ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ನಿರ್ಮಾಣ: ಸಹಾಯಧನ ಹೆಚ್ಚಳಕ್ಕೆ ಪ್ರಸ್ತಾವ: ವಿ.ಸೋಮಣ್ಣ

Last Updated 30 ಜನವರಿ 2023, 15:53 IST
ಅಕ್ಷರ ಗಾತ್ರ

ಮೈಸೂರು: ‘ಮನೆ ನಿರ್ಮಾಣ ವೆಚ್ಚ ಗಣನೀಯವಾಗಿ ಏರಿಕೆಯಾಗಿದ್ದು, ಪ್ರಸ್ತುತ ನೀಡಲಾಗುತ್ತಿರುವ ಸಹಾಯಧನ ಹೆಚ್ಚಿಸುವ ಪ್ರಸ್ತಾವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಲಾಗಿದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಖಾಸಗಿ ಕಾರ್ಯಕ್ರಮಕ್ಕೆಂದು ನಗರಕ್ಕೆ ಸೋಮವಾರ ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

‘ಬಡವರು, ಜನಸಾಮಾನ್ಯರು ₹1.20 ಲಕ್ಷದಲ್ಲಿ ಮನೆ ನಿರ್ಮಿಸಲು ಆಗುವುದಿಲ್ಲ ಎಂದು ಮನವಿಗಳು ಬಂದಿವೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದರು.

‘ಮನೆ ಹೊಂದುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಆದ್ದರಿಂದ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಬಡವರು ವಾಸಿಸುತ್ತಿರುವಷ್ಟು ಜಾಗವನ್ನು ಅವರ ಹೆಸರಿಗೆ ಕ್ರಯ ಮಾಡಿ ಹಕ್ಕುಪತ್ರ ನೀಡಲಾಗುತ್ತಿದೆ. ಇದಕ್ಕಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ₹ 1ಸಾವಿರ ಹಾಗೂ ಇತರರಿಗೆ ₹2ಸಾವಿರ ಪಡೆದು ಹಕ್ಕುಪತ್ರ ನೀಡಲಾಗುತ್ತದೆ. ರಾಜ್ಯಾದ್ಯಂತ ಈಗಾಗಲೇ 5 ಲಕ್ಷ ಮನೆಗಳನ್ನು ನೀಡಲಾಗಿದ್ದು, 3 ಲಕ್ಷ ಮನೆಗಳು ನಿರ್ಮಾಣದ ವಿವಿಧ ಹಂತದಲ್ಲಿದೆ’ ಎಂದು ತಿಳಿಸಿದರು.

ಶಾಸಕ ರಮೇಶ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕುರಿತು ಆಡಿಯೊ ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಸಿಡಿ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಎಲ್ ಬೋರ್ಡ್. ಬಡವರಿಗೆ ಸಹಾಯ ಮಾಡುವ ಕಡೆಗಷ್ಟೆ ನನ್ನ ಗಮನ ಇರುತ್ತದೆ’ ಎಂದರು.

ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಅಭಿವೃದ್ಧಿಗೆ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಗುಡಿ ಗೋಪುರ ಅಭಿವೃದ್ಧಿ ನಮ್ಮ ಯೋಜನೆಯಾಗಿದೆ. ಆದರೆ, ಕಾನೂನಿನ ಬುದ್ಧಿವಂತಿಕೆಯನ್ನೂ ಬಳಸಬೇಕಾಗುತ್ತದೆ. ಆ ಬೆಟ್ಟದಲ್ಲಿ ರಸ್ತೆ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ಬದ್ಧವಾಗಿದ್ದೇವೆ. ಬಿಳಿಗಿರಿರಂಗನ ಬೆಟ್ಟದಲ್ಲಿ ಎಷ್ಟು ವರ್ಷಗಳಿಂದ ರಥೋತ್ಸವ ನಿಂತಿತ್ತು? ನಾವು ಬಂದು ನಂತರ ಮಾಡಿಲ್ಲವೇ? ಅದೇ ರೀತಿ ಹಿಮವದ್ ಗೋಪಾಲಸ್ವಾಮಿ ಬೆಟ್ಟವನ್ನು ಅಭಿವೃದ್ಧಿಪಡಿಸಲಾಗುತ್ತದೆ’ ಎಂದರು.

ಹನೂರು ಕ್ಷೇತ್ರದಿಂದ ನಿಮ್ಮ ಪುತ್ರ ಸ್ಪರ್ಧಿಸುವರೇ ಎಂಬ ಪ್ರಶ್ನೆಗೆ, ‘ಯಾರು ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ’ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ನಗರ ಘಟಕದ ವಕ್ತಾರ ಎಂ.ವಿ.ಮೋಹನ್, ಮುಖಂಡರಾದ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಕೇಬಲ್ ಮಹೇಶ್, ಮಂಗಲ ಶಿವಕುಮಾರ್, ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT