ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಪ್ಪು ಮಾಡಿ, ಅಧಿಕಾರಿಗಳನ್ನು ಟೀಕಿಸುತ್ತಿರುವ ಕುಮಾರಸ್ವಾಮಿ: ಸಿಎಂ ಸಿದ್ದರಾಮಯ್ಯ

ತಪ್ಪು ಮಾಡಿರುವುದರಿಂದಲೇ ಅಧಿಕಾರಿಗಳನ್ನು ಟೀಕಿಸುತ್ತಿರುವ ಕುಮಾರಸ್ವಾಮಿ
Published : 29 ಸೆಪ್ಟೆಂಬರ್ 2024, 6:59 IST
Last Updated : 29 ಸೆಪ್ಟೆಂಬರ್ 2024, 6:59 IST
ಫಾಲೋ ಮಾಡಿ
Comments

ಮೈಸೂರು: ‘ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಪ್ಪು ಮಾಡಿಬಿಟ್ಟಿದ್ದಾರೆ. ಹೀಗಾಗಿ, ಅಧಿಕಾರಿಗಳನ್ನು ಟೀಕಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಇಲ್ಲಿನ ಟಿ.ಕೆ. ಲೇಔಟ್‌ನಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಭಾನುವಾರ ಮಾತನಾಡಿದ ಅವರು, ‘ಅಧಿಕಾರಿಗಳ ಮೇಲೆ ಇನ್ನೇಕೆ ಟೀಕೆ ಮಾಡುತ್ತಿದ್ದಾರೆ? ಅಧಿಕಾರಿಗಳು ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸಿದರೆ ಟೀಕೆ ಮಾಡಲಿ’ ಎಂದರು.

‘ಲೋಕಾಯುಕ್ತ ವಿಶೇಷ ತನಿಖಾ ತಂಡದ ಎಡಿಜಿಪಿ ಎಂ.ಚಂದ್ರಶೇಖರ್‌ ಅವರ ವಿರುದ್ಧ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಅಧಿಕಾರಿಯೂ ಉತ್ತರ ಕೊಟ್ಟಿದ್ದಾರೆ ಎಂಬುದಷ್ಟೆ ನನಗೆ ಗೊತ್ತು. ಆ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ’ ಎಂದು ಹೇಳಿದರು.

‘ಆ ಅಧಿಕಾರಿಯು ಕುಮಾರಸ್ವಾಮಿ ಅವರನ್ನು ಹಂದಿ ಎಂದು ಕರೆದಿದ್ದಾರೆಯೇ ಅಥವಾ ಬರೆದಿದ್ದಾರೆಯೇ? ಅವರು ಬರೆದಿರುವ ಪತ್ರದಲ್ಲಿ ಸಾಹಿತ್ಯ ವಿಮರ್ಶಕ ಜಾರ್ಜ್‌ ಬರ್ನಾಡ್ ಶಾ ಅವರ ಮಾತುಗಳನ್ನು ಉಲ್ಲೇಖಿಸಿದ್ದಾರಷ್ಟೆ. ಆ ವಿಚಾರದ ಬಗ್ಗೆ ಸುದೀರ್ಘ ವಿವರಣೆ ನೀಡುವುದಿಲ್ಲ; ಅವರಿಬ್ಬರ ನಡುವೆ ಮಧ್ಯಪ್ರವೇಶವನ್ನೂ ಮಾಡುವುದಿಲ್ಲ. ಕುಮಾರಸ್ವಾಮಿ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ’ ಎಂದರು.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ತಮ್ಮ ವಿರುದ್ಧ ಇಡಿ (ಜಾರಿ ನಿರ್ದೇಶನಾಲಯ)ಗೆ ದೂರು ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದೂರು ನೀಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಯಾರೋ ಇ.ಡಿ.ಗೆ ದೂರು ಕೊಟ್ಟಾಕ್ಷಣವೇ ಏನಾದರೂ ತನಿಖೆ ಆಗುತ್ತದೆಯೇ?’ ಎಂದು ಕೇಳಿದರು.

‘ನನ್ನ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ಮಾಡಿದ್ದಾರೆ. ಆ ವಿಷಯದಲ್ಲಿ ಮಧ್ಯ‍ಪ್ರವೇಶಿಸುವುದಿಲ್ಲ. ಹೆಚ್ಚು ಪ್ರತಿಕ್ರಿಯೆಯನ್ನೂ ಕೊಡುವುದಿಲ್ಲ. ಸ್ನೇಹಮಯಿ ಕೃಷ್ಣ ಯಾರೆಂದು ಗೊತ್ತಿಲ್ಲ; ಆತನ ವಿರುದ್ಧ ದೂರುಗಳು ದಾಖಲಾಗಿರುವುಗೂ ತಿಳಿದಿಲ್ಲ’ ಎಂದರು.‌

‘ಮೈಸೂರು ತಾಲ್ಲೂಕಿನ ಮೀನಾಕ್ಷಿಪುರದ ಬಳಿ ರೇವ್ ಪಾರ್ಟಿ ನಡೆಯುತ್ತಿದ್ದ ಬಗ್ಗೆ ಎಸ್ಪಿ ನನಗೆ ಮಾಹಿತಿ ಕೊಟ್ಟಿದ್ದಾರೆ. ಆ ಬಗ್ಗೆ ಪೊಲೀಸರು ತನಿಖೆ ನಡೆಸಿ ಕಾನೂನು ಪ್ರಕಾರ ಕೈಗೊಳ್ಳುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

‘ಅ.2ರಂದು ಮತ್ತೆ ಮೈಸೂರಿಗೆ ಬರುತ್ತೇನೆ. ಆಗ, ದಸರಾ ಸಿದ್ಧತಾ ಕಾಮಗಾರಿಗಳನ್ನು ಪರಿಶೀಲಿಸುತ್ತೇನೆ’ ಎಂದರು.

ಶಾಸಕರಾದ ಕೆ.ಹರೀಶ್‌ ಗೌಡ, ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ, ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌, ನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮಾಜಿ ಸಂಸದ ಕೋಟೆ ಎಂ.ಶಿವಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT