ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ |ಕಲಿಸಿದ ಗುರುಗಳ ಸೇವೆಗಾಗಿ ಬಂದಿರುವೆ: ಕೆ.ವಿವೇಕಾನಂದ

Published : 27 ಮೇ 2024, 6:00 IST
Last Updated : 27 ಮೇ 2024, 6:00 IST
ಫಾಲೋ ಮಾಡಿ
Comments
ಪ್ರ

ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದೀರಿ, ಮತದಾರರ ಪ್ರತಿಕ್ರಿಯೆ ಹೇಗಿದೆ?

ನಾಲ್ಕು ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಮತದಾರರನ್ನು ಭೇಟಿಯಾಗಿ ಬೆಂಬಲ ಕೋರುತ್ತಿದ್ದೇನೆ. ಅವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಂದು ವರ್ಷದಿಂದಲೂ ಶಿಕ್ಷಕರ ಒಡನಾಟದಲ್ಲಿದ್ದೆ. ವರಿಷ್ಠರು ನನಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಕ್ರಿಯಾಶೀಲವಾಗಿ ಪ್ರಚಾರ ಮಾಡುತ್ತಿದ್ದೇನೆ. ಸಮಯ ಕಡಿಮೆ ಇರುವುದರಿಂದ ವ್ಯಾಪಕವಾಗಿ ಪ್ರವಾಸ ಕೈಗೊಂಡು ಮತದಾರರನ್ನು ತಲುಪಲು ಪ್ರಯತ್ನಿಸುತ್ತಿದ್ದೇನೆ.

ಪ್ರ

ರಿಯಲ್‌ ಎಸ್ಟೇಟ್‌ ಉದ್ಯಮಿಯಾದ ನೀವು, ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಣಕ್ಕಿಳಿದ ಉದ್ದೇಶವೇನು?

ನಮ್ಮದು ಪ್ರಜಾಪ್ರಭುತ್ವ ದೇಶ. ಸ್ಪರ್ಧಿಸಲು ಎಲ್ಲರಿಗೂ ಅವಕಾಶವಿದೆ. ವಿದ್ಯೆ ನೀಡಿದ, ನೀಡುತ್ತಿರುವ ಗುರುಗಳ ಸೇವೆ  ಮಾಡುವ ಹಂಬಲದಿಂದ ಈ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಎನ್‌ಡಿಎ ಅಭ್ಯರ್ಥಿಯಾಗಿರುವ ನನಗೆ ಎರಡೂ ಪಕ್ಷಗಳ ನಾಯಕರೂ ಬೆಂಬಲ ಕೊಡುತ್ತಿದ್ದಾರೆ. ನಾನು ರಿಯಲ್‌ ಎಸ್ಟೇಟ್ ಉದ್ಯಮಿಯಾಗುವ ಮುನ್ನ ಮೈಸೂರಿನ ವಿಕ್ರಾಂತ್ ಕಾರ್ಖಾನೆಯಲ್ಲಿ 15 ವರ್ಷಗಳವರೆಗೆ ಕೆಲಸ ಮಾಡಿದ್ದೇನೆ. ಮಂಡ್ಯ ಜಿಲ್ಲೆಯ ಕೊಪ್ಪ ಸಮೀಪದ ಅವ್ವೇರಹಳ್ಳಿಯ ಸಾಮಾನ್ಯ ರೈತ ಕುಟುಂಬದಿಂದ ಬಂದವನು ನಾನು. ಉದ್ಯೋಗ ಅರಸಿ ಮೈಸೂರಿಗೆ ಬಂದೆ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಆದರೆ, ಶಿಕ್ಷಕರ ಸೇವೆ ಮಾಡುವ ಮನಸ್ಸಿದೆ. ಆದ್ದರಿಂದ ಸ್ಪರ್ಧಿಸಿರುವೆ.

ಪ್ರ

ಟಿಕೆಟ್‌ ಹಂಚಿಕೆ ವಿಷಯದಲ್ಲಿ ಗೊಂದಲ ಉಂಟಾಯ್ತಲ್ಲಾ?

ಎಲ್ಲವೂ ಬಗೆಹರಿದಿದೆ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆ.ಟಿ. ಶ್ರೀಕಂಠೇಗೌಡರು ನಮ್ಮ ಗುರುಗಳು. ನಾವಿಬ್ಬರೂ ಅಕ್ಕಪಕ್ಕದ ಊರಿನವರು. ಬಿಜೆಪಿಯವರು ಕೂಡ ಬೆಂಬಲ ನೀಡುತ್ತಿದ್ದಾರೆ. ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಈ.ಸಿ. ನಿಂಗರಾಜ್‌ ಗೌಡ ಅವರು ನಾಮಪತ್ರ ವಾಪಸ್ ಪಡೆದು ನನಗೆ ಬೆಂಬಲ ಘೋಷಿಸಿದ್ದಾರೆ. ನಾಯಕರು ಸಮನ್ವಯ ಸಭೆ ನಡೆಸಿ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಿದ್ದಾರೆ. ಶ್ರೀಕಂಠೇಗೌಡರು ಕೂಡ ನನ್ನ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

ಪ್ರ

ನಿಮ್ಮ ಪಕ್ಷದ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಚುನಾವಣೆ ಮೇಲೆ ಪರಿಣಾಮ ಬೀರುವುದೇ?

ಯಾವ ಪರಿಣಾಮವನ್ನೂ ಬೀರುವುದಿಲ್ಲ.

ಪ್ರ

ಮತದಾರರು ನಿಮಗೇ ಏಕೆ ಮತ ಹಾಕಬೇಕು?

ಸೇವೆ ಮಾಡಲು ಒಂದು ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದೇನೆ. ಆಯ್ಕೆಯಾದಲ್ಲಿ ನನಗೆ ಬರುವ ಗೌರವಧನವನ್ನು ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿ ಎಂದು ಮಾಡಿ ಅದರಲ್ಲಿಡುತ್ತೇನೆ. ಅಗತ್ಯ ಇರುವ ಶಿಕ್ಷಕರಿಗೆ ಆ ಹಣವನ್ನು ಕೊಡುವಂತಹ ಕೆಲಸ ಮಾಡಲಿದ್ದೇನೆ. ಶಾಲೆಗಳು ಕಾಲೇಜುಗಳ ಅಭಿವೃದ್ಧಿಗೆ ಒದಗಿಸುವ ಉದ್ದೇಶ ಹೊಂದಿದ್ದೇನೆ. ಪ್ರಚಾರದ ಸಂದರ್ಭದಲ್ಲಿ ಇದೆಲ್ಲವನ್ನೂ ತಿಳಿಸುತ್ತಿದ್ದೇನೆ.

ಪ್ರ

* ಶಿಕ್ಷಣ ಕ್ಷೇತ್ರ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಅರಿವಿದೆಯೇ?

ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಕೆಲವು ಸಮಸ್ಯೆಗಳನ್ನು ಶಿಕ್ಷಕರು ಹೇಳಿಕೊಳ್ಳುತ್ತಿದ್ದಾರೆ. ಚುನಾವಣೆಯಲ್ಲಿ ಮತದಾರರು ನನಗೆ ಆಶೀರ್ವಾದ ಮಾಡಿ ಗೆಲ್ಲಿಸಿದರೆ ಕ್ಷೇತ್ರದ ನಾಲ್ಕೂ ಜಿಲ್ಲೆಗಳ ಶಿಕ್ಷಕರು ಉಪನ್ಯಾಸಕರು ಮೊದಲಾದ ಸಂಘಟನೆಗಳ ಎಲ್ಲ ಹಂತದ ಪದಾಧಿಕಾರಿಗಳನ್ನೂ ಆಹ್ವಾನಿಸಿ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಅವುಗಳನ್ನು ಪರಿಹರಿಸಲು ಸಿದ್ಧವಾಗಿದ್ದೇನೆ. ಸದನದ ಹೊರಗೆ ಅಥವಾ ಒಳಗೆ ಹೋರಾಟ ಮಾಡುತ್ತೇನೆ. ನಮ್ಮ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮುನ್ನಡೆಯುತ್ತೇನೆ.

ಪ್ರ

ನಿಮ್ಮ ಪ್ರತಿಸ್ಪರ್ಧಿ ಯಾರು?

ಕಾಂಗ್ರೆಸ್‌ ಅಭ್ಯರ್ಥಿ ಮರಿತಿಬ್ಬೇಗೌಡ ನನ್ನ ಪ್ರತಿಸ್ಪರ್ಧಿ. ನಾವು ನಮ್ಮ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದೇವೆ. ಅವಕಾಶ ಕೇಳುತ್ತಿದ್ದೇವೆ. 20 ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಎಚ್.ಡಿ. ದೇವೇಗೌಡ ಎಚ್‌.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇನೆ. ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದು ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡುತ್ತಾರೆನ್ನುವ ವಿಶ್ವಾಸವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT