ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Elections 2024 | ಪುತ್ರನಿಗೆ ಟಿಕೆಟ್‌: ಮಹದೇವಪ್ಪ ಪ್ರಯತ್ನ

ಚಾಮರಾಜನಗರ ಪ.ಜಾತಿ ಮೀಸಲು ಕ್ಷೇತ್ರದಿಂದ ಸುನೀಲ್‌ ಬೋಸ್‌ ಕಣಕ್ಕಿಳಿಸುವ ಬಯಕೆ
Published 20 ಜನವರಿ 2024, 2:36 IST
Last Updated 20 ಜನವರಿ 2024, 2:36 IST
ಅಕ್ಷರ ಗಾತ್ರ

ಮೈಸೂರು: ಸಮಾಜಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು ತಮ್ಮ ಮಗ ಸುನೀಲ್‌ ಬೋಸ್ ಅವರನ್ನು ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್‌ ಟಿಕೆಟ್‌ಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದರಿಂದ ಅನುಕೂಲವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅವರು ಪ್ರತಿನಿಧಿಸುವ ತಿ.ನರಸೀಪುರ ವಿಧಾನಸಭಾ ಕ್ಷೇತ್ರವು ಚಾಮರಾಜನಗರ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಅವರ ಮಗ ಸದ್ಯ ಆ ಕ್ಷೇತ್ರದ ಕೆಡಿಪಿ ಸದಸ್ಯರಾಗಿದ್ದು, ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕೈ ತಪ್ಪಿದ ಅವಕಾಶ:

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಗನಿಗೆ ತಿ.ನರಸೀಪುರದಿಂದ ಟಿಕೆಟ್‌ ಕೊಡಿಸಿ, ತಾವು ನಂಜನಗೂಡಿನಿಂದ ಸ್ಪರ್ಧಿಸಬೇಕೆಂದು ಮಹದೇವಪ್ಪ ಬಯಸಿದ್ದರು. ಅದಕ್ಕಾಗಿ ಭೂಮಿಕೆಯನ್ನೂ ಸಿದ್ಧಪಡಿಸಿದ್ದರು. ನಂಜನಗೂಡಿನಲ್ಲಿ ವ್ಯಾಪಕವಾಗಿ ಸಂಚರಿಸಿ, ಹಲವು ಬಾರಿ ಪಕ್ಷದ ಮುಖಂಡರು–ಕಾರ್ಯಕರ್ತರ ಸಭೆ ನಡೆಸಿದ್ದರು.

ಆದರೆ, ಮತ್ತೊಬ್ಬ ಆಕಾಂಕ್ಷಿಯಾಗಿದ್ದ, ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ಅಕಾಲಿಕ ನಿಧನದಿಂದಾಗಿ ನಂಜನಗೂಡು ಕ್ಷೇತ್ರವನ್ನು ಅವರ ಪುತ್ರ ದರ್ಶನ್‌ ಅವರಿಗೆ ಬಿಟ್ಟು ಕೊಟ್ಟು ತಿ.ನರಸೀಪುರದಿಂದ ತಾವೇ ಸ್ಪರ್ಧಿಸಿದ್ದರು. ಮಗನಿಗೆ ಟಿಕೆಟ್‌ ಕೊಡಿಸುವ ಬಯಕೆ ಈಡೇರಿರಲಿಲ್ಲ.

‘ಇದೀಗ, ಲೋಕಸಭೆಗೆ ಕಣಕ್ಕಿಳಿಸಲು ತಂತ್ರ ರೂಪಿಸಿದ್ದು, ‌ಅದರ ಭಾಗವಾಗಿಯೇ, ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೈಸೂರಿನ ಮನೆಗೆ ಕರೆಸಿಕೊಂಡು ಮಗನ ರಾಜಕೀಯ ಜೀವನದ ಬಗ್ಗೆ ಚರ್ಚೆ ನಡೆಸಿದ್ದಾರೆ’ ಎಂದು ತಿಳಿದುಬಂದಿದೆ.

ಪ್ರತಿಕ್ರಿಯೆಗೆ ಸುನೀಲ್‌ ಬೋಸ್ ಕರೆ ಸ್ವೀಕರಿಸಲಿಲ್ಲ.

ಸುನೀಲ್ ಬೋಸ್
ಸುನೀಲ್ ಬೋಸ್

ವಿಧಾನಸಭೆ ಪ್ರವೇಶಕ್ಕೆ ಸತತ ಪ್ರಯತ್ನ ಸದ್ಯ ತಿ.ನರಸೀಪುರ ಕ್ಷೇತ್ರದ ಕೆಡಿಪಿ ಸದಸ್ಯ ಚಾಮರಾಜನಗರ ಕ್ಷೇತ್ರದಲ್ಲಿ ಓಡಾಟ

‘ಮಗ ಆಕಾಂಕ್ಷಿ: ಹೈಕಮಾಂಡ್‌ ತೀರ್ಮಾನವೇ ಅಂತಿಮ

‘ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ಸಿಗಬೇಕು. ಮಗ ಸುನೀಲ್‌ ಕೂಡ ಕೆಲಸ ಮಾಡಿದ್ದಾನೆ ಆಕಾಂಕ್ಷಿಯೂ ಆಗಿದ್ದಾನೆ. ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿದ್ದು ಹಲವು ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ಮಹದೇವಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ನಂಜನಗೂಡು ಉಪ ಚುನಾವಣೆ ಸೇರಿದಂತೆ ಮೂರು ವಿಧಾನಸಭೆ ಚುನಾವಣೆಯಲ್ಲೂ ಆತ ಟಿಕೆಟ್ ಬಯಸಿದ್ದ. ಆದರೆ ಸಿಕ್ಕಿಲ್ಲ. ಹಾಗೆಂದು ಸಂಘಟನೆ ಬಿಟ್ಟಿಲ್ಲ. ಮುನಿಸಿಕೊಳ್ಳದೆ ಪಕ್ಷದ ಕೆಲಸ ಮಾಡುತ್ತಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT