ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾಹ | ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಕೃಷ್ಣ ಬೈರೇಗೌಡ

ನಂಜನಗೂಡು: ತಗ್ಗು ಪ್ರದೇಶಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ
Published : 2 ಆಗಸ್ಟ್ 2024, 13:57 IST
Last Updated : 2 ಆಗಸ್ಟ್ 2024, 13:57 IST
ಫಾಲೋ ಮಾಡಿ
Comments

ನಂಜನಗೂಡು: ‘ಕಪಿಲಾ ನದಿ ಪ್ರವಾಹದಿಂದ ಮಲ್ಲನಮೂಲೆ ಮಠದ ಬಳಿ ನಂಜನಗೂಡು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ಹೆದ್ದಾರಿ ಎತ್ತರಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ತಾಲ್ಲೂಕಿನ ಕಪಿಲಾ ನದಿ ಪಾತ್ರದಲ್ಲಿ ಪ್ರವಾಹದಿಂದ ನೀರು ತುಂಬಿಕೊಳ್ಳುವ ತಗ್ಗು ಪ್ರದೇಶಗಳನ್ನು ಶುಕ್ರವಾರ ಪರಿಶೀಲಿಸಿ ಅವರು ಮಾತನಾಡಿದರು.

‘ಮಲ್ಲನಮೂಲೆ ಮಠದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಳ್ಳುವುದರಿಂದ ಕೇರಳ, ತಮಿಳುನಾಡು ಹಾಗೂ ಚಾಮರಾನಗರ, ನಂಜನಗೂಡಿಗೆ ರಸ್ತೆ ಸಂಪರ್ಕ ಕಡಿತಗೊಳ್ಳುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಸ್ಥಳ ಪರಿಶೀಲಿಸಿದ್ದೇನೆ. ಹೆದ್ದಾರಿಯಲ್ಲಿ ನೀರು ನಿಲ್ಲುವುದನ್ನು ತಪ್ಪಿಸಲು ರಸ್ತೆ ಎತ್ತರಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡುತ್ತೇನೆ. ಕಪಿಲಾ ನದಿ ನೀರು ಚರಂಡಿ ಮೂಲಕ ತಗ್ಗು ಪ್ರದೇಶಗಳಿಗೆ ವಾಪಸ್‌ ಹರಿಯುವುದನ್ನು ತಪ್ಪಿಸಲು ಸಹ ಗೇಟ್‍ವಾಲ್ ನಿರ್ಮಿಸಿ ಸಮಸ್ಯೆ ಪರಿಹರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದೇನೆ. ನದಿ ಪ್ರವಾಹದಿಂದ ಉಂಟಾಗುವ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಕ್ರಮ ವಹಿಸುತ್ತೇವೆ’ ಎಂದು ಹೇಳಿದರು.

ಈ ವೇಳೆ ಸಚಿವರು ಮುಡಿಕಟ್ಟೆ ಸಮೀಪದಲ್ಲಿ ನದಿ ನೀರು ಚರಂಡಿ ಮೂಲಕ ನೀರು ವಾಪಸ್ಸಾಗುವುದನ್ನು ಪರಿಶೀಲಿಸಿದರು. ತೋಪಿನ ಬೀದಿಯಲ್ಲಿ ನೀರು ತುಂಬಿಕೊಂಡು ಉಂಟಾಗುವ ಸಮಸ್ಯೆ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸೀತಾರಾಮ ಕಲ್ಯಾಣ ಮಂಟಪದಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಆಶ್ರಯ ಪಡೆದಿರುವ ನಿವಾಸಿಗಳ ಸಮಸ್ಯೆ ಆಲಿಸಿ, ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ದರ್ಶನ್‍ ಧ್ರುವನಾರಾಯಣ ಮಾತನಾಡಿ, ‘ಪ್ರವಾಹ ಸಂಧರ್ಭದಲ್ಲಿ ಆಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ನಗರಸಭೆ ಆಯುಕ್ತ ನಂಜುಂಡಸ್ವಾಮಿ, ಎಇಇ ಮಹೇಶ್, ಶಿರಸ್ತೇದಾರ್ ಹರೀಶ್, ಸರ್ವೇಶ್, ಗ್ರಾಮ ಲೆಕ್ಕಾಧಿಕಾರಿ ವರುಣ್, ಎಇ ಕುಮಾರ್, ಮುಖಂಡರಾದ ಕಳಲೆ ಕೇಶವಮೂರ್ತಿ, ಎಸ್.ಸಿ.ಬಸವರಾಜು, ಸಿ.ಎಂ.ಶಂಕರ್‌, ಕೆ.ಮಾರುತಿ, ಅಕ್ಬರ್ ಅಲಿಂ, ಎನ್.ಎಂ.ಮಂಜುನಾಥ್, ವಾಲೆ ನಾಗರಾಜು, ನಗರಸಭಾ ಸದಸ್ಯರಾದ ಎಸ್.ಪಿ.ಮಹೇಶ್, ಗಂಗಾಧರ್, ಗಾಯತ್ರಿ, ಯೋಗೀಶ್, ಸಿದ್ದಿಖ್ ಉಪಸ್ಥಿತರಿದ್ದರು.

ನಂಜನಗೂಡಿನಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿ ಸಮಸ್ಯೆ ಆಲಿಸಿದರು
ನಂಜನಗೂಡಿನಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿ ಸಮಸ್ಯೆ ಆಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT