ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ: ಕಗ್ಗಂಟಾದ ‘ಮೈತ್ರಿ ಭವಿಷ್ಯ’!

ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆ; ರಂಗೇರದ ಕಣ; ಪ್ರಚಾರ ನಡೆಸಲು ಹಿಂದೇಟು
Published 11 ಮೇ 2024, 6:08 IST
Last Updated 11 ಮೇ 2024, 6:08 IST
ಅಕ್ಷರ ಗಾತ್ರ

ಮೈಸೂರು: ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿರುವ ‘ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ’ದಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದರೂ, ಬಿಜೆ‍ಪಿ–ಜೆಡಿಎಸ್‌ ಮೈತ್ರಿಯ ಭವಿಷ್ಯ ನಿರ್ಧಾರವಾಗಿಲ್ಲ. ಇದರಿಂದಾಗಿ ಕಣವಿನ್ನೂ ರಂಗು ಪಡೆದಿಲ್ಲ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದವು. ಇದು ವಿಧಾನ ಪರಿಷತ್‌ ಚುನಾವಣೆಯಲ್ಲೂ ಮುಂದುವರಿಯುವುದೇ, ಮುಂದುವರಿದರೆ ಕ್ಷೇತ್ರವನ್ನು ಯಾವ ಪಕ್ಷಕ್ಕೆ ಬಿಟ್ಟು ಕೊಡಲಾಗುತ್ತದೆ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಎರಡೂ ಪಕ್ಷಗಳ ಹೈಕಮಾಂಡ್‌ ಮಟ್ಟದಲ್ಲಿ ಯಾವುದೇ ತೀರ್ಮಾನ ಹೊರಬೀಳದೇ ಇರುವುದು ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳಕ್ಕೆ ಕಾರಣವಾಗಿದೆ. ಪೂರ್ಣ ಪ್ರಮಾಣದಲ್ಲಿ ತಮ್ಮ ತಂಡದೊಂದಿಗೆ ಪ್ರಚಾರಕ್ಕೆಂದು ಕಣಕ್ಕೆ ಇಳಿಯುವುದಕ್ಕೂ ಅವರು ಹಿಂದೇಟು ಹಾಕುವಂತಾಗಿದೆ. ಆದರೆ, ಸಂಘಟನೆಗಳ ಮುಖಂಡರನ್ನು ಮೊಬೈಲ್‌ ಫೋನ್‌ ಮೂಲಕ ಸಂಪರ್ಕಿಸಿ ಬೆಂಬಲ ಕೋರುವುದು ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮರಿತಿಬ್ಬೇಗೌಡ ಪ್ರಚಾರ: ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿರುವ ಹಾಗೂ ಈಚೆಗಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಮರಿತಿಬ್ಬೇಗೌಡ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಖಚಿತವಾಗಿದ್ದು, ಅವರು ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿಯಿಂದ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ.ನಿಂಗರಾಜ್‌ಗೌಡ, ಕೆ.ವಸಂತ್‌ಕುಮಾರ್‌, ಜೆಡಿಎಸ್‌ನಿಂದ ಕೆ.ಟಿ.ಶ್ರೀಕಂಠೇಗೌಡ ಹಾಗೂ ವಿವೇಕಾನಂದ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಇವರೆಲ್ಲರ ರಾಜಕೀಯ ಭವಿಷ್ಯವು ‘ಮೈತ್ರಿ’ ಏರ್ಪಡುವುದರ ಮೇಲೆ ಅವಲಂಬಿತವಾಗಿದೆ. ಯಾವ ಪಕ್ಷಕ್ಕೆ ಕ್ಷೇತ್ರವನ್ನು ಬಿಟ್ಟು ಕೊಡಲಾಗುತ್ತದೆ ಎನ್ನುವುದರ ಮೇಲೆ ‘ಮೈತ್ರಿ ಅಭ್ಯರ್ಥಿ’ ಯಾರು ಎನ್ನುವುದು ನಿರ್ಧಾರವಾಗಲಿದೆ. ಅಧಿಸೂಚನೆ ಹೊರಬಿದ್ದ ದಿನವೇ ಕೆ.ಸಿ.ಪುಟ್ಟಸಿದ್ದಶೆಟ್ಟಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆಯ ದಿನವಾಗಿದೆ. ಹಾಗೆ ನೋಡಿದರೆ ಕೆಲವೇ ದಿನಗಳು ಬಾಕಿ ಇವೆ. ಉಮೇದುವಾರಿಕೆ ಸಲ್ಲಿಕೆಗೆ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಯಾವುದೂ ತೀರ್ಮಾನವಾಗದೇ ಇರುವುದರಿಂದ ‘ಮೈತ್ರಿ ಪಕ್ಷಗಳ ಆಕಾಂಕ್ಷಿಗಳ’ಲ್ಲಿ ತಳಮಳಕ್ಕೆ ಕಾರಣವಾಗಿದೆ. ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ಕಂಡುಬರುತ್ತಿಲ್ಲ.

ಶ್ರೀಕಂಠೇಗೌಡ ಸಭೆ ಇಂದು: ಈ ನಡುವೆ, ಮರಿತಿಬ್ಬೇಗೌಡ ಅವರು ಮೇ 14ರಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಥ್ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮೇ 11ರಂದು ಮಧ್ಯಾಹ್ನ 3ಕ್ಕೆ ಕಾಂಗ್ರೆಸ್ ಭವನದಲ್ಲಿ ಪೂರ್ವಭಾವಿ ಸಭೆಯನ್ನೂ ಕರೆಯಲಾಗಿದೆ. ಜಿಲ್ಲಾ ಉಸ್ತುವಾರಿ ಡಾ.ಎಚ್‌.ಸಿ.ಮಹದೇವಪ್ಪ ನೇತೃತ್ವದಲ್ಲಿ ಚರ್ಚೆ ನಡೆಯಲಿದೆ.

ಮೈತ್ರಿ ಕಗ್ಗಂಟಾಗಿರುವ ನಡುವೆಯೇ, ಜೆಡಿಎಸ್‌ ಟಿಕೆಟ್ ಆಕಾಂಕ್ಷಿಯಾಗಿರುವ ಕೆ.ಟಿ.ಶ್ರೀಕಂಠೇಗೌಡ ಅವರು ಕೂಡ ಮೇ 11ರಂದು ಬೆಳಿಗ್ಗೆ 11ಕ್ಕೆ ನಗರದ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ.ಸಿ.ನಿಂಗರಾಜ್‌ ಗೌಡ
ಈ.ಸಿ.ನಿಂಗರಾಜ್‌ ಗೌಡ
ಎಚ್‌.ಕೆ. ರಾಮು
ಎಚ್‌.ಕೆ. ರಾಮು

ನಾಮಪತ್ರ ಸಲ್ಲಿಕೆಗೆ ಕೆಲವೇ ದಿನ ಬಾಕಿ ಕಾಂಗ್ರೆಸ್‌ನಿಂದ ಮರಿತಿಬ್ಬೇಗೌಡ ಖಚಿತ ಬಿಜೆಪಿ–ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ

ನಾನು ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಅಧಿಕೃತವಾಗಿ ಟಿಕೆಟ್ ಘೋಷಣೆಯಾದರೆ ಮೇ 16ರಂದು ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದೇನೆ
ಇ.ಸಿ.ನಿಂಗರಾಜ್‌ಗೌಡ ಬಿಜೆಪಿ ಟಿಕೆಟ್ ಆಕಾಂಕ್ಷಿ

‘ನಾವು ಕೆಲಸಕ್ಕುಂಟು ಮತಕ್ಕಿಲ್ಲ!’ ಕ್ಷೇತ್ರದಲ್ಲಿ 10355 ಪುರುಷರು 8022 ಮಹಿಳೆಯರು ಹಾಗೂ ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 18379 ಮಂದಿ ಮತದಾರರಿದ್ದಾರೆ. ‘ಈ ಚುನಾವಣೆಯಲ್ಲಿ ಅನುದಾನಿತ ಖಾಸಗಿ ಅನುದಾನರಹಿತ ಶಾಲಾ–ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಮತದಾನದ ಹಕ್ಕು ನೀಡಲಾಗಿದೆ. ಆದರೆ ಸರ್ಕಾರಿ ಪ್ರೌಢಶಾಲೆ ಪದವಿಪೂರ್ವ ಕಾಲೇಜು ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಅತಿಥಿ’ಗಳಿಗೆ ಹಕ್ಕು ನೀಡಿಲ್ಲ’ ಎಂದು ಅತಿಥಿ ಉಪನ್ಯಾಸಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಶ್‌ ‘‍ಪ್ರಜಾವಾಣಿ’ಗೆ ತಿಳಿಸಿದರು. ‘ಹಿಂದಿನ ಚುನಾವಣೆಗಳಲ್ಲಿ ನಮಗೆ ಮತದಾನದ ಹಕ್ಕು ಇತ್ತು. ಈ ಬಾರಿ ಇಲಾಖೆಯ ಸೂಚನೆ ಮೇರೆಗೆ ಮುಖ್ಯಸ್ಥರಾದ ಪ್ರಾಂಶುಪಾಲರೇ ಅನುಮತಿ ಪತ್ರಕ್ಕೆ ಸಹಿ ಮಾಡಲಿಲ್ಲ. 20 ವರ್ಷಗಳಿಂದ ಕೆಲಸ ಮಾಡಿರುವ ನನಗೂ ಮತದಾನದ ಹಕ್ಕು ಸಿಕ್ಕಿಲ್ಲ. ₹5 ಸಾವಿರ ಸಂಬಳ ಹಾಗೂ 8 ಗಂಟೆ ಕಾರ್ಯಭಾರ ಇದ್ದಾಗ ಮತದಾನದ ಹಕ್ಕಿತ್ತು. ಈಗ ವಾರಕ್ಕೆ 15 ಗಂಟೆ ಕಾರ್ಯಭಾರ ಗರಿಷ್ಠ ₹40 ಸಾವಿರದವರೆಗೆ ಗೌರವಧನ ಕೊಡುತ್ತಿದ್ದರೂ ಅವಕಾಶ ಇಲ್ಲವಾಗಿದೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆಯಾದರೂ ಸ್ಪಂದನೆ ದೊರೆತಿಲ್ಲ’ ಎಂದು ಹೇಳಿದರು. ‘ನಮ್ಮನ್ನೆಲ್ಲ ಪಟ್ಟಿಗೆ ಸೇರಿಸಿದ್ದರೆ ಮತದಾರರ ಸಂಖ್ಯೆ ಇನ್ನೂ 4 ಸಾವಿರಕ್ಕೂ ಹೆಚ್ಚಾಗುತ್ತಿತ್ತು. ನಮ್ಮ ಸಮಸ್ಯೆಗೆ ಸ್ಪಂದಿಸುವವರಿಲ್ಲ. ಮತ ಕೇಳುವವರೂ ಇಲ್ಲ. ನಮ್ಮ ಬೇಡಿಕೆ ಈಡೇರಿಕೆಗಾಗಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್‌ ಸದಸ್ಯರನ್ನು ಕೇಳುವುದಕ್ಕೇ ಆಗದಂತಹ ಪರಿಸ್ಥಿತಿ ಬಂದೊದಗಿದೆ. ಇದರಿಂದ ಬಹಳ ಅನ್ಯಾಯವಾಗಿದ್ದು ಮತದಾನದ ಹಕ್ಕೇ ಇಲ್ಲದಿರುವುದರಿಂದ ಬೇಡಿಕೆಗಳನ್ನು ಮುಂದಿಡುವುದಕ್ಕೆ ಸಾಧ್ಯವಾಗದಂಥ ಪರಿಸ್ಥಿತಿ ಬಂದೊದಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT