ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಮುಖ್ಯಮಂತ್ರಿ ಪುತ್ರನ ಸ್ಪರ್ಧೆ ಚರ್ಚೆ ಬಿರುಸು

ಕುತೂಹಲ ಮೂಡಿಸಿರುವ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ
Published 17 ಜನವರಿ 2024, 21:05 IST
Last Updated 17 ಜನವರಿ 2024, 21:05 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಹಾಗೂ ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸ್ಪರ್ಧಿಸುತ್ತಾರೆಯೇ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಬಿಜೆಪಿಯೊಂದಿಗೆ ಮೈತ್ರಿ ಏರ್ಪಡಿಸಿಕೊಂಡಿರುವ ಜೆಡಿಎಸ್‌ ಪಾತ್ರದ ಕುರಿತೂ ಚರ್ಚೆ ನಡೆದಿದೆ.

ಕಾಂಗ್ರೆಸ್‌ ಟಿಕೆಟ್‌ಗೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ‘ಕೈ’ ಟಿಕೆಟ್‌ ಬಯಸಿ 14 ಮುಖಂಡರು ಅರ್ಜಿ ಸಲ್ಲಿಸಿದ್ದಾರೆ. ಪಕ್ಷದ ಜಿಲ್ಲಾ ಸಮಿತಿ ಹೈಕಮಾಂಡ್‌ಗೆ ಸಲ್ಲಿಸಿರುವ ಆಕಾಂಕ್ಷಿಗಳ ಪಟ್ಟಿಯಲ್ಲಿ ಯತೀಂದ್ರರ ಹೆಸರಿಲ್ಲ. ‘ಯತೀಂದ್ರ ಸ್ಪರ್ಧಿಸುವುದಿಲ್ಲ’ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಕೂಡ ಹೇಳಿದ್ದಾರೆ. ಆದರೆ, ಸಂಸದ ಪ್ರತಾಪ ಸಿಂಹ ಸೇರಿದಂತೆ ಬಿಜೆಪಿ ಮುಖಂಡರು ಯತೀಂದ್ರ ಅವರ ಹೆಸರನ್ನು ಮುನ್ನಲೆಗೆ ತರುತ್ತಿದ್ದಾರೆ. ‘ತಮ್ಮ ಪುತ್ರನಿಗೆ ರಾಜಕೀಯ ಭವಿಷ್ಯ ಕಲ್ಪಿಸಲು ಮುಖ್ಯಮಂತ್ರಿ ನನ್ನ ವಿರುದ್ಧ ಹುನ್ನಾರ ನಡೆಸುತ್ತಿದ್ದಾರೆ’ ಎಂಬ ಆರೋಪವನ್ನೂ ಸಂಸದರು ಆಗಾಗ ಮಾಡುತ್ತಿದ್ದಾರೆ.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ನಕ್ಷೆ

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ನಕ್ಷೆ

‘ವಿಧಾನಸಭೆ ಚುನಾವಣೆಯಲ್ಲಿ ತಮಗಾಗಿ ವರುಣ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಪುತ್ರನಿಗೆ ‘ರಾಜಕೀಯ ಪುನರ್ವಸತಿ’ ಕಲ್ಪಿಸಲೆಂದೇ ಅವರನ್ನು ಕಣಕ್ಕಿಳಿಸುವ ಬಗ್ಗೆ ಸಿದ್ದರಾಮಯ್ಯ ಗಂಭೀರವಾಗಿ ಯೋಚಿಸಿದ್ದಾರೆ. ತವರು ಜಿಲ್ಲೆ ಮೈಸೂರನ್ನು ಒಳಗೊಂಡಿರುವ ಕ್ಷೇತ್ರವನ್ನು ಗೆಲ್ಲುವುದು ಪ್ರತಿಷ್ಠೆಯ ವಿಷಯವಾಗಿದ್ದು, ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ’ ಎನ್ನಲಾಗುತ್ತಿದೆ.

ಆದರೆ, ಪಕ್ಷದ ಪ್ರಮುಖ ಸ್ಥಾನದಲ್ಲಿರುವ ಯಾರೊಬ್ಬರೂ ಅಧಿಕೃತವಾಗಿ ಹೇಳಿಕೆ ನೀಡುತ್ತಿಲ್ಲ. ಈ ನಡುವೆ, ‘ಯತೀಂದ್ರ ಸ್ಪರ್ಧಿಸಿದರೆ ಬಿಜೆಪಿಗೆ ಪ್ರಬಲ ಪೈಪೋಟಿ ಕೊಡಬಹುದು’ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ. ಹೀಗಾಗಿಯೇ ಅವರ ಸ್ಪರ್ಧೆಯ ವಿಷಯವನ್ನು ಜೀವಂತವಾಗಿಡುವ ಪ್ರಯತ್ನ ನಡೆದಿದೆ.

ಆಕಾಂಕ್ಷಿಗಳು ಯಾರ‍್ಯಾರು?:

ಮೈಸೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ‘ಮುಡಾ’ ಮಾಜಿ ಅಧ್ಯಕ್ಷ ಸಿ. ಬಸವೇಗೌಡ, ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ವಕೀಲ ಚಂದ್ರಮೌಳಿ, ಮಾಜಿ ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್, ಮುಖಂಡರಾದ ಜೆ.ಜೆ. ಆನಂದ್, ವರುಣ ಮಹೇಶ್, ಡಾ.ಸುಶ್ರುತ್‌ ಗೌಡ, ಗುರುಮಲ್ಲೇಶ, ಎ.ಎಚ್. ವಿಶ್ವನಾಥ್ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಸೂರಜ್ ಹೆಗಡೆ ಆಕಾಂಕ್ಷಿಗಳು.

ನಗರಾಭಿವೃದ್ಧಿ ಸಚಿವ ಬಿ.ಸುರೇಶ್‌ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಮಾಲೋಚನಾ ಸಭೆಯಲ್ಲಿ ಪಟ್ಟಿ ಸಿದ್ಧಪಡಿಸಲಾಗಿದೆ. ‘ನಾನೂ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿ’ ಎಂದು ವಿಧಾನಪರಿಷತ್‌ ಬಿಜೆಪಿ ಸದಸ್ಯ ಎ.ಎಚ್. ವಿಶ್ವನಾಥ್ ಹೇಳುತ್ತಿರುವುದು ವಿಶೇಷ ಬೆಳವಣಿಗೆ.

ಸತತ 2 ಚುನಾವಣೆಗಳಲ್ಲಿ ಗೆದ್ದಿರುವ ಬಿಜೆಪಿಯ ಪ್ರತಾಪಸಿಂಹ 3ನೇ ಬಾರಿಗೆ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಆಕಾಂಕ್ಷಿಗಳ ಪಟ್ಟಿಯಲ್ಲಿ ಬೇರೆ ಹೆಸರುಗಳು ಕೇಳಿಬಂದಿಲ್ಲ. ಜೆಡಿಎಸ್‌ನ ‘ಪಟ್ಟು’ ಏನಾಗಿರಲಿದೆ ಎಂಬುದರ ಮೇಲೆ ಮೈತ್ರಿ ಅಭ್ಯರ್ಥಿ ಯಾರು ಎನ್ನುವುದು ಸ್ಪಷ್ಟವಾಗಲಿದೆ.

‘ಮೈತ್ರಿ’ ಕುತೂಹಲ...

ಈ ಕ್ಷೇತ್ರದಲ್ಲಿ ಜೆಡಿಎಸ್– ಬಿಜೆಪಿ ಮೈತ್ರಿ ಅಭ್ಯರ್ಥಿ ಯಾರಾಗಬಹುದೆಂಬುದೂ ಕುತೂಹಲ ಮೂಡಿಸಿದೆ. ಈ ನಡುವೆ ‘ಯತೀಂದ್ರ ಸ್ಪರ್ಧಿಸಿದರೆ ನನಗೆ ಅನುಕೂಲ’ ಎಂದು ಹಾಲಿ ಸಂಸದ ಬಿಜೆಪಿಯ ಪ್ರತಾಪಸಿಂಹ ಅವರ ಇತ್ತೀಚಿನ ಹೇಳಿಕೆ ಗಮನ ಸೆಳೆದಿದೆ. ಹಳೆಯ ಮೈಸೂರು ಪ್ರದೇಶದಲ್ಲಿ ಅಲುಗಾಡುತ್ತಿರುವ ಬೇರನ್ನು ಭದ್ರಪಡಿಸಿಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿರುವ ಜೆಡಿಎಸ್‌ ನಾಯಕರು ಕ್ಷೇತ್ರವನ್ನು ತಮಗೆ ಬಿಟ್ಟು ಕೊಡುವಂತೆ ಬಿಜೆಪಿ ವರಿಷ್ಠರಲ್ಲಿ ಬೇಡಿಕೆ ಇಟ್ಟಿದ್ದಾರೆ. ಮಾಜಿ ಸಚಿವ ಸಾ.ರಾ. ಮಹೇಶ್ ಅವರನ್ನು ಕಣಕ್ಕಿಳಿಸಲು ಬಯಸಿರುವ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಜಾತಿ ಸಮೀಕರಣವನ್ನು ಮುಂದಿಟ್ಟಿದ್ದಾರೆ ಎಂದು ಗೊತ್ತಾಗಿದೆ. ಇದು ಯಶಸ್ವಿಯಾದರೆ ಪ್ರತಾಪ ಸಿಂಹ ಅವರ ರಾಜಕೀಯ ಭವಿಷ್ಯವೇನು ಎಂಬ ಚರ್ಚೆಯೂ ನಡೆಯುತ್ತಿದೆ. ‘ಈ ಬೆಳವಣಿಗೆಗಳಿಂದಾಗಿಯೇ ಅವರು ಕುಮಾರಸ್ವಾಮಿಯವರನ್ನು ಭೇಟಿಯಾಗಿ ಸಹಕಾರ ಕೋರಿದ್ದಾರೆ’ ಎನ್ನಲಾಗಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ

ವಿಧಾನಸಭೆ ಚುನಾವಣೆ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ವೃದ್ಧಿಸಿದೆ. ಲೋಕಸಭಾ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಚಾಮರಾಜ ಪಿರಿಯಾಪಟ್ಟಣ ನರಸಿಂಹರಾಜ ಮಡಿಕೇರಿ ವಿರಾಜಪೇಟೆಯಲ್ಲಿ ಕಾಂಗ್ರೆಸ್‌ ಗೆದ್ದಿದೆ. ಚಾಮುಂಡೇಶ್ವರಿ ಹಾಗೂ ಹುಣಸೂರು ಜೆಡಿಎಸ್ ಪಾಲಾಗಿದ್ದರೆ ಬಿಜೆಪಿ ಕೃಷ್ಣರಾಜದಲ್ಲಷ್ಟೇ ಗೆದ್ದಿದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT