ಶುಕ್ರವಾರ, ಫೆಬ್ರವರಿ 3, 2023
18 °C

ಚರ್ಮ ಗಂಟು ರೋಗ: ಮೈಸೂರು ಜಿಲ್ಲೆಯಲ್ಲಿ 86 ರಾಸು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಜಿಲ್ಲೆಯಲ್ಲೂ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು, 86 ರಾಸುಗಳು ಮೃತಪಟ್ಟಿವೆ’ ಎಂದು ‍ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಕೆ.ಷಡಕ್ಷರಮೂರ್ತಿ ತಿಳಿಸಿದರು.

ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಸರಗೂರು ತಾಲ್ಲೂಕೊಂದರಲ್ಲೇ 39 ರಾಸುಗಳು ಸಾವಿಗೀಡಾಗಿವೆ. ಕಂದೇಗಾಲ ಹೋಬಳಿಯಲ್ಲಿ ಕೆಲವರು ಗುಜರಾತ್‌ನಿಂದ ‘ಗೀರ್’ ತಳಿಯ ಹಸುಗಳನ್ನು ತಂದಿದ್ದರು. ರೋಗದಿಂದ ಅವು ಸತ್ತು ಹೋದ ನಂತರ ಇರರ ಕಡೆಗೂ ಹರಡಿದೆ’ ಎಂದು ಹೇಳಿದರು.

‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದಿದ್ದರಿಂದ ಮತ್ತು ಲಸಿಕೆ ಲಭ್ಯವಿರಲಿಲ್ಲವಾದ್ದರಿಂದ ಆರಂಭದಲ್ಲಿ ರೋಗ ನಿಯಂತ್ರಣ ಸಾಧ್ಯವಾಗಿರಲಿಲ್ಲ. ಈಗ ಲಸಿಕೆ ನೀಡುವ ಕಾರ್ಯಕ್ರಮ ಪ್ರಗತಿಯಲ್ಲಿದೆ. 4 ತಿಂಗಳು ಮೇಲ್ಪಟ್ಟ ರಾಸುಗಳಿಗೆ ಲಸಿಕೆ ಕೊಡಲಾಗಿದೆ. ಅದಕ್ಕಿಂತ ಚಿಕ್ಕ ವಯಸ್ಸಿನವಕ್ಕೆ ಲಸಿಕೆ ಕೊಡಲಾಗುತ್ತಿರಲಿಲ್ಲ. ಅವುಗಳಿಗೂ ಇತ್ತೀಚೆಗೆ ನೀಡಲಾರಂಭಿಸಿದ್ದೇವೆ’ ಎಂದರು.

‘ಒಟ್ಟು 5 ಲಕ್ಷ ರಾಸುಗಳಲ್ಲಿ ಈವರೆಗೆ 2.87 ಲಕ್ಷಕ್ಕೆ ಲಸಿಕೆ ಹಾಕಲಾಗಿದೆ. ಜಿಲ್ಲೆಯ ಗಡಿ ಪ್ರದೇಶದಲ್ಲಿನ ರಾಸುಗಳಿಗೆ ಆದ್ಯತೆ ಕೊಡಲಾಗಿದೆ. ಮತ್ತೆರಡು ಲಕ್ಷ ಡೋಸ್ ಲಸಿಕೆ ಬಂದಿದ್ದು, ಅದನ್ನು ಕೊಡಲಾಗುತ್ತಿದೆ. ಉಳಿದವುಗಳಿಗೆ ಇನ್ನೊಂದು ವಾರದೊಳಗೆ ನೀಡಲಾಗುವುದು. ಜಿಲ್ಲೆಯಲ್ಲಿ 390 ಮಂದಿ ಲಸಿಕೆದಾರರಿದ್ದಾರೆ’ ಎಂದು ಮಾಹಿತಿ ನೀಡಿದರು.

‘2,209 ರಾಸುಗಳಿಗೆ ರೋಗ ಬಂದಿತ್ತು. ಅವುಗಳಲ್ಲಿ 830ಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. 60ರಿಂದ 70 ರಾಸುಗಳು ಗಂಭೀರ ಸ್ಥಿತಿಯಲ್ಲಿವೆ’ ಎಂದು ತಿಳಿಸಿದರು.

‘ರಾಸುಗಳು ಸಾವಿಗೀಡಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಲಸಿಕೆ ಕಾರ್ಯಕ್ರಮವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ರಾಸುಗಳು ರೋಗದಿಂದ ಸಾವಿಗೀಡಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಬೇಕಾದ ಸಹಕಾರವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದಲೂ ನೀಡಬೇಕು. ರಾಸುಗಳು ಮೃತಪಟ್ಟರೆ ಹೈನುಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ. ಅದಕ್ಕೆ ಅವಕಾಶ ಕೊಡಬಾರದು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್‌ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು