ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಶ್ರೀನಿವಾಸ ಪ್ರಸಾದ್ ಬೆಂಬಲ ಕೋರಿದ ಮಹದೇವಪ್ಪ!

ಕಾಂಗ್ರೆಸ್‌ ಪಕ್ಷದ ನಾಯಕರಿಂದ ಭೇಟಿ, ಚರ್ಚೆ
Published 29 ಮಾರ್ಚ್ 2024, 5:30 IST
Last Updated 29 ಮಾರ್ಚ್ 2024, 5:30 IST
ಅಕ್ಷರ ಗಾತ್ರ

ಮೈಸೂರು: ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಕಾಂಗ್ರೆಸ್ ನಾಯಕರು ಇಲ್ಲಿನ ಜಯಲಕ್ಷ್ಮೀಪುರಂನ ನಿವಾಸದಲ್ಲಿ ಗುರುವಾರ ಭೇಟಿಯಾಗಿ ಬೆಂಬಲ ಕೋರಿದರು.

‘ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ ಮತ್ತು ಚಾಮರಾಜನಗರದಲ್ಲಿ ಪುತ್ರ ಸುನೀಲ್‌ ಬೋಸ್ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಅವರಿಗೆ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸಾಥ್ ನೀಡಿದರು. ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸಿರುವ ಭಾಗವಾಗಿ ಈ ಭೇಟಿ ನಡೆದಿದೆ’ ಎನ್ನಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವದ್ವಯರು ಭೇಟಿ ಕೊಟ್ಟರು. ಗೆಲುವಿಗಾಗಿ, ಮುನಿಸು ಮರೆತು ಮನೆಗೆ ಬಂದಿದ್ದರು. ಅವರೊಂದಿಗೆ ಕೆಲಕಾಲ ಗೋಪ್ಯ ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಕೂಡ ಬಂದಿದ್ದರು.

ಗುಂಡ್ಲುಪೇಟೆ ಶಾಸಕ ಎಚ್‌.ಎಂ. ಗಣೇಶ್‌ಪ್ರಸಾದ್, ಮೈಸೂರು–ಕೊಡಗು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ, ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ ಪಾಲ್ಗೊಂಡಿದ್ದರು.

ಬೆಳಿಗ್ಗೆ ಪ್ರಸಾದ್ ಅವರನ್ನು ಸುನೀಲ್ ಬೋಸ್ ಕೂಡ ಭೇಟಿಯಾಗಿ ಆಶೀರ್ವಾದ ಕೋರಿದ್ದರು.

ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡವರಲ್ಲ: ಪತ್ರಕರ್ತರೊಂದಿಗೆ ಮಾತನಾಡಿದ ಮಹದೇವಪ್ಪ, ‘ಶ್ರೀನಿವಾಸ ಪ್ರಸಾದ್ ಅವರನ್ನು ದೇಶದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ. 50 ವರ್ಷಗಳ ಸುದೀರ್ಘ ರಾಜಕಾರಣದ ಜೀವನಕ್ಕೆ ಈಚೆಗೆ ವಿದಾಯ ಹೇಳಿದ್ದಾರೆ. ಸಾರ್ವಜನಿಕ–ರಾಜಕೀಯ ಜೀವನದಲ್ಲಿ ಏಳು–ಬೀಳುಗಳನ್ನು ಕಂಡಿದ್ದಾರೆ. ಪಕ್ಷಾಂತರ ಮಾಡಿದರೂ ನಂಬಿದ ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡಿಲ್ಲ’ ಎಂದು ಶ್ಲಾಘಿಸಿದರು.

‘ಅವರು ರಾಜಕೀಯದಿಂದ ನಿವೃತ್ತಿ ಪಡೆದಿರುವುದು ಬೇಸರವಾಯಿತು. ಪ್ರಸ್ತುತ, ಸಾರ್ವಜನಿಕ ಸೇವೆಗಿಂತ ಬೇರೆ ಉದ್ದೇಶ ಇಟ್ಟುಕೊಂಡು ರಾಜಕಾರಣಕ್ಕೆ ಬರುತ್ತಿರುವವರೇ ಜಾಸ್ತಿಯಾಗಿದ್ದಾರೆ. ಗುಣಾತ್ಮಕ ನಾಯಕತ್ವ ಮರೆಯಾದರೆ ಪ್ರಜಾಪ್ರಭುತ್ವಕ್ಕೆ ನಷ್ಟವಾಗುತ್ತದೆ. ಅವರು ಇನ್ನಷ್ಟು ಕಾಲ ಸಕ್ರಿಯ ರಾಜಕಾರಣದಲ್ಲಿ ಇರಬೇಕಾಗಿತ್ತು’ ಎಂದರು.

‘ನಾವು ಹಿಂದೆ ಜೊತೆಯಲ್ಲೇ ಇದ್ದವರು. ಅವರು ನಮ್ಮನ್ನು ಸೋಲಿಸಿದ್ದರು; ನಾವು ಅವರನ್ನು ಸೋಲಿಸಿದ್ದೆವು. ಇದೆಲ್ಲವೂ ಪ್ರಜಾಪ್ರಭುತ್ವದ ಪ್ರಕ್ರಿಯೆಗಳು. ರಾಜಕೀಯದಲ್ಲಿ ಎದುರಾಳಿಗಳೇ ಹೊರತು ಶತ್ರುಗಳಲ್ಲ’ ಎಂದು ಹೇಳಿದರು.

‘ಅವರ ಆರೋಗ್ಯ ವಿಚಾರಿಸಲು ಮತ್ತು ಶುಭಾಶಯ ಕೋರಲು ಬಂದಿದ್ದೆವು. ರಾಜಕೀಯದ ಬಗ್ಗೆ ಚರ್ಚಿಸಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT