ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: 52 ಮತಗಟ್ಟೆಗಳ ಸುತ್ತಲೂ ಅರಣ್ಯ ಸಿಬ್ಬಂದಿಯ ಪಹರೆ!

ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಿರುವ ಕಡೆಗಳಲ್ಲಿ ವಿಶೇಷ ಕಣ್ಗಾವಲು
Published 24 ಏಪ್ರಿಲ್ 2024, 21:01 IST
Last Updated 24 ಏಪ್ರಿಲ್ 2024, 21:01 IST
ಅಕ್ಷರ ಗಾತ್ರ

ಮೈಸೂರು: ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಿರುವ ಮತಗಟ್ಟೆಗಳಲ್ಲಿ ಈ ಬಾರಿ ಅರಣ್ಯ ಸಿಬ್ಬಂದಿ ಕಾವಲಿಗೆ ನಿಲ್ಲಲಿದ್ದು, ಹಕ್ಕು ಚಲಾಯಿಸಲು ಬರುವ ಮತದಾರರಿಗೆ ಭದ್ರತೆ ಒದಗಿಸಲಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ, ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ 4 ತಾಲ್ಲೂಕು
ಗಳಲ್ಲಿ 52 ಮತಗಟ್ಟೆಗಳನ್ನು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯು ಗುರುತಿಸಿದ್ದು, ಅಲ್ಲಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.

ಚಾಮರಾಜನಗರ ಕ್ಷೇತ್ರಕ್ಕೆ ಸೇರಿದ ವರುಣ (ಮೈಸೂರು ತಾಲ್ಲೂಕು), ನಂಜನಗೂಡು, ಎಚ್‌.ಡಿ. ಕೋಟೆ ಹಾಗೂ ಸರಗೂರು ಭಾಗದಲ್ಲಿ ಈ ಮತಗಟ್ಟೆಗಳಿದ್ದು, ಆನೆ, ಚಿರತೆ ಹಾಗೂ ಹುಲಿಗಳ ಓಡಾಟ ಹೆಚ್ಚಿದೆ. ಅಲ್ಲೆಲ್ಲ ಆನೆ ಹಾಗೂ ಚಿರತೆ ಕಾರ್ಯಪಡೆಗಳ ಜೊತೆ ಅರಣ್ಯ ಸಿಬ್ಬಂದಿ ನಿಗಾ ವಹಿಸಲಿದ್ದಾರೆ.

‘ಜಿಲ್ಲೆಯಲ್ಲಿ ಇದಕ್ಕಾಗಿ 8 ತಂಡಗಳನ್ನು ರಚಿಸಲಾಗಿದೆ. ಸ್ಥಳೀಯ ಡಿಆರ್‌ಎಫ್‌ಒ ಪ್ರತಿ ತಂಡದ ನೇತೃತ್ವ ವಹಿಸಲಿದ್ದು, ಅರಣ್ಯ ವೀಕ್ಷಕರೂ ಸೇರಿದಂತೆ ಒಂದು ತಂಡದಲ್ಲಿ 5–6 ಸಿಬ್ಬಂದಿ ಇರಲಿದ್ದಾರೆ. ಒಂದು ತಂಡಕ್ಕೆ 4ರಿಂದ 6 ಮತಗಟ್ಟೆಗಳ ಉಸ್ತುವಾರಿ ನೀಡಲಾಗಿದೆ. ಅವರು ಈ ಮತಗಟ್ಟೆಗಳ ಸುತ್ತಲೇ ಓಡಾಡುತ್ತ ಅಲ್ಲಿ ವನ್ಯಜೀವಿಗಳ ಚಲನವಲನ ಗಮನಿಸಲಿದ್ದಾರೆ’ ಎಂದು ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್‌. ಬಸವರಾಜು ಅವರು ‘ಪ್ರಜಾವಾಣಿ’ಗೆ ಬುಧವಾರ ಮಾಹಿತಿ ನೀಡಿದರು.

‘ಒಂದು ವೇಳೆ ವನ್ಯಜೀವಿ ದಾಳಿಯಂತಹ ಸಂದರ್ಭ ಎದುರಾದಲ್ಲಿ ಯಾರಿಗೂ ತೊಂದರೆ ಆಗದಂತೆ ಅದನ್ನು ಸೂಕ್ಷ್ಮವಾಗಿ ಎದುರಿಸುವ ತರಬೇತಿ ಹಾಗೂ ಅಗತ್ಯ ಸಲಕರಣೆಗಳನ್ನು ತಂಡಗಳಿಗೆ ನೀಡಲಾಗಿದೆ. ಮತಗಟ್ಟೆಗಳತ್ತ ವನ್ಯಜೀವಿಗಳು ಸುಳಿಯದಂತೆ ಸಿಬ್ಬಂದಿ ನೋಡಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಇಂತಹ ಸಂಘರ್ಷ ಮತಗಟ್ಟೆಗಳನ್ನು ಗುರುತಿಸಲಾಗಿತ್ತು. ಆದರೆ ಮೊದಲ ಬಾರಿಗೆ ತಂಡಗಳನ್ನು ರಚಿಸಿ ಗಸ್ತಿನ ವ್ಯವಸ್ಥೆ ಮಾಡಿದ್ದೇವೆ’ ಎಂದು ಹೇಳಿದರು.

ಮೈಸೂರು–ಕೊಡಗು, ಚಾಮ ರಾಜನಗರ ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನವು ಶುಕ್ರವಾರ (ಏ.26) ನಡೆಯಲಿದೆ. ಗುರುವಾರ ಸಂಜೆ ವೇಳೆಗೆ ಮತದಾನ ಸಿಬ್ಬಂದಿ ಸಲಕರಣೆಗಳನ್ನು ಹೊತ್ತು ಮತಗಟ್ಟೆಗಳನ್ನು ತಲುಪಲಿದ್ದಾರೆ. ಅವರೊಟ್ಟಿಗೆ ಅರಣ್ಯ ಇಲಾಖೆ ಸಿಬ್ಬಂದಿಯೂ ಗಸ್ತು ಆರಂಭಿಸಲಿದ್ದಾರೆ. ಶುಕ್ರವಾರ ಮತದಾನ ಪ್ರಕ್ರಿಯೆ ಮುಗಿದು ಸಿಬ್ಬಂದಿ ಮತಗಟ್ಟೆಗಳಿಂದ ವಾಪಸ್ ಆಗುವರೆಗೂ ಈ ತಂಡಗಳು ಅಲ್ಲಿಯೇ ಇರಲಿವೆ.

ವನ್ಯಜೀವಿ ಓಡಾಟ ಹೆಚ್ಚಿರುವ ಕಡೆಗಳಲ್ಲೂ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಸಿಬ್ಬಂದಿ ಗಸ್ತು ತಿರುಗಲಿದ್ದು, ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬೇಕು.
–ಡಾ. ಕೆ.ವಿ. ರಾಜೇಂದ್ರ ಜಿಲ್ಲಾಧಿಕಾರಿ, ಮೈಸೂರು
ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ 52 ಮತಗಟ್ಟೆಗಳಲ್ಲಿ ವನ್ಯಜೀವಿ ಓಡಾಟ ಹೆಚ್ಚಿದ್ದು, ಅಂತಹ ಕಡೆಗಳಲ್ಲಿ ಗುರುವಾರ ಸಂಜೆಯಿಂದಲೇ ನಮ್ಮ ಸಿಬ್ಬಂದಿ ಇರಲಿದ್ದಾರೆ. ಕಾಡುಪ್ರಾಣಿಗಳ ಓಡಾಟದ ಮೇಲೆ ನಿಗಾ ವಹಿಸಲಿದ್ದಾರೆ.
–ಕೆ.ಎನ್‌. ಬಸವರಾಜು ಡಿಸಿಎಫ್‌, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT