ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2014ರಿಂದಲೇ ಬಿಜೆಪಿ ಜೊತೆ ಮೈತ್ರಿ: ಎಚ್‌ಡಿಕೆ

Published 28 ಮಾರ್ಚ್ 2024, 15:44 IST
Last Updated 28 ಮಾರ್ಚ್ 2024, 15:44 IST
ಅಕ್ಷರ ಗಾತ್ರ

ಮೈಸೂರು: ‘2014ರಿಂದಲೇ ಮೈಸೂರಿನಲ್ಲಿ ಅನಧಿಕೃತವಾಗಿ ಜೆಡಿಎಸ್, ಬಿಜೆಪಿ ಮೈತ್ರಿಯಲ್ಲಿವೆ. ಹೀಗಾಗಿ, ಈ ಮೈತ್ರಿ ಹೊಸದೇನಲ್ಲ. ಕಾರ್ಯಕರ್ತರಲ್ಲಿ ಯಾವ ಗೊಂದಲಗಳೂ ಇಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಚಾಮುಂಡಿಬೆಟ್ಟಕ್ಕೆ ಗುರುವಾರ ಭೇಟಿ ನೀಡಿದ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಎರಡು ಪಕ್ಷಗಳ ಕಾರ್ಯಕರ್ತರು ಮೊದಲಿನಿಂದಲೂ ಬಹಳ ಸಮನ್ವಯದಿಂದ ಇದ್ದಾರೆ. ಈಗಲೂ ಇರುತ್ತಾರೆ’ ಎಂದರು.

‘ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಕಳೆದ ಬಾರಿ ಮಂಡ್ಯದಲ್ಲಿ ನನ್ನ ಮಗನ ಸೋಲಿಗೆ ಈ ಮಹಾನುಭಾವರು ಎಷ್ಟು ಕಾರಣ ಎಂಬುದು ಗೊತ್ತಿದೆ. ಅದರ ಆಧಾರದ ಮೇಲೆ ಇವರು ಈಗ ಮಾತನಾಡುತ್ತಿದ್ದಾರೆ. ಎಲ್ಲದಕ್ಕೂ ಜನ ಉತ್ತರ ಕೊಡುತ್ತಾರೆ’ ಎಂದರು.

‘ನನ್ನನ್ನು ವಲಸಿಗ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ನೀವು ಯಾರು? ಅಲ್ಲಿ ನೀವು ವಲಸಿಗರಲ್ಲವಾ? ಮೂಲ ಕಾಂಗ್ರೆಸಿನವರನ್ನು ಕಸದ ಬುಟ್ಟಿಗೆ ಹಾಕಿ ನೀವು ಅಲ್ಲಿ ಅಧಿಕಾರ ಮಾಡುತ್ತಿಲ್ಲವಾ’ ಎಂದು ಪ್ರಶ್ನಿಸಿದರು.

‘ಸುಮಲತಾ ನನಗೇನು ಶಾಶ್ವತ ಶತ್ರುವಲ್ಲ. ರಾಜಕೀಯದಲ್ಲಿ ಹೋರಾಟ, ಜಗಳ ಇದ್ದದ್ದೇ. ರಾಜಕಾರಣದಿಂದಾಗಿ ಕೆಲವು ವ್ಯತ್ಯಾಸಗಳು ಆಗಿದ್ದವು. ಅಗತ್ಯ ಬಿದ್ದರೆ ಅವರನ್ನು ಭೇಟಿ ಮಾಡುತ್ತೇನೆ. ಈ ಬಾರಿ ಮಂಡ್ಯದಲ್ಲಿ ನಮ್ಮ ಹಳೇ ಸ್ನೇಹಿತರ ಜೊತೆ ಸ್ಪರ್ಧೆ ಎದುರಿಸಬೇಕು. ನನ್ನ ಹಣೆಬರಹ ಹೀಗಿದೆ. ಸ್ನೇಹಿತರೇ ವಿರುದ್ಧವಾಗಿದ್ದಾರೆ’ ಎಂದರು.

‘ಜೆಡಿಎಸ್ ಕೋಮುವಾದಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅವರ ಸರ್ಟಿಫಿಕೆಟ್ ನನಗೆ ಬೇಕಾಗಿಲ್ಲ. ಮೇಕೆದಾಟು ವಿಚಾರದಲ್ಲಿ ದೇವೇಗೌಡರನ್ನು ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್‌ನವರಿಗೆ ಇಲ್ಲ’ ಎಂದು ಹೇಳಿದರು.

ಜೆಡಿಎಸ್ ಮುಖಂಡ ಸಾ.ರಾ. ಮಹೇಶ್‌ ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT