ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಂಬುಧಿ ಕೆರೆ: ಕೊಳಚೆ ತೆರವುಗೊಳಿಸದೆ ಹೂಳು ತೆರವು

ಲಿಂಗಾಂಬುಧಿ ಕೆರೆ ಸಮಸ್ಯೆಗಿಲ್ಲ ಮುಕ್ತಿ; ಆತಂಕದಲ್ಲಿ ಜನ
Published 14 ಸೆಪ್ಟೆಂಬರ್ 2023, 5:57 IST
Last Updated 14 ಸೆಪ್ಟೆಂಬರ್ 2023, 5:57 IST
ಅಕ್ಷರ ಗಾತ್ರ

ಮೈಸೂರು: ಲಿಂಗಾಂಬುಧಿ ಕೆರೆ ಸಂಪರ್ಕಿಸುವ ರಾಜಕಾಲುವೆಯಲ್ಲಿ ನಿಂತಿರುವ ಕೊಳಚೆ ನೀರನ್ನು ತೆರವುಗೊಳಿಸದೇ ಹೂಳನ್ನು ತೆಗೆಯಲಾಗುತ್ತಿದ್ದು, ಮತ್ತೊಮ್ಮೆ ಕೆರೆಗೆ ಕಂಟಕ ಎದುರಾಗಿದೆ.

‘ಇತ್ತೀಚೆಗೆ ಸಾವಿರಾರು ಮೀನುಗಳ ಸಾವನ್ನು ಕಂಡಿರುವ ಕೆರೆ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಬಳಿಕ, ನಡೆಯುತ್ತಿರುವ ಕೆಲಸ ಆತಂಕವನ್ನು ಹೆಚ್ಚಿಸುತ್ತಿದೆ’ ಎಂದು ನಿವಾಸಿಗಳು ದೂರಿದ್ದಾರೆ.

ಕೌಟಿಲ್ಯ ಶಾಲೆ ಬಳಿ ಕೆರೆ ಸಂಪರ್ಕಿಸುವ ರಾಜಕಾಲುವೆಯಲ್ಲಿ ಮಂಗಳವಾರ ಜೆಸಿಬಿ ಮೂಲಕ ಪಾಲಿಕೆಯಿಂದ ಹೂಳನ್ನು ತೆಗೆಯಲಾಗಿದ್ದು, ಕೊಳಚೆ ನೀರು ಅಡೆತಡೆಯಿಲ್ಲದೆ ಕೆರೆಯತ್ತ ಸಾಗಲು ಸಿದ್ಧವಾಗಿದೆ.

‘ದಟ್ಟಗಳ್ಳಿಯಿಂದ ಕೆರೆಗೆ ಸಂಪರ್ಕಿಸುವ ರಾಜ ಕಾಲುವೆಯಲ್ಲಿ ಹೂಳು ತುಂಬಿ, ಕೊಳಚೆ ನೀರು ಅಲ್ಲಲ್ಲೇ ನಿಂತಿದ್ದು, ಹೂಳು ತೆಗೆದಾಗ ಒಮ್ಮೆಲೆ ಕೆರೆಗೆ ನೀರು ನುಗ್ಗಲಿದೆ. ಕೊಳಚೆ ನಿರ್ವಹಣೆಗೆ ಕ್ರಮ ಕೈಗೊಳ್ಳದೇ ಕಾಮಗಾರಿ ಮಾಡಿದರೆ ಹಿಂದಿನಂತೆಯೇ ಕೆರೆಯ ಜೀವ ಸಂಕಲಕ್ಕೆ ಅಪಾಯ ಖಚಿತ’ ಎಂದು ವಿಶ್ವವಿದ್ಯಾಲಯ ಬಡಾವಣೆ ನಿವಾಸಿ ಪ್ರೊ.ಕೆ.ಎ.ನಾಣಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

‘ಕೆರೆಗೆ ಸಾಗುವ ರಾಜಕಾಲುವೆಯಲ್ಲಿ ಒಳ ಚರಂಡಿ ಪೈಪ್‌ ಅಳವಡಿಸಿದ್ದು, ಅದರ ಮ್ಯಾನ್‌ಹೋಲ್‌ಗಳು ಉಕ್ಕುತ್ತವೆ. ಇಲಾಖೆಗಳು ಸಂಘಟಿತವಾಗಿ ರಾಜ ಕಾಲುವೆಗಳನ್ನು ನಿರ್ವಹಿಸುತ್ತಿಲ್ಲ. ಕೊಳಚೆ ನೀರು ಒಮ್ಮೆಲೆ ಬಂದು ಸಾವಿರಾರು ಮೀನು ಸತ್ತಿರುವ ದೃಶ್ಯ ಕಣ್ಣೆದುರಿದ್ದರೂ, ಯಾರೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಗಿಲ್ಲ ಮಾಹಿತಿ: ಕೆರೆಯು ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ನಿರ್ವಹಣೆಯಲ್ಲಿದ್ದು, ಕೆರೆ ಪರಿಸರದ ಆರೋಗ್ಯಕ್ಕೆ, ಜೀವ ಸಂಕುಲಕ್ಕೆ ಅಗತ್ಯ ನೀರಿನ ಮೂಲವಾದ ರಾಜಕಾಲುವೆಗಳನ್ನು ನಿರ್ವಹಣೆ ಮಾಡುತ್ತಿರುವ ಬಗ್ಗೆ ಇಲಾಖೆಗೆ ಮಾಹಿತಿಯೇ ಇಲ್ಲ.

ಕೆಇಬಿ ಜಂಕ್ಷನ್‌ನ ಆಚಾರ್ಯ ಶಾಲೆ ಬಳಿಯ ರಾಜಕಾಲುವೆ ಮಧ್ಯದಲ್ಲಿ ಹಾದುಹೋಗಿರುವ ಒಳಚರಂಡಿ ಮ್ಯಾನ್‌ಹೋಲ್‌ ಉಕ್ಕುತ್ತಿರುವುದು.
ಕೆಇಬಿ ಜಂಕ್ಷನ್‌ನ ಆಚಾರ್ಯ ಶಾಲೆ ಬಳಿಯ ರಾಜಕಾಲುವೆ ಮಧ್ಯದಲ್ಲಿ ಹಾದುಹೋಗಿರುವ ಒಳಚರಂಡಿ ಮ್ಯಾನ್‌ಹೋಲ್‌ ಉಕ್ಕುತ್ತಿರುವುದು.
ಬಸವರಾಜು
ಬಸವರಾಜು
ಕೆ.ಎ.ನಾಣಯ್ಯ
ಕೆ.ಎ.ನಾಣಯ್ಯ
ಕೊಳಚೆ ನೀರನ್ನು ನಿರ್ವಹಿಸಿದ ಬಳಿಕ ಹೂಳು ತೆರವು ಮಾಡಬೇಕು. ಜಾಲರಿ ಅಳವಡಿಕೆ ಕೊಳಚೆ ನಿರ್ವಹಣೆಯ ಕೆಲಸ ಮೊದಲಾಗಬೇಕು
ಪ್ರೊ.ಕೆ.ಎ.ನಾಣಯ್ಯ

ಕೊಳಚೆ ನಿರ್ವಹಿಸದಿದ್ದರೆ ಸಮಸ್ಯೆ

‘ಹೂಳು ತೆಗೆಯುತ್ತಿರುವ ವಿಚಾರ ತಿಳಿದಿಲ್ಲ. ಕೊಳಚೆ ನೀರನ್ನು ಕ್ರಮಬದ್ಧವಾಗಿ ನಿರ್ವಹಿಸದೇ ಹೂಳು ತೆಗೆಯುವುದು ಕೆರೆಗೆ ಆತಂಕಕಾರಿ’ ಎಂದು ಡಿಸಿಎಫ್‌ (ಪ್ರಾದೇಶಿಕ) ಬಸವರಾಜು ಹೇಳಿದರು. ‘ಕೆರೆಗೆ ನೀರನ್ನು ಹರಿಸುವ ಮುನ್ನ ಶುದ್ಧೀಕರಿಸಿ ತ್ಯಾಜ್ಯಗಳಿಲ್ಲದಂತೆ ಜಾಲರಿ ಅಳವಡಿಸಿ ಬಿಡಬೇಕು. ಹೂಳು ತೆರವಿಗೂ ಮುನ್ನ ನಿಂತಿರುವ ಕೊಳಚೆ ನೀರನ್ನು ತೆರವು ಮಾಡುವುದು ಅಗತ್ಯ. ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದವರೆಗೆ ತಿಳಿಸಲಾಗುವುದು’ ಎಂದರು.

ಮಳೆ ನೀರಿನ ಹರಿವಿಗೆ ಅನುಕೂಲ

‘ಮಳೆ ನೀರಿನ ಸರಾಗ ಹರಿವಿಗೆ ಅನುಕೂಲ ಮಾಡಲು ಮೂರು ತಿಂಗಳಿಗೊಮ್ಮೆ ರಾಜಕಾಲುವೆಯ ಹೂಳು ಗಿಡ ಗಂಟಿಗಳನ್ನು ತೆಗೆಯಲಾಗುತ್ತದೆ. ಒಳ್ಳೆಯ ಉದ್ದೇಶದಿಂದಲೇ ಕೆಲಸ ಮಾಡಿದ್ದೇವೆ’ ಎಂದು ಪಾಲಿಕೆ ವಲಯ–3ರ ಆಯುಕ್ತ ಟಿ.ಎಸ್‌.ಸತ್ಯಮೂರ್ತಿ ತಿಳಿಸಿದರು. ‘ಜೋರು ಮಳೆ ಬಂದರೆ ದಟ್ಟಗಳ್ಳಿ ಕೌಟಿಲ್ಯ ಶಾಲೆ ಬಳಿಯೆಲ್ಲ ನೀರು ನಿಂತು ಮನೆಗಳಿಗೆ ನುಗ್ಗುವ ಪರಿಸ್ಥಿತಿ ಏರ್ಪಡುತ್ತದೆ. ರಾಜಕಾಲುವೆ ಹೂಳಿನಿಂದ ಮುಕ್ತವಾಗಿದ್ದರೆ ಮಾತ್ರ ಅದನ್ನು ತಡೆಯಬಹುದು. ಹಾಗಾಗಿ ಹೂಳು ತೆರವು ಮಾಡಲಾಗಿದೆ. ಕೊಳಚೆ ನೀರು ಅಷ್ಟಾಗಿ ಇರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT