ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಸಾಮಾಜಿಕ ಅಂತರ ಪಾಲನೆ, ಖಾಸಗಿ ಕಂಪನಿ ನೌಕರನ ಕಾಳಜಿ

ಲಾಕ್‌ಡೌನ್‌ ವೇಳೆ ಮನೆ ಬಾಗಿಲಿಗೆ ದಿನಸಿ
Last Updated 9 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಮೈಸೂರು: ‘ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುವುದನ್ನು ತಪ್ಪಿಸಿ. ನಿಮ್ಮ ಮನೆ ಬಾಗಿಲಿಗೆ ದಿನಸಿ ಪದಾರ್ಥ...’

ಈ ಸಂದೇಶದೊಂದಿಗೆ ಆಟೊಮೆಟಿವ್ ಆ್ಯಕ್ಸಿಲ್ಸ್‌ ಕಂಪನಿಯ ನೌಕರ ಪಿ.ಮೋಹನ್‌ಕುಮಾರ್ ಗೂಡ್ಸ್‌ ಆಟೊದಲ್ಲಿ ಮೈಸೂರಿನ ಎನ್‌.ಆರ್‌.ಮೊಹಲ್ಲಾದ ಈಶಾನ್ಯ ಭಾಗ, ಪೆನ್ಷನರ್ಸ್‌ ಬ್ಲಾಕ್, ಎನ್‌ಜಿಒಎಸ್‌ ಕಾಲೊನಿ ಸೇರಿದಂತೆ ವಿವಿಧೆಡೆ ನಿತ್ಯವೂ ಸಂಚರಿಸುತ್ತಿದ್ದಾರೆ. ಆಟೊಗೆ ಮೈಕ್‌ ಕಟ್ಟಿಕೊಂಡು ಕೊರೊನಾ ವೈರಾಣು ಜೀವಕ್ಕೆ ತಂದೊಡ್ಡುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ, ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನೂ ತಿಳಿಸುತ್ತಿದ್ದಾರೆ.

ಇದೇ ಗೂಡ್ಸ್‌ ಆಟೊದಲ್ಲಿ ನಿತ್ಯವೂ ಗೃಹ ಬಳಕೆಯ ವಸ್ತುಗಳಾದ ದಿನಸಿ ಸಾಮಗ್ರಿ, ಸಂಬಾರು ಪದಾರ್ಥ, ಕಾಳು, ಬೇಳೆ, ದೋಸೆ ಅಕ್ಕಿ, ಇಡ್ಲಿ ಅಕ್ಕಿ, ಕುಚಲಕ್ಕಿ, ಅವಲಕ್ಕಿ, ಬಿ.ಟಿ.ರೈಸ್‌, ಸೋನಾ ಮಸೂರಿ, ರಾ ರೈಸ್‌, ಸ್ನಾನದ ಸಾಬೂನು, ಬಟ್ಟೆ ತೊಳೆಯುವ ಸಾಬೂನು... ಸೇರಿ‌ದಂತೆ ಅವಶ್ಯಕ ಸಾಮಗ್ರಿಗಳನ್ನು ದಿನಸಿ ಅಂಗಡಿಗಳಲ್ಲಿ ಮಾರಾಟ ಮಾಡುವ ಧಾರಣೆಗಿಂತ ₹ 1, ₹ 2 ಕಡಿಮೆ ಬೆಲೆಯಲ್ಲಿ ಮನೆ ಮನೆಗೆ ಮಾರಾಟ ಮಾಡುತ್ತಿದ್ದಾರೆ.

ಮೋಹನ್‌ಕುಮಾರ್‌ ಅವರ ಈ ಕೆಲಸಕ್ಕೆ ಎನ್‌.ಆರ್.ಮೊಹಲ್ಲಾ ಭಾಗದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಗ್ರಾಹಕರೂ ಸಾಮಾಜಿಕ ಅಂತರವನ್ನು ಪಾಲಿಸುತ್ತಿದ್ದಾರೆ.

ಲಾಭಕ್ಕಲ್ಲ–ಸೇವೆಗೆ: ‘ಲಾಕ್‌ಡೌನ್‌ ಘೋಷಣೆಯಾದ ಬಳಿಕ ಹಲವು ದಿನ ಮನೆಯಲ್ಲೇ ಇದ್ದೆ. ಇಂಥ ಸನ್ನಿವೇಶದಲ್ಲಿ ಸಮಾಜಕ್ಕೆ ನನ್ನಿಂದಾದ ಸೇವೆ ಸಲ್ಲಿಸೋಣ ಎಂದು ನಿರ್ಧರಿಸಿದೆ. ಆಗ ಹೊಳೆದಿದ್ದೇ ಮನೆ ಮನೆಗೆ ದಿನಸಿ ಮಾರಾಟ’ ಎಂದು ಮೋಹನ್‌ಕುಮಾರ್ ‘ಪ್ರಜಾವಾಣಿ’ಗೆ ವಿವರಿಸಿದರು.

‘ಕೊರೊನಾ ವೈರಸ್ ಹರಡುವಿಕೆಯ ಸರಪಳಿ ತುಂಡರಿಸಲು ಇದು ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ತಕ್ಷಣವೇ ನನ್ನ ಉದ್ದೇಶ, ದಾಖಲೆಗಳೊಂದಿಗೆ ಪಾಲಿಕೆ ಕಚೇರಿಗೆ ಹೋದೆ. ಅನುಮತಿ ಕೋರಿದೆ. ಅಧಿಕಾರಿಗಳು ಕೊಟ್ಟರು. 8–9 ದಿನದಿಂದಲೂ ದಿನಸಿ ತಲುಪಿಸುತ್ತಿದ್ದೇನೆ’ ಎಂದು ಅವರು ಹೇಳಿದರು.

‘ಎಪಿಎಂಸಿಯಲ್ಲಿ ದಿನಸಿ ಸಾಮಗ್ರಿಯನ್ನು ಹೋಲ್‌ಸೇಲ್ ದರದಲ್ಲೇ ಖರೀದಿಸುವೆ. ಚಿಲ್ಲರೆ ಧಾರಣೆಗಿಂತಲೂ ಕಡಿಮೆ ದರಕ್ಕೆ ಜನರಿಗೆ ಮಾರಾಟ ಮಾಡುವೆ. ನಿತ್ಯ ₹ 300ರಿಂದ ₹ 400 ಲಾಭ ಸಿಕ್ಕರೆ ಸಾಕು. ಇದು ಆಟೊ ಬಾಡಿಗೆ ಭರಿಸಲು ಸಾಕಾಗುತ್ತದೆ’ ಎಂದರು ಮೋಹನ್‌ಕುಮಾರ್‌. ಸಂಪರ್ಕ ಸಂಖ್ಯೆ ಮೊ: 8660042464

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT