ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆರೆಯ ಒಡಲಲ್ಲಿ ದಾರಿ, ಮಣ್ಣಿಗೆ ಕನ್ನ!

ಒತ್ತುವರಿ ತೆರವಿಗೆ ಒತ್ತಾಯಿಸಿ ಮಂಡ್ಯ ಜಿಲ್ಲಾಡಳಿತಕ್ಕೆ ಪತ್ರ ಬರೆದ ಸ್ವಾಮೀಜಿ
Published : 15 ಆಗಸ್ಟ್ 2024, 8:10 IST
Last Updated : 15 ಆಗಸ್ಟ್ 2024, 8:10 IST
ಫಾಲೋ ಮಾಡಿ
Comments

ಮೈಸೂರು: ಮೈಸೂರು–‌ಮಂಡ್ಯ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಹೋಬಳಿಯ ಗಾಮನಹಳ್ಳಿ ಸರ್ವೆ ನಂಬರ್‌ನಲ್ಲಿರುವ ಮಾರಸಿಂಹನಕೆರೆಯ ಒಡಲನ್ನು ಬಗೆದು, ಮಧ್ಯದಲ್ಲೇ ರಸ್ತೆ ಮಾಡಲಾಗಿದೆ! ಇದು ಪರಿಸರ ಪ್ರೇಮಿಗಳ ಆಕ್ಷೇಪಕ್ಕೆ ಕಾರಣವಾಗಿದೆ.

ಒತ್ತುವರಿದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹಾಗೂ ಜಲಮೂಲವನ್ನು ಸಂರಕ್ಷಿಸುವಂತೆ ಕೋರಿ ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಬನ್ನೂರು ಹೋಬಳಿಯ ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ನಾದಾನಂದನಾಥ ಸ್ವಾಮೀಜಿ ಮಂಡ್ಯ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಈ ಕೆರೆಯು ಯಾಚೇನಹಳ್ಳಿ ಭಾಗದ ರೈತರ ಕೃಷಿ ಚಟುವಟಿಕೆಗೆ ಇರುವ ನೀರಿನ ಮೂಲಗಳಲ್ಲಿ ಒಂದಾಗಿರುವುದು ಶ್ರೀಗಳು ಧ್ವನಿ ಎತ್ತಲು ಕಾರಣ.

ಕೆರೆಯು ಅಂದಾಜು ನೂರು ಎಕರೆ ಪ್ರದೇಶದ ವ್ಯಾಪ್ತಿ ಹೊಂದಿದೆ. ಜಲಾಶಯಗಳು ತುಂಬಿರುವ ಸಂದರ್ಭದಲ್ಲಿ ಕೆರೆ ತುಂಬಿಸುವ ಕೆಲಸಕ್ಕೆ ಆದ್ಯತೆ ನೀಡದೇ, ಒತ್ತುವರಿಯಾಗುತ್ತಿದ್ದರೂ ಕ್ರಮ ಕೈಗೊಳ್ಳದಿರುವ ಅಧಿಕಾರಿಗಳ ನಡೆಯ ಬಗ್ಗೆ ಗ್ರಾಮಸ್ಥರಲ್ಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಟ್ಟಿಗೆ ತಯಾರಿಸಲು: ‘ಸ್ಥಳೀಯ ಪ್ರಭಾವಿಗಳು ಕೆರೆಯ ಸುತ್ತ ಒತ್ತುವರಿ ಮಾಡಿಕೊಂಡಿದ್ದಾರೆ. ನೀರು ತುಂಬಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ತೂಬನ್ನು ಮುಚ್ಚಿ ನೀರು ಬಾರದಂತೆ ಮಾಡಲಾಗಿದೆ. ದಿನೇ ದಿನೇ ಅಲ್ಲಿನ ಮಣ್ಣನ್ನು ಅಕ್ರಮವಾಗಿ ಸಾಗಿಸಿ ಇಟ್ಟಿಗೆ ತಯಾರಿಕೆ ಕಾರ್ಖಾನೆಗಳಲ್ಲಿ ಬಳಸಲಾಗುತ್ತಿದೆ. ಒತ್ತುವರಿಯಿಂದಾಗಿ ಕೆರೆಯ ಸಹಜ ಸ್ವರೂಪವೇ ಬದಲಾಗಿದೆ. ಕೆರೆಯ ಮಧ್ಯೆಯೇ ಮಾಡುತ್ತಿರುವ ರಸ್ತೆಯಿಂದ ಮುಂದೆ ಅಪಾಯವಾಗಲಿದೆ. ಜಲಮೂಲವನ್ನು ನುಂಗಿ ನೀರು ಕುಡಿಯುವ ದುಷ್ಟ ವ್ಯವಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸ್ವಾಮೀಜಿ ಮನವಿ ಮಾಡಿದ್ದಾರೆ.

‘‍ಪ್ರಭಾವಿಗಳ ಕೈಮೇಲಾಗಿರುವ ಕಾರಣದಿಂದ, ಕೆರೆಯ ಅಚ್ಚುಕಟ್ಟುದಾರರು ಸುಮ್ಮನಿದ್ದಾರೆ’ ಎಂದು ಹೇಳಿದ್ದಾರೆ.

‘ಹೂಳೆತ್ತುವ ಮೂಲಕ ಕೆರೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವುದು ಹಾಗೂ ನೀರು ತುಂಬಿಸುವುದು ಈ ಕಾಲದ ತುರ್ತು. ಆದರೆ, ಇಲ್ಲಿ ಅದಕ್ಕೆ ವಿರುದ್ಧವಾದ ಕೆಲಸ ನಡೆಯುತ್ತಿದೆ. ಕೆರೆಯನ್ನು ಉಳಿಸಿಕೊಳ್ಳಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂಬುದು ಸ್ವಾಮೀಜಿ ಆಶಯ.

‘ನೆರೆಯ ನೇರಲಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಹಾಗೂ ಅಲ್ಲಿನವರು ಜಮೀನುಗಳಿಗೆ ಹೋಗಿ– ಬರುವುದಕ್ಕೆಂದು ಕೆರೆಯ ನಡುವೆಯೇ ರಸ್ತೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲಿನವರು ಕೊರಮೇಗೌಡನಕೊಪ್ಪಲು ಮೂಲಕ ಸಂಚರಿಸಿದರೆ 3 ಕಿ.ಮೀ. ಆಗುತ್ತದೆ. ಅದನ್ನು ತಪ್ಪಿಸಲು ಕೆರೆಯ ಒಡಲನ್ನೇ ಬಗೆಯಲಾಗುತ್ತಿದೆ’ ಎನ್ನಲಾಗುತ್ತಿದೆ.

ಗಾಮನಹಳ್ಳಿ ಪಂಚಾಯಿತಿ ವ್ಯಾಪ್ತಿಯ ವಿಠಲಾಪುರದ ಅಚ್ಚುಕಟ್ಟಿಗೆ ಸೇರಿದ ಮಾರಸಿಂಹನ ಕೆರೆಯು, ಮಾರಸಿಂಹ ದೊರೆಯ ಹೆಸರಿನಿಂದಲೇ ಪ್ರಖ್ಯಾತಿ ಪಡೆದಿದೆ. ಆತ ಗಂಗರಾಜರಲ್ಲಿ ಪ್ರಮುಖರಾದವರು. ಅವರ ಹೆಸರಿನ ಹಳ್ಳಿಯೇ ಮಾರಸಿಂಹನಹಳ್ಳಿ. ಆ ರಾಜ ಅಂದು ತನ್ನ ರೈತರಿಗೆ ಕಟ್ಟಿಸಿದ ಕೆರೆ ಈಗ ಒತ್ತುವರಿಗೆ ನಲುಗಿ ಕಿರಿದಾಗುತ್ತಿದೆ. ಈಗ, ಉಳಿದ ಕೆರೆಯ ಮಧ್ಯೆಯೇ ರಸ್ತೆ ಮಾಡುತ್ತಿರುವುದು ಎಷ್ಟು ಸರಿ ಎಂಬುದು ನಾದಾನಂದನಾಥ ಸ್ವಾಮೀಜಿ ಹಾಗೂ ಪ್ರಜ್ಞಾವಂತರ ಪ್ರಶ್ನೆ.

ಪ್ರಕೃತಿದತ್ತವಾದ ಕೆರೆಗೆ ಕನ್ನ ಹಾಕುವುದು ಎಷ್ಟು ಸರಿ? ಸಾಕಷ್ಟು ಮಳೆಯಾಗಿದ್ದರೂ ಕೆರೆಗೆ ಈವರೆಗೂ ನೀರು ತುಂಬಿಸಿಲ್ಲವೇಕೆ?
–ನಾದಾನಂದನಾಥ ಸ್ವಾಮೀಜಿ, ಯಾಚೇನಹಳ್ಳಿ

‘ಮಣ್ಣು ಸಾಗಿಸಲು ದಾರಿ ನಿರ್ಮಾಣ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಂಡ್ಯ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಎಲ್. ನಾಗರಾಜು ‘ಕೆರೆಯಲ್ಲಿ ಮೂರಡಿ ಹೂಳೆತ್ತಲು ಅನುಮತಿ ಕೊಡಲಾಗಿದೆ ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ. ಮಣ್ಣನ್ನು ಸಾಗಿಸುವುದಕ್ಕೆ ಟ್ರಾಕ್ಟರ್‌ಗಳು ಸಂಚರಿಸಲು ಅನುಕೂಲವಾಗಲೆಂದು ಮಧ್ಯದಲ್ಲಿ ರಸ್ತೆ ಮಾಡಿಕೊಂಡಿದ್ದಾರೆ ಎಂದು ತಹಶೀಲ್ದಾರ್‌ ವರದಿ ಸಲ್ಲಿಸಿದ್ದಾರೆ’ ಎಂದು ತಿಳಿಸಿದರು.

‘ಕವನದ ಮೂಲಕ ಅಸಮಾಧಾನ’

ಕೆರೆಯ ಒಡಲನ್ನು ಬಗೆಯುತ್ತಿರುವುದಿಂದ ನೊಂದಿರುವ ನಾದಾನಂದನಾಥ ಸ್ವಾಮೀಜಿ (ಅವರು ಲೇಖಕರೂ ಹೌದು) ಕವನದ ಮೂಲಕ ಅಸಮಾಧಾನ ವ್ಯಕ್ತ‍ಪಡಿಸಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನ ತಮ್ಮ ಖಾತೆಯಲ್ಲಿ ಹಂಚಿಕೊಂಡು ಗಮನಸೆಳೆದದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT