ಸರಗೂರು: ಸಹಕಾರ ಸಂಘಗಳಿಗೆ ಇಲಾಖೆಯಿಂದ ಹೆಚ್ಚಿನ ಅನುದಾನ ಸಿಗುವಂತೆ ಮಾಡಿ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು.
ಪಟ್ಟಣದಲ್ಲಿ ಸೋಮವಾರ ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಚಿವ ರಾಜಣ್ಣ ಅವರನ್ನು ಕ್ಷೇತ್ರಕ್ಕೆ ಕರೆತಂದು ಸಹಕಾರ ಇಲಾಖೆ ಅಭಿವೃದ್ಧಿಗೆ ಅನುದಾನ ಜಾರಿ ಮಾಡಿಸಿಕೊಡಲಾಗುವುದು.
‘ಸಹಕಾರ ಸಂಘಗಳಿಲ್ಲದಿದ್ದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರೈತರು ಸಾಲ ಪಡೆಯಲು ತುಂಬಾ ಕಷ್ ಆಗುತ್ತಿತ್ತು. ಸರ್ಕಾರದ ಸೌಲಭ್ಯಗಳೂ ಸಮರ್ಪಕವಾಗಿ ಸಿಗುತ್ತಿರಲಿಲ್ಲ. ಸಹಕಾರ ಸಂಘಗಳಿಂದ ರೈತರಿಗೆ ಅನುಕೂಲವಾಗಿದ್ದು,ಸಾಲ ಪಡೆದ ರೈತರು ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದರು. ‘224 ಶಾಸಕರ ಪೈಕಿ ಕೇವಲ 24 ಮಂದಿ ಮಾತ್ರ ಸಹಕಾರ ಕ್ಷೇತ್ರದಲ್ಲಿ ಇದ್ದಾರೆ. ಕ್ಷೇತ್ರದ 39 ಪಂಚಾಯಿತಿಗಳಲ್ಲೂ ಸಹಕಾರ ಸಂಘ ಅಸ್ಥಿತ್ವಕ್ಕೆ ಬರಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಎಲ್ಲರನ್ನೂ ಸಹಕಾರ ಕ್ಷೇತ್ರಕ್ಕೆ ಕರೆತಂದು ಸಹಕಾರ ಕ್ಷೇತ್ರವನ್ನು ಬಲಿಷ್ಠಗೊಳಿಸಬೇಕು. ಯಶಸ್ವಿನಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಮೈಮುಲ್ ನಿರ್ದೇಶಕ ಕೆ.ಈರೇಗೌಡ ಮಾತನಾಡಿ, ‘ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸಿದರೆ ಅಳಿವು ಖಚಿತ. ಹ್ಯಾಂಡ್‌ಪೋಸ್ಟ್ ಮೈಮುಲ್ ಉಪ ಕಚೇರಿ ಪಕ್ಕದಲ್ಲಿ ಸಹಕಾರ ಭವನ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದೆ. ಎಲ್ಲಾ ಸಂಘಗಳಿಗೂ ಸಮರ್ಪಕವಾಗಿ ಅನುದಾನ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ’ ಎಂದರು.
ಉತ್ತಮ ಸಹಕಾರ ಸಂಘಗಳಾದ ಗೊಲ್ಲನಬೀಡು, ಚೊಕ್ಕಡನಹಳ್ಳಿ, ಬಿ.ಮಟಕೆರೆ, ಗಿರಿಜನ ಮೀನುಗಾರಿಕೆ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯನಿರ್ವಾಹಣಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಕೆಐಸಿಎಂ ಉಪನ್ಯಾಸಕ ಎಸ್.ಮಹದೇವಪ್ಪ ‘ಸಹಕಾರ ಶಿಕ್ಷಣ ಹಾಗೂ ತರಬೇತಿಯ ಪರಿಷ್ಕರಣೆ’ಕುರಿತು ಮಾತನಾಡಿದರು.
ಮೈಮುಲ್ ಉಪಾಧ್ಯಕ್ಷ ಬಿ.ಎನ್.ಸದಾನಂದ, ನಿರ್ದೇಶಕರಾದ, ದ್ರಾಕ್ಷಾಯಿಣಿ ಬಸವರಾಜಪ್ಪ, ಲ್ಯಾಂಪ್ಸ್ ಸಹಕಾರ ಮಹಾಮಂಡಳದ ನಿರ್ದೇಶಕ ಡಿ.ಕಾವೇರ, ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬಸವರಾಜಪ್ಪ, ವಿಎಸ್‌ಎಸ್‌ನ ಅಧ್ಯಕ್ಷ ಬಸವರಾಜು, ಬಿಡುಗಲು ಡೇರಿ ಅಧ್ಯಕ್ಷ ಬಿ.ಆರ್.ರಾಮರಾಜೇ ಅರಸ್, ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ವಿಜಯಕುಮಾರ್, ವ್ಯವಸ್ಥಾಪಕ ದಿವಾಕರ್, ಎಂಸಿಡಿಸಿಸಿ ಬ್ಯಾಂಕ್‌ನ ಸಿಒ ಎ.ಎಸ್.ವಿನೋದ್‌ಕುಮಾರ್, ವ್ಯವಸ್ಥಾಪಕ ಪಿ.ಎಸ್.ಹರೀಶ್, ಸಣ್ಣತಮ್ಮೇಗೌಡ, ಹಿರಿಯ ವಿಸ್ತರಣಾಧಿಕಾರಿ ಅರೀಫ್ ಇಕ್ಬಾಲ್, ರಾಮಪ್ಪ ಬಾರ್ಕಿ, ಜಯಂತ್‌ಕುಮಾರ್, ಯೋಗೇಶ್, ಜಗದಾಂಬ, ಕಾಂಗ್ರೆಸ್ ಮುಖಂಡ ಎಂ.ಎನ್.ಅಣ್ಣಯ್ಯಸ್ವಾಮಿ, ಪಿ.ರವಿ, ಶಂಭುಲಿಂಗನಾಯಕ, ನಾಗರಾಜರಾಮ, ಬಿ.ಸಿ.ಬಸಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.