ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ: ಕಣದಲ್ಲಿ ಮಾಜಿ ಶಾಸಕರು, ನಿವೃತ್ತ ಡಿಡಿಪಿಯು

Published : 23 ಮೇ 2024, 8:16 IST
Last Updated : 23 ಮೇ 2024, 8:16 IST
ಫಾಲೋ ಮಾಡಿ
Comments
ಕಣದಲ್ಲಿ ಒಟ್ಟು 11 ಮಂದಿ ಹಾಸನ ಜಿಲ್ಲೆಯವರು ಒಬ್ಬರೂ ಇಲ್ಲ ಜೂನ್‌ 3ರಂದು 4 ಜಿಲ್ಲೆಗಳಲ್ಲೂ ಚುನಾವಣೆ
ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯ ವಿವೇಕಾನಂದ ಶ್ರೀಮಂತ ಅಭ್ಯರ್ಥಿ ‌
ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿವೇಕಾನಂದ ರಿಯಲ್ ಎಸ್ಟೇಟ್ ಉದ್ಯಮಿ. 47 ವರ್ಷ ವಯಸ್ಸಿನ ಅವರು ಮೂಲತಃ ಮಂಡ್ಯದವರು. ಮೈಸೂರಿನಲ್ಲಿ ವಾಸವಿದ್ದಾರೆ. ಅವರು ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ ಕಣದಲ್ಲಿರುವ ಶ್ರೀಮಂತ ಅಭ್ಯರ್ಥಿಯೂ ಹೌದು (ಅವರ ಕುಟುಂಬದ ಒಟ್ಟು ಆಸ್ತಿ ₹124.65 ಕೋಟಿ). 10ನೇ ತರಗತಿ ವಿದ್ಯಾರ್ಹತೆಯ ಅವರು ವ್ಯಾಪಾರವೇ ನನ್ನ ಆದಾಯದ ಮೂಲ ಎಂದು ಘೋಷಿಸಿದ್ದಾರೆ.
ಮರಿತಿಬ್ಬೇಗೌಡ ಎಂಎ ಪದವೀಧರ
ಕಾಂಗ್ರೆಸ್‌ ಅಭ್ಯರ್ಥಿ ಮರಿತಿಬ್ಬೇಗೌಡ ವಿಧಾನಪರಿಷತ್ ಮಾಜಿ ಸದಸ್ಯ ಉಪ ಸಭಾಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮೊದಲಿಗೆ ಕಾಂಗ್ರೆಸ್ ನಂತರ ಪಕ್ಷೇತರ ಹಾಗೂ ಮತ್ತೆರಡು ಬಾರಿ ಜೆಡಿಎಸ್‌ನಿಂದ ಸೇರಿ ಒಟ್ಟು 4 ಬಾರಿ ಈ ಕ್ಷೇತ್ರದಿಂದಲೇ ಗೆದ್ದವರು. ಸತತ 5ನೇ ಬಾರಿಗೆ ಆಯ್ಕೆ ಬಯಸಿದ್ದಾರೆ. 65 ವರ್ಷ ವಯಸ್ಸಿನ ಅವರು ಮಂಡ್ಯ ಮೂಲದವರು; ಪ್ರಸ್ತುತ ಮೈಸೂರಿನ ನಿವಾಸಿಯಾಗಿದ್ದಾರೆ. ಕೃಷಿ ಮತ್ತು ಸಮಾಜಸೇವೆಯೇ ತಮ್ಮ ಉದ್ಯೋಗ ಎಂದು ತಿಳಿಸಿದ್ದಾರೆ. ಕೃಷಿ ಹಾಗೂ ವಿಧಾನಪರಿಷತ್‌ ಸದಸ್ಯ ಆಗಿದ್ದಾಗಿನ ಸಂಬಳವೇ ಆದಾಯದ ಮೂಲ ಎಂದು ಪ್ರಮಾಣಪತ್ರ ನೀಡಿದ್ದಾರೆ. ಅವರು ಎಂಎ (ಇತಿಹಾಸ) ‍ಪದವೀಧರ.
ಫಲಿತಾಂಶಕ್ಕೆ ಮುನ್ನವೇ ಮತ್ತೊಮ್ಮೆ ಸ್ಪರ್ಧೆ!
ಪಕ್ಷೇತರ ಅಭ್ಯರ್ಥಿ ಎನ್.ಅಂಬರೀಷ್ ಚಾಮರಾಜನಗರ ತಾಲ್ಲೂಕಿನ ದೊಡ್ಡರಾಯಪೇಟೆ ಗ್ರಾಮದವರು. 38 ವರ್ಷದ ಅವರು ಪತ್ರಕರ್ತ ಮತ್ತು ಸಮಾಜಸೇವಕ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಪತ್ರಿಕಾ ವೃತ್ತಿ ಹಾಗೂ ಚಿಲ್ಲರೆ ವ್ಯಾಪಾರ ಆದಾಯದ ಮೂಲ ಎಂದು ಹೇಳಿಕೊಂಡಿದ್ದಾರೆ. ಜೆಒಸಿ ವಿದ್ಯಾರ್ಹತೆಯ ಅವರು ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಈ ನಡುವೆ ಮತ್ತೊಂದು ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ.
ನಿವೃತ್ತಿ ನಂತರ...
ಪಕ್ಷೇತರರಾಗಿ ಸ್ಪರ್ಧಿಸಿರುವ ನಾಗಮಲ್ಲೇಶ್ ಮೈಸೂರಿನವರು. ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. 61 ವರ್ಷ ವಯಸ್ಸಿನ ಅವರಿಗೆ 16 ವರ್ಷ ಬೋಧನೆ ಮಾಡಿದ ಅನುಭವವೂ ಇದೆ. ಪಿಂಚಣಿ ತಮ್ಮ ಅದಾಯದ ಮೂಲ ಎಂದು ತಿಳಿಸಿದ್ದಾರೆ. ಎಂಎಸ್ಸಿ (ಬಾಟನಿ) ಎಂಫಿಲ್‌ (ಬೀಜ ತಂತ್ರಜ್ಞಾನ) ಪದವೀಧರ.
ಕನ್ನಡಪರ ಹೋರಾಟಗಾರ
ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. 75 ವರ್ಷ ವಯಸ್ಸಿನ ಅವರು ಬೆಂಗಳೂರಿನ ಹೆಬ್ಬಾಳ ವ್ಯಾಪ್ತಿಯ ನಿವಾಸಿ ಎಂದು ತಿಳಿಸಿದ್ದಾರೆ. ಸಮಾಜಸೇವೆಯೇ ವೃತ್ತಿ ಎಂದು ತಿಳಿಸಿರುವ ಅವರು ಪಿಂಚಣಿ ಹಾಗೂ ಕೃಷಿಯಿಂದ ಆದಾಯ ಬರುತ್ತಿದೆ ಎಂದು ಹೇಳಿದ್ದಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯ ಅವರು ಮಾಜಿ ಶಾಸಕರೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT