ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕರಹಳ್ಳಿ ಕೆರೆ ಬದಿ ಬೆಳಿಗ್ಗೆಯೇ ಟ್ರಾಫಿಕ್‌!

Published 25 ಮೇ 2023, 6:19 IST
Last Updated 25 ಮೇ 2023, 6:19 IST
ಅಕ್ಷರ ಗಾತ್ರ

ಸುಧೀರ್‌ಕುಮಾರ್‌ ಎಚ್‌.ಕೆ.

ಮೈಸೂರು: ಮುಂಜಾನೆ 5ರಿಂದಲೇ ನಗರದ ವಿವಿಧ ಮೂಲೆಯಿಂದ ಧಾವಿಸುವ ಬೈಕ್‌, ಕಾರುಗಳು ಕುಕ್ಕರಹಳ್ಳಿ ಕೆರೆಯನ್ನು ಮುತ್ತತೊಡಗುತ್ತವೆ. ಕೆರೆ ಪ್ರವೇಶ ದ್ವಾರದ ಬಳಿಯೇ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಒಳಹೊಕ್ಕಲು ಹವಣಿಸುವ ವಾಯುವಿಹಾರಿಗಳು ರಸ್ತೆ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.

ರೈಲ್ವೆ ಹಳಿ ಹಾಗೂ ಸಿಗ್ನಲ್‌ ಬಳಿಯ ಕೆರೆ ಪ್ರವೇಶ ದ್ವಾರದ ಎದುರಿನ ರಾಮವಿಲಾಸ ರಸ್ತೆ ಹಾಗೂ ಕಲಾಮಂದಿರದತ್ತ ಸಾಗುವ ರಸ್ತೆಗಳ ಇಕ್ಕೆಲಗಳು ಬೆಳಿಗ್ಗೆ ಮತ್ತು ಸಂಜೆ ವಾಹನಗಳಿಂದ ತುಂಬಿ ತುಳುಕುತ್ತವೆ. ಸಾಲುಗಟ್ಟಿ ಒಂದರ ಹಿಂದೆ, ಅಕ್ಕ ಪಕ್ಕದಲ್ಲೆಲ್ಲಾ ನಿಲ್ಲುವ ವಾಹನಗಳು ಇಡೀ ರಸ್ತೆಯನ್ನೇ ಕಿರಿದಾಗಿಸತೊಡಗಿವೆ.

ಹತ್ತಿರದ ಸರಸ್ವತಿಪುರಂ, ಕೆ.ಜಿ.ಕೊಪ್ಪಲು, ಗಂಗೋತ್ರಿ ಲೇಔಟ್‌ಗಳೂ ಸೇರಿದಂತೆ, ಶಿವರಾಂ ಪೇಟೆ, ದೇವರಾಜ ಮೊಹಲ್ಲಾ, ಟಿ.ಕೆ.ಲೇಔಟ್, ಚಾಮರಾಜಪುರಂ, ಕೆ.ಆರ್.ಮೊಹಲ್ಲಾ, ವಿ.ವಿ.ಮೊಹಲ್ಲಾ, ಗೋಕುಲಂ, ಜಯನಗರ, ಅಗ್ರಹಾರ, ಬೋಗಾದಿ, ವಿಜಯನಗರದಿಂದಲೂ ಪ್ರತಿನಿತ್ಯ ಸಾವಿರಾರು ಜನ ಕೆರೆಗೆ ಬರುತ್ತಾರೆ.

ಟ್ರಾಫಿಕ್‌ ಹೆಚ್ಚಳದಿಂದ ವಯಸ್ಸಾದವರೂ ರಸ್ತೆ ದಾಟಲು ಕಷ್ಟ ಪಡುತ್ತಿದ್ದಾರೆ. ಸಾರ್ವಜನಿಕರು ಪಾರ್ಕಿಂಗ್‌ ಸ್ಥಳದಲ್ಲಿ ಮಾತ್ರ ವಾಹನ ನಿಲ್ಲಿಸಬೇಕು. ಅಧಿಕಾರಿಗಳು ಗಮನ ಹರಿಸಬೇಕು
ತಾರಾನಾಥ್, ಅಗ್ರಹಾರ ನಿವಾಸಿ

ಬೆಳಿಗ್ಗೆ 6ರಿಂದ 9.30 ಮತ್ತು ಸಂಜೆ 3.30ರಿಂದ 6.30ರವರೆಗೆ ಸಾರ್ವಜನಿಕರಿಗೆ ತೆರೆದಿರುವ ಕುಕ್ಕರಹಳ್ಳಿ ಕೆರೆಗೆ ಬೆಳಿಗ್ಗೆ ಬರುವವರಲ್ಲಿ ಕೆಲವರೂ ಗೇಟ್ ತೆಗೆಯುವುದನ್ನೂ ಕಾಯದೇ ಕಾಂಪೌಂಡ್ ಹಾರಿ ಒಳ ಹೋಗುತ್ತಿದ್ದಾರೆ.

ಸಿಗ್ನಲ್‌ ಗೇಟ್‌ ಬಳಿ ವಾಹನ ನಿಲುಗಡೆ ಕುರಿತು ಯಾವುದೇ ಸೂಚನಾ ಫಲಕಗಳಿಲ್ಲ. ಬೈಕ್‌ ಕಾರುಗಳು ಎಲ್ಲೆಲ್ಲಿ ನಿಲ್ಲಬೇಕೆಂಬ ನಿಯಮ ಮಾಡಿ ಒಂದಷ್ಟು ದಿನ ಸಂಚಾರ ಪೊಲೀಸರು ಎಚ್ಚರಿಸಬೇಕು
ರೇವಣ್ಣ, ನಂಜುಮಳಿಗೆ ನಿವಾಸಿ

‘ಬೆಳಿಗ್ಗೆ 7ರಿಂದ ಶಾಲಾ ಕಾಲೇಜು ಹಾಗೂ ಕಚೇರಿಗೆ ತೆರಳುವವರಿಂದ ರಸ್ತೆಯಲ್ಲಿ ವಾಹನ ದಟ್ಟಣೆ ಇನ್ನೂ ಹೆಚ್ಚಾಗುತ್ತದೆ. ಸಣ್ಣ ಪುಟ್ಟ ಅಪಘಾತಗಳು ಸಾಮಾನ್ಯವೆಂಬಂತಾಗಿದೆ. ಇತ್ತೀಚೆಗೆ ರೈಲ್ವೆ ಗೇಟ್‌ ಬಳಿ ನಡೆದ ಅಪಘಾತದಿಂದಾಗಿ ಪ್ರಾಣಾಪಾಯವಾದ ಘಟನೆಯೂ ನಡೆದಿದೆ’ ಎಂದು ಬೋಗಾದಿಯ ಶಿವಕುಮಾರ್‌ ಆತಂಕ ವ್ಯಕ್ತಪಡಿಸಿದರು.

‘ಕೆರೆ ಬಳಿಯ ರೈಲ್ವೆ ಗೇಟ್‌ ರಸ್ತೆ ಜಂಕ್ಷನ್‌ನಲ್ಲಿ ಯಾವುದೇ ಸಿಗ್ನಲ್‌ ದೀಪವಿಲ್ಲ. ರಸ್ತೆ ಉಬ್ಬುಗಳೂ ಇಲ್ಲ. ವಾಹನಗಳೂ ವೇಗವಾಗಿ ಒಟ್ಟೊಟ್ಟಿಗೇ ಚಲಿಸುತ್ತವೆ. ಕೆರೆ ಪ್ರವೇಶ ವೇಳೆಗಳಲ್ಲಿ ಈ ಗೊಂದಲ ಇನ್ನೂ ಹೆಚ್ಚಾಗುತ್ತದೆ. ಕೂಡಲೇ ಪೊಲೀಸರು ಸಿಗ್ನಲ್‌ ದೀಪ ಅಳವಡಿಸಬೇಕು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆ ಸಮೀಪದ ಜನವಸತಿ ಪ್ರದೇಶಗಳಿಂದ ಅನೇಕರು ಅದರಲ್ಲಿಯೂ ಹಿರಿಯರು ನಿತ್ಯವೂ ನಡೆಯುತ್ತಾ ಬರುತ್ತಾರೆ. ಇಲ್ಲಿನ ರಸ್ತೆ ದಾಟುವುದೇ ಅವರಿಗೆ ಹರಸಾಹಸವಾಗಿದೆ. ರೈಲ್ವೆ ಗೇಟ್ ಬಂದ್‌ ಮಾಡಿದರಂತೂ ವಾಹನದಟ್ಟಣೆ ಹೆಚ್ಚಾಗಿ ಚಿತ್ರ ವಿಚಿತ್ರ ಹಾರ್ನ್‌ ಮಾಡುತ್ತಾ ಇಡೀ ವಾತಾವರಣವೇ ಶಬ್ದಮಾಲಿನ್ಯಕ್ಕೀಡಾಗುತ್ತಿದೆ’ ಎಂದು ಸರಸ್ವತಿಪುರಂನ ಶ್ರೀಮಾ ದೂರಿದರು.

ರಸ್ತೆಯಲ್ಲಿಯೇ ವ್ಯಾಪಾರ

ವಾಹನ ದಟ್ಟಣೆಗೆ ಕುಕ್ಕರಹಳ್ಳಿ ಕೆರೆ ಗೇಟ್ ಬಳಿ ರಸ್ತೆಗೆ ಸಮೀಪದಲ್ಲಿ, ಕೆಲವೊಮ್ಮೆ ರಸ್ತೆಯಲ್ಲಿಯೇ ವ್ಯಾಪಾರ ಆರಂಭಿಸುವ ಹಣ್ಣು, ಬಟ್ಟೆ ಮಾರಾಟಗಾರರಿಂದಲೂ ವಾಹನ ನಿಲ್ಲಲು, ಜನದಟ್ಟಣೆ ಹೆಚ್ಚಲು ಕಾರಣವಾಗುತ್ತಿದ್ದಾರೆ.

ವಿವಿಧ ರೀತಿಯ ಪಾನೀಯ, ಬಿ.ಪಿ ಶುಗರ್ ಚೆಕ್ ಮಾಡುವವರು, ಟೀ–ಕಾಫಿ ಅಂಗಡಿ, ಹಾಲಿನ ಕೇಂದ್ರಗಳು ವಾಹನ ದಟ್ಟಣೆ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಅವರಿಗೆ ಸೂಕ್ತ ಜಾಗವನ್ನು ಕಲ್ಪಿಸಬೇಕು ಎನ್ನುತ್ತಾರೆ ಮಂಡಿಮೊಹಲ್ಲಾದ ರಮೇಶ್‌.

ಪಾರ್ಕಿಂಗ್‌ ಸ್ಥಳ ನಿರ್ಲಕ್ಷ್ಯ

ಕುಕ್ಕರಹಳ್ಳಿ ಕೆರೆಯ ಕುವೆಂಪು ವನದ ಪಕ್ಕ ರಂಗಾಯಣದ ಪ್ರದೇಶದವರೆಗೂ ನಿರ್ಮಿಸಲಾಗಿರುವ ವಾಹನ ನಿಲುಗಡೆ ಪ್ರದೇಶದ ಕಾಲುಭಾಗವೂ ಬಳಕೆಯಾಗುತ್ತಿಲ್ಲ. ಹಿಂಬದಿಯ ಹೆಚ್ಚಿನ ಜಾಗದಲ್ಲಿ ಕಲ್ಲುಹಾಸುಗಳ ನಡುವೆ ಕಳೆ ಬೆಳೆದು ಒಣ ಮರಗಳ ರಾಶಿ ಹಾಕಲಾಗಿದ್ದು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಅನುಪಯುಕ್ತವಾಗತೊಡಗಿದೆ. ಒಳಗೆ ವಾಹನ ನಿಲ್ಲಿಸಲು ಆಸಕ್ತಿ ತೋರದ ವಾಯುವಿಹಾರಿಗಳು ರಸ್ತೆ ಬದಿಯಲ್ಲಿಯೇ ನಿಲ್ಲಿಸುತ್ತಿದ್ದಾರೆ. ಅವರಿಗೆ ಎಚ್ಚರಿಕೆ ನೀಡುವ ಕೆಲಸವನ್ನು ವಿಶ್ವವಿದ್ಯಾಲಯದ ಸಿಬ್ಬಂದಿ ಸಂಚಾರ ಪೊಲೀಸರು ಮಾಡುತ್ತಿಲ್ಲ. ಎಚ್ಚರಿಕೆ ಸೂಚನೆಯ ದೊಡ್ಡ ಫಲಕಗಳೂ ಅಳವಡಿಸಿಲ್ಲ.

ಪ್ರಭಾವಿಗಳ ಹೆಸರಿನಲ್ಲಿ ಬೆದರಿಕೆ!

‘ಕೆರೆ ಪ್ರವೇಶ ದ್ವಾರದ ರಸ್ತೆ ಬಳಿ ವಾಹನ ನಿಲ್ಲಿಸಬೇಡಿ. ಪಾರ್ಕಿಂಗ್‌ ಸ್ಥಳದತ್ತ ಹೋಗಿ ಎಂದು ಸೂಚಿಸಿದರೂ ಕೆಲ ವಾಯುವಿಹಾರಿಗಳು ಪ್ರಭಾವಿಗಳ ಹೆಸರು ಹೇಳಿ ಬೆದರಿಸುತ್ತಾರೆ’ ಎಂದು ವಿಶ್ವವಿದ್ಯಾಲಯದ ಭದ್ರತಾ ಅಧಿಕಾರಿ ಅಚ್ಚಪ್ಪ ದೂರಿದರು. ‘ಫಲಕ ಅಳವಡಿಕೆ ದಂಡ ವಿಧಿಸುವಂತೆ ವಿಶ್ವವಿದ್ಯಾಲಯದ ಈ ಹಿಂದಿನ ಹಲವು ಕುಲಪತಿಗಳಿಗೆ ಅನೇಕ ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಈಗಲೂ ಮತ್ತೊಮ್ಮೆ ತಿಳಿಸುತ್ತೇನೆ’ ಎಂದರು. ‘ಸಂಚಾರ ಪೊಲೀಸರು ಈ ಕುರಿತು ಕ್ರಮ ಕೈಗೊಳ್ಳುವುದು ಸೂಕ್ತ. ಬೀದಿಬದಿ ವ್ಯಾಪಾರಿಗಳದ್ದೂ ಇದೇ ಸಮಸ್ಯೆ’ ಎಂದು ತಿಳಿಸಿದರು.

ಸಿಗ್ನಲ್‌ ಹತ್ತಿರದ ಕುಕ್ಕರಹಳ್ಳಿ ಗೇಟ್‌ ಬಳಿ ಬೀದಿಬದಿ ವ್ಯಾಪಾರಿಗಳೊಂದಿಗೆ ಖರೀದಿಯಲ್ಲಿ ತೊಡಗಿರುವ ವಾಯುವಿಹಾರಿಗಳು
ಸಿಗ್ನಲ್‌ ಹತ್ತಿರದ ಕುಕ್ಕರಹಳ್ಳಿ ಗೇಟ್‌ ಬಳಿ ಬೀದಿಬದಿ ವ್ಯಾಪಾರಿಗಳೊಂದಿಗೆ ಖರೀದಿಯಲ್ಲಿ ತೊಡಗಿರುವ ವಾಯುವಿಹಾರಿಗಳು
ಕೆರೆ ಪಕ್ಕದ ರಸ್ತೆ ಬದಿಯಲ್ಲಿಯೇ ನಿಲ್ಲಿಸಿರುವ ದ್ವಿಚಕ್ರ ವಾಹನಗಳು ಪಕ್ಕದಲ್ಲಿಯೇ ಸಾಗುತ್ತಿರುವ ಜನರು
ಕೆರೆ ಪಕ್ಕದ ರಸ್ತೆ ಬದಿಯಲ್ಲಿಯೇ ನಿಲ್ಲಿಸಿರುವ ದ್ವಿಚಕ್ರ ವಾಹನಗಳು ಪಕ್ಕದಲ್ಲಿಯೇ ಸಾಗುತ್ತಿರುವ ಜನರು
ತಾರಾನಾಥ್
ತಾರಾನಾಥ್
ರೇವಣ್ಣ
ರೇವಣ್ಣ
ಕುವೆಂಪು ವನ ಪಕ್ಕದ ಪಾರ್ಕಿಂಗ್‌ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿಲ್ಲ. ಕಲ್ಲುಹಾಸನ್ನು ಹುಲ್ಲು ಆವರಿಸಿದೆ
ಕುವೆಂಪು ವನ ಪಕ್ಕದ ಪಾರ್ಕಿಂಗ್‌ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿಲ್ಲ. ಕಲ್ಲುಹಾಸನ್ನು ಹುಲ್ಲು ಆವರಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT