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಏಕ ಸದಸ್ಯ ಸಮಿತಿನ್ನು ಸರ್ಕಾರ ನೇಮಿಸಿದೆ. ಸಮಿತಿಯು ಮಧ್ಯಂತರ ವರದಿಯನ್ನೂ ನೀಡಿದೆ. ನೌಕರರ ಬೇಡಿಕೆ ನ್ಯಾಯಯುತವಾಗಿವೆ’ ಎಂದರು.

‘ಕೋವಿಡ್‌ ಸಂದರ್ಭದಲ್ಲಿ ನಿಗಮವು ನಷ್ಟದಲ್ಲಿದ್ದಾಗಲೂ ವೇತನ ನೀಡಿ ಮಾನವೀಯವಾಗಿ ನಡೆದುಕೊಂಡಿದೆ. ಶ್ರೀನಿವಾಸಮೂರ್ತಿ ಸಮಿತಿ ಪೂರ್ಣ ವರದಿ ನೀಡುತ್ತಿದ್ದಂತೆಯೇ ಸಿ.ಎಂ ಜೊತೆ ಚರ್ಚಿಸಿ ಅನುಷ್ಠಾನಗೊಳಿಸಲಾಗುವುದು. ನೌಕರರ ಸಂಘಟನೆಯ ಪ್ರಮುಖರ ಜೊತೆಗೆ ಮಾತುಕತೆಗೂ ಸಿದ್ಧ’ ಎಂದು ತಿಳಿಸಿದರು.

‘ಮಧ್ಯಂತರ ವರದಿಯಲ್ಲಿ ಕಂಡಕ್ಟರ್‌ ರಹಿತ ಬಸ್‌, ಎಲೆಕ್ಟ್ರಾನಿಕ್‌ ಬಸ್‌ಗಳ ಹೆಚ್ಚಳ, ಒಂದೇ ಬಾಗಿಲಿನ ಬಸ್‌ ಸೇರಿದಂತೆ ಹಲವು ಅಂಶಗಳ ಜಾರಿಗೆ ಸಲಹೆ ನೀಡಿದ್ದು, ಪರಿಗಣಿಸಲಾಗುವುದು’ ಎಂದರು.

‘ಡೀಸೆಲ್‌ ದರ ಹೆಚ್ಚುತ್ತಿದ್ದರೂ 4 ವರ್ಷಗಳಿಂದ ಪ್ರಯಾಣಿಕರ ಟಿಕೆಟ್‌ ದರ ಹೆಚ್ಚಳಗೊಳಿಸಿಲ್ಲ. ನಷ್ಟದಲ್ಲಿದ್ದರೂ ಸಿಬ್ಬಂದಿ ವೇತನ ‍ಪಾವತಿಸಲಾಗಿದೆ. 1 ಲಕ್ಷ ಕಟ್ಟಡ ಹಾಗೂ ಪೌರ ಕಾರ್ಮಿಕರಿಗೆ ಬಸ್‌ಪಾಸ್‌ ಉಚಿತವಾಗಿ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ನೌಕರರಿಗೆ ತಲಾ ₹ 1 ಕೋಟಿ ವಿಮೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಸಾವಿರ ಬಸ್‌ ಖರೀದಿ

‘ಪ್ರಯಾಣಿಕರಿಗೆ ವಿಮಾನ ಮಾದರಿಯ ಸೇವೆ ನೀಡಲು 350 ಎಲೆಕ್ಟ್ರಿಕ್‌ ಬಸ್‌ ಸೇರಿದಂತೆ ಒಂದು ಸಾವಿರ ಬಸ್‌ ಖರೀದಿಸಲು ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಎಂ.ಚಂದ್ರಪ್ಪ ಹೇಳಿದರು.

‘ನಿಗಮದಲ್ಲಿ 1.3 ಲಕ್ಷ ಬಸ್‌ ಇದ್ದು, ಅದರಲ್ಲಿ 3 ಸಾವಿರ ಬಸ್‌ಗಳನ್ನು ಗುಜರಿಗೆ ಹಾಕಲಾಗುವುದು. ಡೀಸೆಲ್‌ ದರ ಹೆಚ್ಚಾಗುತ್ತಿರುವುದರಿಂದ 450 ಕಿ.ಮೀ ಸಾಮರ್ಥ್ಯ ಬ್ಯಾಟರಿಯುಳ್ಳ ಅತ್ಯಾಧುನಿಕ ಇ.ವಿ ಬಸ್‌ಗಳನ್ನು ಖರೀದಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘20 ಅಂಬಾರಿ ಉತ್ಸವ್, 50 ಇ.ವಿ, 40 ಸ್ಲೀಪರ್‌, 222 ವೀಲ್‌ ಬೇಸ್‌, 13.5 ಮೀಟರ್‌ನ 4 ಹವಾ ನಿಯಂತ್ರಿತ ಹಾಗೂ 4 ಸಾಮಾನ್ಯ, 50 ಸಿಟಿ ಬಸ್‌ ಹಾಗೂ 550 ಬಸ್‌ಗಳ ಖರೀದಿ ಫೆಬ್ರುವರಿಯಲ್ಲಿ ನಡೆಯಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು