ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತಸಕರ ಚಟುವಟಿಕೆಯಿಂದ ಮಾನಸಿಕ ಆರೋಗ್ಯ: ಡಾ. ಉಪೇಂದ್ರ ಶೆಣೈ

ಮಣಿಪಾಲ್ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ ಸ್ಪೆಲ್ ಬೀ ಸ್ಪರ್ಧೆ; ಡಿಮೆನ್ಶಿಯಾ ಜಾಗೃತಿ
Published 26 ಮೇ 2024, 16:10 IST
Last Updated 26 ಮೇ 2024, 16:10 IST
ಅಕ್ಷರ ಗಾತ್ರ

ಮೈಸೂರು: ‘ವೈದ್ಯಕೀಯ ಜ್ಞಾನ ಮತ್ತು ಸಂತಸಕರ ಚಟುವಟಿಕೆಗಳ ಮಿಶ್ರಣದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆ ಸಾಧ್ಯ’ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಉಪೇಂದ್ರ ಶೆಣೈ ತಿಳಿಸಿದರು.

ನಗರದ ಮಣಿಪಾಲ್ ಆಸ್ಪತ್ರೆಯು ಹಿರಿಯ ನಾಗರಿಕರಲ್ಲಿ ಮಿದುಳಿನ ಆರೋಗ್ಯ ಉತ್ತೇಜಿಸಲು ಭಾನುವಾರ ಆಯೋಜಿಸಿದ್ದ ಸ್ಪೆಲ್ ಬೀ ಸ್ಪರ್ಧೆ ವೇಳೆ ಮಾತನಾಡಿದರು.

‘ಉತ್ತಮ ವಾತಾವರಣ ನಿರ್ಮಾಣ ಮಿದುಳಿನ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಆಸ್ಪತ್ರೆ ಸಮಗ್ರ ಆರೋಗ್ಯ ರಕ್ಷಣೆ ಸೇವೆ ನೀಡುವಲ್ಲಿ ಬದ್ಧವಾಗಿದೆ’ ಎಂದರು.

ನ್ಯೂರಾಲಜಿ ತಜ್ಞ ಡಾ. ಕೆ.ಎಸ್.ವೇಣುಗೋಪಾಲ ಕೃಷ್ಣ ಅವರು ‘ವಯೋವೃದ್ಧರಲ್ಲಿ ಡಿಮೆನ್ಶಿಯಾ’ ವಿಷಯ ಕುರಿತು ಮಾತನಾಡಿ, ‘ಡಿಮೆನ್ಶಿಯಾ ಸ್ಮರಣೆ, ಆಲೋಚನೆ ಮತ್ತು ಸಾಮಾಜಿಕ ಕೌಶಲಗಳ ಮೇಲೆ ಪರಿಣಾಮ ಬೀರುವ ರೋಗಲಕ್ಷಣಗಳನ್ನು ವಿವರಿಸಲು ಬಳಸುವ ಪದ. ಜೀವಿತಾವಧಿ ಹೆಚ್ಚಾದಂತೆ, ಇದು ಸಾಮಾನ್ಯವಾಗುತ್ತಿದ್ದು, ದೇಶದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಶೇ 8ರಷ್ಟು ಜನರು ಈ ಸಮಸ್ಯೆ ಹೊಂದಿದ್ದಾರೆ’ ಎಂದು ಹೇಳಿದರು.

‘ಅನೇಕ ರೋಗಗಳು ಬುದ್ಧಿಮಾಂದ್ಯತೆಯನ್ನು ಉಂಟುಮಾಡಬಹುದು.  ಇದರಲ್ಲಿ ಆಲ್‌ಝೈಮರ್‌ ಅತ್ಯಂತ ಸಾಮಾನ್ಯ ಕಾರಣ. ಜ್ಞಾಪಕ ಶಕ್ತಿಯ ಸಮಸ್ಯೆ ಅಥವಾ ಇತರ ಲಕ್ಷಣಗಳನ್ನು ಹೊಂದಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಒಳಿತು. ಡಿಮೆನ್ಶಿಯಾ ರೋಗಲಕ್ಷಣಗಳನ್ನು ಉಂಟುಮಾಡುವ ಕೆಲ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಬಹುದು ಮತ್ತು ಗುಣಪಡಿಸಬಹುದು’ ಎಂದು ಭರವಸೆ ನೀಡಿದರು.

ನ್ಯೂರೊಸರ್ಜರಿ ತಜ್ಞ ಡಾ. ಎ.ಆರ್.ಮಕ್ಸೂದ್ ಅಹ್ಮದ್, ವಯಸ್ಸಾದವರಲ್ಲಿ ಸಾಮಾನ್ಯವಾಗಿ ಕಾಡುವ ಪಾರ್ಶ್ವವಾಯು ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಕೃಷ್ಣ ಕೆ. ಮನವಳ್ಳಿ ಅವರು ಸ್ಪರ್ಧೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಸುಮಾರು 150 ಹಿರಿಯ ನಾಗರಿಕರು ಭಾಗವಹಿಸಿ ಮಾನಸಿಕ ಉತ್ತೇಜನದ ಅನುಭವ ಪಡೆದರು. ವಿಜೇತರಾದವರಿಗೆ ಟ್ರೋಫಿ, ಪ್ರಮಾಣಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಆಸ್ಪತ್ರೆ ನಿರ್ದೇಶಕ ಪ್ರಮೋದ್ ಕುಂದರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT