ಮೈಸೂರು: ‘ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿದರು.
ಟೆರೇಷಿಯನ್ ಕಾಲೇಜು ಬಳಿ ಜಮಾಯಿಸಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
‘ಮೀಸಲಾತಿಯು ಪರಿಶಿಷ್ಟ ಜನಾಂಗದ 101 ಜಾತಿಗಳಲ್ಲಿ ಸಮಾನವಾಗಿ ಹಂಚಿಕೆಯಾಗಿಲ್ಲ ಎಂಬ ಆತಂಕ ಹಾಗೂ ಅಸಹನೆಯಿಂದ 30 ದಶಕಗಳಿಂದ ರಾಜ್ಯದಾದ್ಯಂತ ನಿರಂತರ ಹೋರಾಟ ನಡೆಯುತ್ತಿವೆ. ಸುಪ್ರೀಂ ಕೋರ್ಟ್ ಆ.1ರಂದು ಐತಿಹಾಸಿಕ ತೀರ್ಪು ನೀಡಿ ಈ ವಿವಾದಕ್ಕೆ ತೆರೆ ಎಳೆದಿದೆ. ಹೀಗಾಗಿ ರಾಜ್ಯ ಸರ್ಕಾರ ಒಳ ಮೀಸಲಾತಿ ಅನುಷ್ಠಾನಗೊಳಿಸಿ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.
‘ಸಮುದಾಯಕ್ಕೆ ಮೀಸಲಾದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರ, ಅದನ್ನು ಅಭಿವೃದ್ಧಿಗೆ ವಾಪಸ್ ನೀಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸ್ಥಗಿತ ಮಾಡಲಾಗಿದೆ. ಮೆರಿಟ್ ವಿದ್ಯಾರ್ಥಿ ವೇತನ ಮತ್ತು ವಿದೇಶ ವ್ಯಾಸಂಗದ ಪ್ರಬುದ್ಧ ಯೋಜನೆ ರದ್ದು ಮಾಡಿದ್ದು, ಅದನ್ನೂ ಪುನರಾರಂಭಿಸಬೇಕು’ ಎಂದು ಒತ್ತಾಯಿಸಿದರು.
‘ಪರಿಶಿಷ್ಟರ ಮೀಸಲಾತಿ ವರ್ಗೀಕರಣವಾಗುವವರೆಗೆ ಸರ್ಕಾರ ಎಲ್ಲಾ ಸರ್ಕಾರಿ ನೇಮಕಾತಿಗಳನ್ನು ಸ್ಥಗಿತಗೊಳಿಸಬೇಕು’ ಎಂದರು.
ಸಂಘಟನೆಯ ರಾಜ್ಯಾಧ್ಯಕ್ಷ ಎನ್.ಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ಶಂಕರ್, ಮೈಸೂರು ತಾಲ್ಲೂಕು ಘಟಕದ ಅಧ್ಯಕ್ಷ ಸ್ವಾಮಿ, ತಿ.ನರಸೀಪುರ ತಾಲ್ಲೂಕು ಘಟಕದ ಅಧ್ಯಕ್ಷ ಬಲ್ಲಯ್ಯ, ರವೀಶ್, ಸಿದ್ದಪ್ಪ, ಗಿರೀಶ್ ಕುಮಾರ್ ಭಾಗವಹಿಸಿದ್ದರು.