ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲೆ ಆರೋಪಿಗಳಿಗೆ ಗಲ್ಲುಶಿಕ್ಷೆಯಾಗಲಿ: ಮೈಸೂರು ಕನ್ನಡ ವೇದಿಕೆ

Published 14 ಜೂನ್ 2024, 15:14 IST
Last Updated 14 ಜೂನ್ 2024, 15:14 IST
ಅಕ್ಷರ ಗಾತ್ರ

ಮೈಸೂರು: ‘ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ದರ್ಶನ್‌ ಹಾಗೂ ಅವರ ಸಹಚರರನ್ನು ಗಲ್ಲಿಗೇರಿಸಬೇಕು’ ಎಂದು ಒತ್ತಾಯಿಸಿ ಮೈಸೂರು ಕನ್ನಡ ವೇದಿಕೆ ಪದಾಧಿಕಾರಿಗಳು ಶುಕ್ರವಾರ ಹಳೇ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿದರು.

ವೇದಿಕೆ ಅಧ್ಯಕ್ಷ ಎಸ್‌.ಬಾಲಕೃಷ್ಣ ಮಾತನಾಡಿ, ‘ಈ ಹಿಂದೆ ರಾಜ್‌ಕುಮಾರ್‌, ಶಂಕರ್‌ನಾಗ್‌, ಅಂಬರೀಷ್‌, ವಿಷ್ಣುವರ್ಧನ್‌ ಅವರಿಂದ ಪ್ರೇರಿತರಾಗಿ ಅನೇಕರು ನಟನೆಯ ಕನಸು ಕಟ್ಟಿಕೊಳ್ಳುತ್ತಿದ್ದರು. ತೆರೆಯ ಮೇಲೆ ಖಳನಟರಾಗಿದ್ದವರು ಸಮಾಜದಲ್ಲಿ ಅಭಿಮಾನ ಪೂರ್ವಕವಾಗಿ ಬದುಕಿ ಇತರರಿಗೆ ಮಾದರಿಯಾಗಿದ್ದರು. ಆದರೆ, ದರ್ಶನ್‌ ಸಿನಿಮಾದಲ್ಲಿ ನಾಯಕರಾದರೂ, ತೆರೆಯ ಹಿಂದೆ ಕೊಲೆಗಡುಕರಾಗಿ ಗುರುತಿಸಿಕೊಂಡು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆ’ ಎಂದು ದೂರಿದರು.

‘ರೇಣುಕಸ್ವಾಮಿ ಕೊಲೆ ತಾವೇ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡ ಬಳಿಕವೂ ಠಾಣೆಗೆ ಶಾಮಿಯಾನ ಹಾಕಿ, ಐಷಾರಾಮಿ ಹೋಟೆಲ್‌ನಂತೆ ಆರೋಪಿಗಳಿಗೆ ಬೇಕಾದದ್ದನ್ನು ಪೂರೈಸುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ. ಅಲ್ಲದೆ ಠಾಣೆಯ ಸುತ್ತ 144 ಸೆಕ್ಷನ್‌ ವಿಧಿಸಿರುವುದರಿಂದ ಜನರ ಓಡಾಟಕ್ಕೆ ತೊಂದರೆಯಾಗಿದೆ. ನಿಷೇಧಾಜ್ಞೆ ತೆಗೆದು ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

‘ದರ್ಶನ್‌ ಅವರ ಚಿತ್ರಗಳನ್ನು ಚಲನಚಿತ್ರ ಮಂಡಳಿಯು ಬಹಿಷ್ಕರಿಸಬೇಕು. ಅವರ ನಟನೆಗೆ ನಿರ್ಮಾಪಕ, ನಿರ್ದೇಶಕರು ಅವಕಾಶ ನೀಡಬಾರದು. ದರ್ಶನ್‌ ಹಾಗೂ ಇತರೆ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿ ನೊಂದ ಕುಟುಂಬದವರಿಗೆ ಪರಿಹಾರವಾಗಿ ನೀಡಬೇಕು’ ಎಂದು ಆಗ್ರಹಿಸಿದರು.

‘ನೊಂದ ಕುಟುಂಬದವರಿಗೂ ತಮಗೂ ಸಂಬಂಧವಿಲ್ಲದಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಕೂಡಲೇ ಆ ಕುಟುಂಬದವರಿಗೆ ಪರಿಹಾರ ನೀಡದಿದ್ದರೆ ರಾಜ್ಯದಾದ್ಯಂತ ಎಲ್ಲ ಸಂಘ ಸಂಸ್ಥೆಗಳು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ನಾಲಾಬೀದಿ ರವಿ, ಗುರು ಬಸಪ್ಪ, ಬೋಗಾದಿ ಸಿದ್ದೇಗೌಡ, ಗೋಪಿ, ಪ್ಯಾಲೇಸ್ ಬಾಬು, ಸಿದ್ದಪ್ಪ ಎಲ್‌ಐಸಿ, ಮಾಲಿನಿ, ಗೋವಿಂದ ರಾಜು, ಬೀಡಾ ಬಾಬು, ಹರೀಶ್, ಮಾದಪ್ಪ, ಅರವಿಂದ್ ಮನೋಹರ್, ಸುನಿಲ್, ಸ್ವಾಮಿ ಗೈಡ್, ಶಿವಣ್ಣ ನಾಯಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT