ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ಮದುವೆ ಮಾಡಲು ಸಿದ್ದರಾಮಯ್ಯ, ಎಸ್.ಟಿ.ಸೋಮಶೇಖರ್ ಕರೆ

ಐಷಾರಾಮಿ ವಿವಾಹ ಕೈಬಿಡಲು ಸಲಹೆ
Last Updated 10 ಫೆಬ್ರುವರಿ 2021, 4:55 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಮಂಗಳವಾರ ನಡೆದ ಮಾಸಿಕ ಸಾಮೂಹಿಕ ವಿವಾಹ ಮಹೋತ್ಸವವು ಐಷಾರಾಮಿ ವಿವಾಹದ ಬದಲಿಗೆ ಸರಳ ವಿವಾಹ ಆಚರಣೆಯ ಸಂದೇಶವನ್ನು ರವಾನಿಸಿತು. ಇದರಲ್ಲಿ ಭಾಗಿಯಾದ ಎಲ್ಲ ಸ್ವಾಮೀಜಿಗಳು, ಗಣ್ಯರು ಸರಳ ವಿವಾಹದ ಮಹತ್ವ ಕುರಿತು ಮಾತನಾಡಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಐಷಾರಾಮಿ ವಿವಾಹದಲ್ಲಿ ಉಣಬಡಿಸುವ ಊಟದಲ್ಲಿ ಶೇ 25ರಷ್ಟನ್ನೂ ಜನರು ತಿನ್ನುವುದಿಲ್ಲ. ಇದೆಲ್ಲವೂ ‘ನ್ಯಾಷನಲ್ ವೇಸ್ಟ್’ ಎಂದು ಕಿಡಿಕಾರಿದರು.

ವೈಭವೋಪೇತ ಮದುವೆಗಳಿಗೆ ಮಾಡುವ ಖರ್ಚುಗಳು ಕುಟುಂಬಕ್ಕೆ ಹೊರೆಯಾಗುತ್ತದೆ. ಯಾರೋ ಸಿರಿವಂತರು ಅಂತಹ ಮದುವೆ ಮಾಡಿದರು ಎಂಬ ಕಾರಣಕ್ಕೆ ಮಧ್ಯಮವರ್ಗದವರು, ಬಡವರು ಸಾಲ ಮಾಡಿ, ಆಸ್ತಿ ಮಾರಾಟ ಮಾಡಿ ವಿವಾಹ ಮಾಡುವುದು ಸರಿಯಲ್ಲ ಎಂದರು.

ಕೇವಲ ಸರಳ ವಿವಾಹವಾಗುವುದು ಮಾತ್ರವಲ್ಲ ಅಂತರ್ಜಾತಿ ವಿವಾಹವಾಗುವುದೂ ಇಂದಿನ ಪರಿಸ್ಥಿತಿಗೆ ಅತಿ ಮುಖ್ಯ. ಬಸವಣ್ಣನವರು ಅಂದೇ ಇಂತಹದ್ದೊಂದು ವಿವಾಹ ನೆರವೇರಿಸುವ ಮೂಲಕ ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ. ಅದರಂತೆ ಅಂತರ್ಜಾತಿ ವಿವಾಹಗಳಾದರೆ ಸಮಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸುತ್ತೂರಿನ ಈ ವೇದಿಕೆಯಲ್ಲಿ ಸಮಾನತೆಯನ್ನು ಸಾಧಿಸಲಾಗಿದೆ. ದಲಿತರು, ಕುರುಬರು, ಲಿಂಗಾಯತರು, ನಾಯಕರು ಎಲ್ಲರೂ ಒಟ್ಟಿಗೆ ಒಂದೇ ಸಮನಾಗಿ ಕುಳಿತಿದ್ದಾರೆ. ಇಂತಹ ಸಮಾನತೆ ಇರಬೇಕು ಎಂದರು.

‌ದಾಂಪತ್ಯ ಶಿಥಿಲವಾಗಬಾರದು– ಸಿದ್ಧಲಿಂಗ ಸ್ವಾಮೀಜಿ

ಇತ್ತೀಚಿನ ದಿನಗಳಲ್ಲಿ ಬಹುತೇಕರ ದಾಂಪತ್ಯ ಜೀವನ ಶಿಥಿಲವಾಗುತ್ತಿದೆ. ಇದನ್ನು ತಡೆಗಟ್ಟಲು ಸತಿ, ಪತಿ ಇಬ್ಬರೂ ಸಮಾನರು ಎಂಬ ತತ್ವದಡಿ ಜೀವನ ಸಾಗಿಸಬೇಕು ಎಂದು ತುಮಕೂರಿನ ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ ಕಿವಿಮಾತು ಹೇಳಿದರು.‌

ಸತಿ ಮತ್ತು ಪತಿ ಇಬ್ಬರಲ್ಲೂ ನಾನು ಹೆಚ್ಚು ಎಂಬ ಅಹಮ್ಮಿಕೆ ಬರಬಾರದು. ನನ್ನಂತೆ ಅವರು ಎಂದು ತಿಳಿಯಬೇಕು. ಪ್ರೀತಿ, ವಿಶ್ವಾಸಗಳಿರಬೇಕು. ಆಗ ದಾಂಪತ್ಯ ಗಟ್ಟಿಯಾಗುತ್ತದೆ ಎಂದರು. ಇದಕ್ಕೆ ಪೂರಕವಾಗಿ ಅವರು ಜೇಡರ ದಾಸಿಮಯ್ಯ ಹಾಗೂ ಅಲ್ಲಮಪ್ರಭು ಅವರ ವಚನಗಳನ್ನು ಉಲ್ಲೇಖಿಸಿದರು.

ಎಂ.ಎ.ನೀಲಾಂಬಿಕಾ ಅವರ ‘ವಚನಕ್ಕೊಂದು ಕಥೆ’ ಕೃತಿಯನ್ನು ಸಚಿವ ಎಸ್.ಟಿ.ಸೋಮಶೇಖರ್ ಬಿಡುಗಡೆ ಮಾಡಿದರು. ಜೆಎಸ್‌ಎಸ್ ವಸತಿ ಶಾಲಾ ವಿದ್ಯಾರ್ಥಿಗಳು ವಚನಗಾಯನವನ್ನು ಪ್ರಸ್ತುತಪಡಿಸಿದರು.

ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ವಾಟಾಳು ಮಠದ ಸಿದ್ಧಲಿಂಗಸ್ವಾಮೀಜಿ, ಸಮಾಜ ಸೇವಕಿ ಎಸ್.ಆರ್.ಗಾಯತ್ರಿ, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT